ಪುತ್ತೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ದತಿ ರದ್ದುಪಡಿಸಿ ಸ್ಥಳೀಯ ಸಂಸ್ಥೆಗಳಿಂದಲೇ ನೇರವಾಗಿ ವೇತನ ಪಾವತಿಸಲು ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊರಗುತ್ತಿಗೆ ನೌಕರರ ಸಂಘ ಅಭಿನಂದಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪೌರಚಾಲಕರು, ನೀರುಗಂಟಿಗಳು, ಬೀದಿ ದೀಪ ನಿರ್ವಾಹಕರು, ಲೋಡರ್ಸ್, ಕ್ಲೀನರ್ಸ್, ಯೂಜಿಡಿ, ಕಾರ್ಮಿಕರು, ಸ್ಯಾನಿಟರಿ ಸೂಪರ್ ವೈಸರು, ಸೇರಿದಂತೆ ಹತ್ತು ಸಾವಿರಕ್ಕು ಹೆಚ್ಚು ಮಂದಿ ದುಡಿಯುತ್ತಿದ್ದು. ಈ ನೌಕರರನ್ನು ನೇರಪಾವತಿಗೆ ತರುವಂತೆ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಫೆ.13 ರಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡು ಫೆ.15 ರಂದು ಹೊರಗುತ್ತಿಗೆ ನೌಕರರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಎಂಬ ಕಾರ್ಯಕ್ರಮ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಸೇರಿದಂತೆ ರಾಜ್ಯ ಸಮಿತಿಯೊಂದಿಗೆ ಚರ್ಚಿಸಿದ ಮುಖ್ಯಮಂತ್ರಿಗಳು ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಜಾರಿಗೊಳಿಸಲಾಗುವುದು. ಶೀಘ್ರವಾಗಿ ಸಂಪುಟದಲ್ಲಿ ಅನುಮೋದಿಸಲಾಗುವುದು, ಹೋರಾಟವನ್ನು ಹಿಂಪಡೆಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೌಕರರ ನೇರಪಾವತಿಗೆ ಸಮ್ಮತಿ ಸೂಚಿಸಿದ ಮುಖ್ಯಮಂತ್ರಿಯನ್ನು ಸಂಘವು ಅಭಿನಂದಿಸಿದ್ದು. ಶೀಘ್ರವಾಗಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಕಲ್ಬುರ್ಗಿ ವಿಭಾಗ ಸಂಚಾಲಕ ಸಿದ್ರಾಮ ಪಾಟೀಲ. ಕರಾವಳಿ ವಿಭಾಗ ಸಂಚಾಲಕ ಅಣ್ಣಪ್ಪ ಕಾರೇಕಾಡು, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಬೀದರ ಘಟಕದ ಯೇಸುದಾಸ್ ಕರುನಾಡ ಸೇವಕರು ಸಂಘದ ಮಂಡ್ಯ ನಗರಾಧ್ಯಕ್ಷ ಚಂದ್ರು ಮೊದಲಾದವರಿದ್ದರು.