ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ’ಕ್ರೀಡಾ ಮೈತ್ರಿ 2023’ ಪಂದ್ಯಾಟಕ್ಕೆ ಚಾಲನೆ

0

ವಿದ್ಯಾರ್ಥಿಗಳು ಅವಕಾಶಗಳನ್ನು ವಿಸ್ತರಿಸಿಕೊಳ್ಳಬೇಕು : ಡಾ.ಎಚ್.ಮಾಧವ ಭಟ್


ಪುತ್ತೂರು: ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಯಾಗಿ ಬಂದವರು ತಮ್ಮ ಅವಕಾಶಗಳನ್ನು ಬಹುಮುಖಿಯಾಗಿ ವಿಸ್ತರಿಸಿಕೊಳ್ಳಬೇಕು. ಹಾಗಾದಾಗ ಶಿಕ್ಷಣ ಎನ್ನುವುದು ಪರಿಪೂರ್ಣವಾಗುವುದಕ್ಕೆ ಸಾಧ್ಯ. ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗುವುದು ಆ ನೆಲೆಯಲ್ಲಿ ಅತ್ಯಂತ ಅಗತ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾಟ – ಕ್ರೀಡಾಮೈತ್ರಿ 2023 ಅನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕಷ್ಟೇ ಮೀಸಲು ಎಂಬ ಭಾವನೆ ಅನೇಕರಲ್ಲಿದೆ. ಅದರಿಂದಾಗಿ ವಿದ್ಯಾರ್ಥಿಗಳೊಳಗಿನ ಪ್ರತಿಭೆ ಹೊರಜಗತ್ತಿಗೆ ಕಾಣಿಸದೇ ಉಳಿಯುತ್ತದೆ. ಆಧುನಿಕ ಸೌಲಭ್ಯಗಳು ನಮ್ಮನ್ನು ದೈಹಿಕ ಚಟುವಟಿಕೆಗಳಿಂದ ದೂರ ಮಾಡುತ್ತಿವೆ. ವಾಹನ ಇಳಿದ ನಂತರ ತುಸು ನಡೆಯುವುದೇ ದೇಹಕ್ಕೆ ಸಿಗುವ ಚಟುವಟಿಕೆ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಮುಂದೆ ನಿಂತು ಕ್ರೀಡಾ ಕಾರ್ಯಕ್ರಮ ಆಯೋಜನೆ ಮಾಡುವುದು ಅತ್ಯಂತ ಸ್ವಾಗತಾರ್ಹ ಎನಿಸುತ್ತದೆ ಎಂದರು.


ಕಲಿಕೆಯಲ್ಲಿ ಸುಖ ಇದೆ ಎನ್ನುವುದು ಅರ್ಥವಾಗಬೇಕಾದರೆ ಪಠ್ಯೇತರ ಚಟುವಟಿಕೆಗಳೂ ಜತೆಗೂಡಿರಬೇಕು. ಕ್ರೀಡೆಯಲ್ಲಿ ಭಾಗವಹಿಸುವುದು ಸಾಧ್ಯವಾಗದಿದ್ದರೂ ಅದನ್ನು ಅನುಭವಿಸುವ ಮನಃಸ್ಥಿತಿಯನ್ನಾದರೂ ಬೆಳೆಸಿಕೊಳ್ಳಬೇಕು. ಅನೇಕ ಮಕ್ಕಳು ಪತ್ರಿಕೆಯಲ್ಲಿ ಮೊದಲು ಕ್ರೀಡಾಪುಟವನ್ನೇ ತೆರೆಯುವುದಿದೆ. ಆದರೆ ಕೆಲವು ಹೆತ್ತವರು ಮಕ್ಕಳ ಈ ಆಸಕ್ತಿಯನ್ನು ತಪ್ಪಾಗಿ ಭಾವಿಸಿ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂಬಂತೆ ಆಘಾತ ವ್ಯಕ್ತಪಡಿಸುವುದಿದೆ. ಆದ್ದರಿಂದ ಹೆತ್ತವರ ದೃಷ್ಟಿಕೋನದಲ್ಲಿ ಬದಲಾವಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.


ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಚೈತನ್ಯಾ ಸಿ ಸ್ವಾಗತಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರಿಯಾಲ್ ಆಳ್ವಾ ವಂದಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ಅಂಕಿತಾ ಆಟಿಕುಕ್ಕೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ.ಎಚ್.ಮಾಧವ ಭಟ್ ಪ್ರಶಸ್ತಿಗಳನ್ನು ಅನಾವರಣಗೊಳಿಸಿ ವಾಲಿಬಾಲ್ ಚೆಂಡನ್ನೆಸುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here