ಫೆ.12 ಸಂವಿಧಾನ ಜಾಗೃತಿ ಜಾಥ ಪುತ್ತೂರಿಗೆ – ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಿದ್ದತಾ ಸಭೆ

0

ಕಬಕದಲ್ಲಿ ಸ್ವಾಗತ, ಪಂಚಾಯತ್ , ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು – ತಹಸೀಲ್ದಾರ್ ಪುರಂದರ ಹೆಗ್ಡೆ

ಪುತ್ತೂರು: ಜ.26ರ ಗಣರಾಜ್ಯೋತ್ಸವ ದಿನದಂದು ಆರಂಭಗೊಂಡಿರುವ ಸಂವಿಧಾನ ಜಾಥಾ ಸ್ಥಬ್ದಚಿತ್ರವು ಫೆ.12 ರಿಂದ 16ರ ತನಕ ಪುತ್ತೂರು ತಾಲೂಕಿನಲ್ಲಿ ಸಂಚರಿಸಲಿದ್ದು ಇದರ ಪೂರ್ವ ಸಿದ್ದತೆಯಾಗಿ ಫೆ.8ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಸೀಲ್ದಾರ್ ಪುರಂದರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು‌.ಸಂವಿಧಾನ ಜಾಥಾ ಸ್ತಬ್ದ ಚಿತ್ರಕ್ಕೆ ಜ.26 ರಂದು ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದರು.ಇದೀಗ ಸ್ತಬ್ದ ಚಿತ್ರವು ಫೆ.12ಕ್ಕೆ ಪುತ್ತೂರು ತಾಲೂಕಿಗೆ ಆಗಮಿಸಿ ಫೆ.16ರ ತನಕ ನಗರಸಭೆ, ಗ್ರಾ.ಪಂ ಗಳಲ್ಲಿ ಸಂಚರಿಸಲಿದೆ. ಫೆ.12ರಂದು ಕಬಕದಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ಸ್ವಾಗತಿಸಿ‌, ವಿವೇಕಾನಂದ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಗ್ರಾ.ಪಂ, ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು :
ಕಬಕದಲ್ಲಿ ಸ್ವಾಗತ, ಮುಂದೆ ಗ್ರಾ.ಪಂ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು. ಯಾವುದೇ ಸಂಶಯವಿದ್ದಲ್ಲಿ ನನ್ನ ಹಾಗೂ ಸಮಾಜ‌ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಬಿಇಒ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿ, ಕಾರ್ಯಕ್ರಮದಲ್ಲಿ ಎಲ್ಲೂ ಲೋಪ ಬರಬಾರದು, ಸಂವಿಧಾನ ಗೌರವ ಕಾಪಾಡಬೇಕೆಂದ ಅವರು ಜಾಥಾ ಸ್ತಬ್ದ ಚಿತ್ರಕ್ಕೆ ಸೂಕ್ತ ಭದ್ರತೆ ನೀಡುವ ಮತ್ತು ಅಲ್ಲಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವಂತೆ ತಿಳಿಸಿದರು.


ಸಂಘ ಸಂಸ್ಥೆಗಳನ್ನು ಜೋಡಿಸಿಕೊಳ್ಳಿ:
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ‌ ನಿರ್ದೆಶಕ ಮೋಹನ್ ಕುಮಾರ್ ಕಾರ್ಯಕ್ರಮದ ರೂಪುರೇಶೆ ಮಾಹಿತಿ‌ ನೀಡಿದರು. ಕಬಕದಲ್ಲಿ ಬೆಳಗ್ಗೆ ಸಂವಿಧಾನ ಸ್ತಬ್ದ ಚಿತ್ರವನ್ನು ಸ್ಬಾಗತಿಸಿದ ಬಳಿಕ ವಿವೇಕಾನಂದ ಕಾಲೇಜಿನಲ್ಲಿ‌ ಕಾರ್ಯಕ್ರಮ ನಡೆಯಲಿದೆ. ಗ್ರಾ.ಪಂ ಗಡಿಯಲ್ಲಿ ಅಧ್ಯಕ್ಷರು, ಪಿಡಿಒ ಸದಸ್ಯರು ಸ್ವಾಗತಿಸಿ, ಮುಂದಿನ ಗ್ರಾ.ಪಂ ಗಡಿಯ ತನಕ ಬಿಡುವ ಜವಾಬ್ದಾರಿ ಆಯಾ ಗ್ರಾ.ಪಂ ವಹಿಸಬೇಕು. ಸ್ತಬ್ದ ಚಿತ್ರದೊಂದಿಗೆ‌ ಕಲಾ ತಂಡವಿದ್ದು ಅಲ್ಲಲ್ಲಿ ಕಾರ್ಯಕ್ರಮ ನೀಡಲಾಗುತ್ತದೆ. ಪಂಚಾಯತ್ ಗಳಿಗೆ ರೂ.10ಸಾವಿರ ಹಣವನ್ನು ಕಾರ್ಯಕ್ರಮದ ಖರ್ಚಿಗೆ ಭರಿಸಲು ಅವಕಾಶವಿದೆ. ಅಂಬೇಡ್ಕರ್ ಭಾವಚಿತ್ರ ಇಟ್ಟು ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಆರಂಭಿಸಬೇಕು.


ಸಂವಿಧಾನದ ಪಿಠೀಕೆಯನ್ನು ಓದಬೇಕು, ಗ್ರಾ.ಪಂ ವ್ಯಾಪ್ತಿಯಲ್ಲಿ ಬ್ಯಾನರ್ ವ್ಯವಸ್ಥೆ , ಲಘು ಉಪಹಾರ :
ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಅರಿವು ಮೂಡಿಸಬೇಕು.ಆ ವ್ಯಾಪ್ತಿಯ ಅಂಬೇಡ್ಕರ್, ಯುವಕ ಸಂಘ ಸಂಸ್ಥೆಗಳನ್ನು ಜೊತೆಗೂಡಿಸಬೇಕು. ಆಶು ಭಾಷಣ ಸ್ಪರ್ಧೆ ಮಾಡಿ ಬಹುಮಾನ ಕೊಡುವ ಕೆಲಸ ಆಗಬೇಕು. ಬೈಕ್ ಸೈಕಲ್ ರ‍್ಯಾಲಿ ಮಾಡುವುದಾದರೆ ಮಾಡಬಹುದು.

ಫೆ. 12ಕ್ಕೆ ಶಾಸಕರ ಕಚೇರಿ ವಠಾರದಲ್ಲಿ ಉಪನ್ಯಾಸ:
ನಗರಸಭೆ ಪೌರಾಯುಕ್ತ ಮಧು ಎಸ್ ಮಾತನಾಡಿ, ನಗರಸಭೆ ಬಲ್ನಾಡು ಮೂಲಕ ಸಂವಿಧಾನ ಸ್ತಬ್ದ ಚಿತ್ರ ಬರಲಿದ್ದು, ಪುತ್ತೂರು ಶಾಸಕರ ಕಚೇರಿ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಿಡಿಒ ಮತ್ತು ಸಿಆರ್ ಪಿಗಳು ಸಮನ್ವಯದಿಂದ ಕಾರ್ಯಕ್ರಮ ಚೆನ್ನಾಗಿ ಜೋಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ತಿಳಿಸಿದರು. ಗ್ರಾ‌.ಪಂ ಮಟ್ಟದಲ್ಲಿ ಕಾರ್ಯಕ್ರಮ ಕುರಿತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದರು‌. ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರಾದ ಮುದ್ದ, ಶೇಷಪ್ಪ ನೆಕ್ಕಿಲು, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ್, ಮಾನವ ಬಂದುತ್ವ ವೇದಿಕೆ ಅಧ್ಯಕ್ಷ ಮಹಾಲಿಂಗ ನಾಯ್ಕ್, ನಗರಸಭೆ ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ ಸಲಹೆ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಕೃಷ್ಣ ನಾಯ್ಕ್ ಕಾರ್ಯಕ್ರಮ‌ ನಿರೂಪಿಸಿದರು. ಸಭೆಯಲ್ಲಿ ಗ್ರಾ.ಪಂ ಪಿಡಿಒಗಳು, ಶಿಕ್ಷಣ ಇಲಾಖೆಯ ಸಿ ಆರ್ ಪಿಗಳು ಉಪಸ್ಥಿತರಿದ್ದರು.

ಸ್ತಬ್ದ ಚಿತ್ರ ಎಲ್ಲೆಲ್ಲಿ ಸಂಚರಿಸಲಿದೆ:
ಫೆ.12ಕ್ಕೆ ಕಬಕ, ನೆಹರುನಗರ ವಿವೇಕಾನಂದ ಕಾಲೇಜು, ಕುಡಿಪ್ಪಾಡಿ, ಬಲ್ನಾಡು, ಪುತ್ತೂರು ನಗರಸಭೆ, ಶಾಸಕರ ಕಚೇರಿ ವಠಾರ, ಆರ್ಯಾಪು, ಫೆ.13 ಕ್ಕೆ ಬಜತ್ತೂರು, ಹಿರೇಬಂಡಾಡಿ, ಉಪ್ಪಿನಂಗಡಿ, 34 ನೆಕ್ಕಿಲಾಡಿ, ಕೋಡಿಂಬಾಡಿ, ಫೆ.14 ಕ್ಕೆ ಬನ್ನೂರು, ನರಿಮೊಗರು, ಮುಂಡೂರು, ಕೆಯ್ಯೂರು, ಫೆ.15 ಕ್ಕೆ ಕೆದಂಬಾಡಿ, ಒಳಮೊಗ್ರು, ಬೆಟ್ಟಂಪಾಡಿ, ಪಾಣಾಜೆ, ಫೆ.16 ಕ್ಕೆ ನಿಡ್ಪಳ್ಳಿ, ಬಡಗನ್ನೂರು, ಅರಿಯಡ್ಕ, ನೆಟ್ಟಣಿಗೆಮುಡ್ನೂರು, ಕೊಳ್ತಿಗೆಯಲ್ಲಿ ಸಂವಿಧಾನ ಸ್ತಬ್ದಚಿತ್ರ ಜಾಥಾ ಸಂಚರಿಸಲಿದೆ‌. ಜಾಥಾವು ಫೆ.18 ಕ್ಕೆ ಕಡಬ ತಾಲೂಕಿಗೆ ತೆರಳಲಿದೆ.

LEAVE A REPLY

Please enter your comment!
Please enter your name here