ನೆಲ್ಯಾಡಿ: ಕಾಡಾನೆಯೊಂದು ಹೆದ್ದಾರಿಯಲ್ಲಿ ಸಂಚರಿಸಿ ಜನರನ್ನು ಭಯಭೀತಗೊಳಿಸಿದ ಘಟನೆ ಜ.8ರಂದು ಸಂಜೆ ಶಿರಾಡಿ ಗ್ರಾಮದ ಉದನೆಯಲ್ಲಿ ನಡೆದಿದೆ.
ಉದನೆ ಪೇಟೆ ಸಮೀಪ ಗುಂಡ್ಯ ಹೊಳೆಬದಿಯಿಂದ ಬಂದ ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿ ದಾಟಿ ಅರಣ್ಯ ಪ್ರದೇಶಕ್ಕೆ ತೆರಳಿದೆ. ಸಂಜೆ ವೇಳೆಗೆ ಕಾಡಾನೆ ಹೆದ್ದಾರಿಗೆ ಬಂದಿರುವುದು ಜನರನ್ನು ಭಯಭೀತಗೊಳಿಸಿದೆ. ಕಾಡಾನೆ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಕೆಲ ದಿನಗಳಿಂದ ಶಿರಾಡಿ ಗ್ರಾಮದ ವಿವಿಧ ಕಡೆಗಳಲ್ಲಿ ಕಾಡಾನೆಗಳು ಜನರಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ, ತೆಂಗು ಸೇರಿದಂತೆ ಇತರೇ ಕೃಷಿ ಉತ್ಪನ್ನಗಳನ್ನು ಹಾನಿಗೊಳಿಸುತ್ತಿವೆ ಎಂದು ವರದಿಯಾಗಿದೆ.