ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಘ : ರಾಮದಾಸ ಗೌಡ
ಪುತ್ತೂರು: ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ. ಶಾರೀರಿಕ, ಮಾನಸಿಕ, ಭಾವನಾತ್ಮಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಆಟೋಟಗಳು ಅತಿ ಅವಶ್ಯಕ. ದೈಹಿಕ ಸ್ವಾಸ್ಥ್ಯ ಸರಿ ಇದ್ದರೆ ಮಾತ್ರ ಸುಖದಾಯಿ ಜೀವನ ಸಾಧ್ಯ. ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಗಳಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಅಧೀಕ್ಷಕ (ಹಿರಿಯ ಶ್ರೇಣಿ) ರಾಮದಾಸ ಗೌಡ ಎಸ್. ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಮತ್ತು ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆಯ 2023 -24 ರ ವಾರ್ಷಿಕ ಕ್ರೀಡಾಕೂಟವನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಸುಂದರ ಪ್ರಕೃತಿ, ನೈಸರ್ಗಿಕ ಸಂಪತ್ತು ನಮ್ಮ ದೇಶದಲ್ಲಿ ಬೇಕಾದಷ್ಟಿದೆ. ಭಾರತದ ಕೊಡುಗೆಯಾದ ಯೋಗ ಈಗ ವಿಶ್ವ ವ್ಯಾಪಿಯಾಗಿದೆ. ಮುಂಬರುವ ವರ್ಷಗಳಲ್ಲಿ ಭಾರತ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಸಂದರ್ಭದಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಮಿಂಚುವಂತಾಗಲಿ. ಬದುಕಿನಲ್ಲಿ ನಿರ್ದಿಷ್ಟ ಗುರಿಯಿರಬೇಕು ಹಾಗೂ ಮೌಲ್ಯಾಧಾರಿತ ಜೀವನ ನಮ್ಮದಾಗಿರಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ರಾಜಸ್ಥಾನದ ಮರುಭೂಮಿಯಲ್ಲಿ 50-52 ಡಿಗ್ರಿ ಸುಡು ಬಿಸಿಲಿನ ಝಳಕ್ಕೆ ಮೈಯೊಡ್ಡಿ ವರ್ಷಪೂರ್ತಿ ದೇಶ ರಕ್ಷಣೆ ಮಾಡುವ ಸೈನಿಕರ ಮುಂದೆ ಕ್ರೀಡಾಂಗಣದಲ್ಲಿನ ಒಂದು ದಿನದ ಬಿಸಿಲು ದೊಡ್ಡ ವಿಚಾರವಲ್ಲ. ದೈಹಿಕವಾಗಿ ಸಬಲರಾಗಲು, ಸ್ವಾಸ್ಥ್ಯ ಸಂವರ್ಧನೆಗೆ, ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅಗತ್ಯ ಎಂದರು.
ಭಾಸ್ಕರ , ಕಣಾದ , ಸುಶ್ರುತ, ಪಾಣಿನಿ, ಕೌಟಿಲ್ಯ, ಆರ್ಯಭಟ, ಪತಂಜಲಿ, ಕಪಿಲ, ಚರಕ, ನಳಂದ, ಮೈತ್ರೇಯಿ ವಿದ್ಯಾರ್ಥಿ ತಂಡಗಳು ಶಿಸ್ತು ಬದ್ಧವಾಗಿ ಪಥಸಂಚಲನದ ಮೂಲಕ ಅತಿಥಿಗಳಿಗೆ ಗೌರವ ಸಲ್ಲಿಸಿದವು.. ಕಾಮನ್ವೆಲ್ತ್ ಲೈಫು ಸೇವಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ, ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತ ಧನ್ವಿತ್ ಕ್ರೀಡಾ ಜ್ಯೋತಿ ತರುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಕ್ರೀಡಾ ಸಾಧಕರಾದ ಸಂಸ್ಕೃತಿ, ಮೇಘನ, ಶ್ರದ್ಧಾ ಲಕ್ಷ್ಮಿ, ಅನಿಕೇತ್ ಸಹಕರಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು, ಉಪನ್ಯಾಸಕಿ ಗೀತಾ ಸಿ ಕೆ ಅತಿಥಿಗಳನ್ನು ಪರಿಚಯಿಸಿದರು, ಬಪ್ಪಳಿಗೆಯ ಅಂಬಿಕಾ ವಸತಿಯುತ ಕಾಲೇಜಿನ ಪ್ರಾಚಾರ್ಯೆ ಸುಚಿತ್ರ ಪ್ರಭು ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯ ಮತ್ತು ಅಲಕಾ ಪ್ರಾರ್ಥಿಸಿದರು. ಬಪ್ಪಳಿಗೆ ಸಂಸ್ಥೆಯ ಉಪ ಪ್ರಾಚಾರ್ಯ ಗಣೇಶ್ ಪ್ರಸಾದ್ ವಂದಿಸಿದರು. ಉಪನ್ಯಾಸಕಿ ಅಪರ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.