ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಹಲವರ ಹೆಸರು ರೇಸ್‌ನಲ್ಲಿ – ಆರ್‌ಎಸ್‌ಎಸ್ ಪಟ್ಟಿಯಲ್ಲಿ ಎಬಿವಿಪಿ ಮುಖಂಡ ಕೇಶವ ಬಂಗೇರ ಹೆಸರು

0

ಪುತ್ತೂರು: ಲೋಕಸಭಾ ಚುನಾವಣೆಯ ಕಾವು ದೇಶಾದ್ಯಂತ ಏರತೊಡಗಿದೆ. ಮೇ ತಿಂಗಳ ಎರಡನೇ ವಾರದಲ್ಲಿ ಲೋಕಸಭಾ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಲವರ ಹೆಸರು ರೇಸ್‌ನಲ್ಲಿ ಕಾಣಿಸಿಕೊಳ್ಳತೊಡಗಿದೆ. ಮಾರ್ಚ್‌ನಲ್ಲಿ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಲಿದೆ. ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವರಾದ ಪುತ್ತೂರಿನ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಬಂಟ್ವಾಳದ ಮಾಜಿ ಶಾಸಕ ಬೆಳ್ಳಿಪ್ಪಾಡಿ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಜಿಲ್ಲಾ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮಿಥುನ್ ರೈ ಮುಂತಾದವರ ಹೆಸರು ಕೇಳಿ ಬರುತ್ತಿದೆ.

ಬಿಜೆಪಿಯಿಂದ ಹಾಲಿ ಸಂಸದರಾದ ರಾಜ್ಯ ಬಿಜೆಪಿಯ ನಿಕಟ ಪೂರ್ವಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿಯ ಕಾರ್ಯದರ್ಶಿಯಾಗಿರುವ ನಿವೃತ್ತ ಯೋಧ ಬ್ರಿಜೇಶ್ ಚೌಟ, ಹೈಕೋರ್ಟ್‌ನ ಖ್ಯಾತ ವಕೀಲರಾಗಿರುವ ಅರುಣ್‌ಶ್ಯಾಮ್ ಪುತ್ತೂರು, ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತಿತರರ ಹೆಸರು ಚರ್ಚೆಯಲ್ಲಿದೆ. ಈ ಮಧ್ಯೆ ಹಿಂದು ಸಂಘಟನೆಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಸತ್ಯಜಿತ್ ಸುರತ್ಕಲ್ ಮತ್ತು ಅರುಣ್ ಕುಮಾರ್ ಪುತ್ತಿಲರವರಿಗೆ ಬಿಜೆಪಿಯಿಂದ ಈ ಬಾರಿ ಅವಕಾಶ ಕೊಡಲೇಬೇಕು ಎಂದು ವಿವಿಧೆಡೆ ಕಾರ್ಯಕರ್ತರ ಸಭೆ ನಡೆದು ಆಗ್ರಹ ವ್ಯಕ್ತವಾಗುತ್ತಿದೆ. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಬಿಜೆಪಿಯಲ್ಲಿ ಯಾವುದೇ ಗೊಂದಲ ಆಗದಂತೆ ಮತ್ತು ಯಾರೂ ಬಂಡಾಯ ಏಳದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ. ಯುವಕರಿಗೆ ಅವಕಾಶ ನೀಡಬೇಕು ಎಂದು ಎಲ್ಲೆಡೆ ಮಾತು ಕೇಳಿ ಬರುತ್ತಿರುವುದರಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಕ್ರಿಯ ಯುವಕರನ್ನು ಮತ್ತು ತೆರೆಮರೆಯಲ್ಲಿ ಎಲೆ ಮರೆ ಕಾಯಿಯಂತಿರುವವರನ್ನು`ನಳಿನ್ ಕುಮಾರ್ ಮಾದರಿ’ಯಲ್ಲಿ ಪಕ್ಷಕ್ಕೆ ಪರಿಚಯಿಸಲು ಆರ್‌ಎಸ್‌ಎಸ್ ನಾಯಕರು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವರ ಹೆಸರು ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರಾಗಿರುವ ಬೆಳ್ತಂಗಡಿಯ ಕೇಶವ ಬಂಗೇರ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿರುವ ಕೇಶವ ಬಂಗೇರ ಅವರ ಹೆಸರು ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿಯೂ ಕಾಣಿಸಿಕೊಂಡಿತ್ತು. ಪ್ರಖರ ವಾಗ್ಮಿಯೂ ಆಗಿರುವ ಕೇಶವ ಬಂಗೇರ ಹೆಸರು ಆರ್‌ಎಸ್‌ಎಸ್ ನಾಯಕರ ಅಂತಿಮ ಪಟ್ಟಿಯಲ್ಲಿದ್ದು ಅಂತಿಮ ತೀರ್ಮಾನ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳಲಿದೆ.

ಎಬಿವಿಪಿ ವಿಭಾಗ ಪ್ರಮುಖರಾಗಿರುವ ಬಂಗೇರ
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯವರಾದ ಕೇಶವ ಬಂಗೇರ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮಂಗಳೂರು ವಿಭಾಗ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಎ, ಬಿಎಡ್ ಪದವೀಧರರಾಗಿರುವ ಬಂಗೇರ ಅವರು ಪ್ರಸ್ತುತ ಪಿಚ್‌ಡಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಕೇಶವ ಬಂಗೇರ ಅವರು ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಕಾರ್ಯಕರ್ತರಾಗಿ ಸಾಮಾಜಿಕ ಜೀವನಕ್ಕೆ ಧುಮುಕಿದ್ದರು. ಎನ್‌ಎಸ್‌ಎಸ್‌ನಲ್ಲಿ ಕ್ರಿಯಾಶೀಲರಾಗಿದ್ದ ಇವರು ಎಸ್‌ಡಿಎಂ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಾಲಿಬಾಲ್ ತಂಡದ ಆಟಗಾರರಾಗಿದ್ದರು. 2001ರಲ್ಲಿ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಕರ್ನಾಟಕದ ಪ್ರತಿನಿಽಯಾಗಿ ಭಾಗಿಯಾಗಿದ್ದ ಇವರು 1999-20ನೇ ಸಾಲಿನ ಎಸ್‌ಡಿಎಂ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2003-೦7ರವರೆಗೆ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇವರು 2006ರಲ್ಲಿ ಕಳಿಯ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರಾಗಿದ್ದರು. 2007-09ರ ಅವಧಿಯಲ್ಲಿ ಬೆಳ್ತಂಗಡಿ ಭಾ.ಜ.ಪ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೇಶವ ಬಂಗೇರ ಅವರು ವಿವಿಧ ಭಜನಾ ಮಂದಿರ, ದೈವಸ್ಥಾನ, ದೇವಾಲಯಗಳಲ್ಲಿ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿಗಳ ಜವಾಬ್ದಾರಿ ನಿರ್ವಹಿಸಿದ್ದರು. ಎಬಿವಿಪಿ ಮಂಗಳೂರು ಮಹಾನಗರ ಅಧ್ಯಕ್ಷರಾಗಿ, ಮಂಗಳೂರು ಜಿಲ್ಲಾ ಪ್ರಮುಖರಾಗಿ, ಮಂಗಳೂರು ವಿಭಾಗ ಪ್ರಮುಖರಾಗಿ, ಕರ್ನಾಟಕ ಪ್ರಾಂತ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ಮಂಗಳೂರು ವಿಭಾಗ ಪ್ರಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here