ಉಪ್ಪಿನಂಗಡಿ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ರಚಿತವಾದ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಹಾಗೂ 18 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಫೆ. 18ರಂದು ಉಪ್ಪಿನಂಗಡಿಯ ಪಂಜಳದ ಮಣಿಮಂಟಪ ಸಭಾಂಗಣದಲ್ಲಿ ನಡೆಸುವ ಬಗ್ಗೆ ನಿರ್ಧರಿಸಲಾಯಿತು.
ಈ ಬಗ್ಗೆ ನಡೆದ ನಿಯೋಜಿತ ಪದಾಧಿಕಾರಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು. ಸಂಜೆ 4 ಗಂಟೆಗೆ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತ ಕುಮಾರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ದತ್ತಿ ನಿಧಿ ಉಪನ್ಯಾಸವನ್ನು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ ವರದರಾಜ ಚಂದ್ರಗಿರಿ ಕೃತಿ ಪರಿಚಯ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ‘ಭಾವಗೀತಯಾನ’ ಎಂಬ ಕಿರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ, ಸಾಹಿತ್ಯ ಪರಿಷತ್ ಮಾರ್ಗದರ್ಶಕ ಡಾ. ತಾಳ್ತಜೆ ವಸಂತ ಕುಮಾರ, ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಉದಯ ಕುಮಾರ್, ಗೌರವ ಕೋಶಾಧ್ಯಕ್ಷ ಡಾ. ಗೋವಿಂದ ಪ್ರಸಾದ್ ಕಜೆ, ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್, ಸದಸ್ಯರಾದ ಶಾಂತಾ ಕುಂಟಿನಿ, ಸುಂದರಿ, ವಿಮಲಾ ತೇಜಾಕ್ಷಿ, ವೀಣಾ ಪ್ರಸಾದ್, ಅಬ್ದುಲ್ ರಹಿಮಾನ್ ಯೂನಿಕ್, ತಾಲೂಕು ಘಟಕದ ಸದಸ್ಯ ಸುಬ್ಬಪ್ಪ ಕೈಕಂಬ ಉಪಸ್ಥಿತರಿದ್ದರು.