ಚಾರ್ವಾಕದ ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ-ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ದಲಿತ ಸಂಘ ಆಗ್ರಹ

0

ಕಡಬ: ಚಾರ್ವಾಕ ಗ್ರಾಮದ ದಲಿತ ಯುವಕನಿಗೆ ಹಲ್ಲೆ, ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ಬೈದಿರುವ ಬಗ್ಗೆ 5 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಕೇವಲ ಒಬ್ಬ ಆರೋಪಿಯನ್ನು ಬಂಧಿಸಿ ಉಳಿದ ಆರೋಪಿಗಳನ್ನು ಬಂಧಿಸದೇ ಇರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅಗ್ರಹಿಸಿದ್ದಾರೆ.

ಡಿ.28 ರಂದು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡಬ ತಾಲೂಕು ಚಾರ್ವಾಕ ಗ್ರಾಮದ ದಲಿತ ಯುವಕ ಮನೋಹರ (24) ಎಂಬವರಿಗೆ ಡಿ.7ರಂದು ಅವರ ಮನೆಯ ಅಂಗಳಕ್ಕೆ ಬಂದ 5 ಜನರ ತಂಡ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದೆ. ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಉದನಡ್ಕ, ರಾಧಾಕೃಷ್ಣ ಮುದ್ವ, ಅಖಿಲ್ ಬೊಮ್ಮಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಓರ್ವ ಆರೋಪಿ ಅಖಿಲ್ ಬೋಮ್ಮಳಿಕೆಯನ್ನು ಕಡಬ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಈ ತನಕ ಬಂಧಿಸಿರುವುದಿಲ್ಲ. ಕಡಬದ ಹೊಸಮಠದಲ್ಲಿ ಡಿ.26ರಂದು ಜರಗಿದ ಗೌಡ ಸಮುದಾಯ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆರೋಪಿಗಳು ರಾಜಾರೋಷವಾಗಿ ಭಾಗವಹಿಸಿದ್ದರು. ಈ ಬಗ್ಗೆ ದ.ಕ. ಜಿಲ್ಲಾ ಎಸ್.ಪಿ.ಯವರನ್ನು ದಲಿತ ಮುಖಂಡರು ಮುಖತಃ ಭೇಟಿಯಾಗಿ ವಿಷಯವನ್ನು ತಿಳಿಸಿದ್ದರೂ ಕೂಡ ಈ ತನಕ ಆರೋಪಿಗಳನ್ನು ಬಂಧಿಸಿರುವುದಿಲ್ಲ. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ಕಡಬ ಪೋಲಿಸ್ ಠಾಣಾ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಆನಂದ ಬೆಳ್ಳಾರೆ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಆನಂದ ಕೆ.ಪಿ.ಪಡುಬೆಟ್ಟು ನೆಲ್ಯಾಡಿ, ವಸಂತ ಕುಬಲಾಡಿ, ಅಚ್ಚುತ ಮಲ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here