ಉಪ್ಪಿನಂಗಡಿ: ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಫೆ.14ರಂದು ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ್ ಮಯ್ಯ ಅವರು ಮಾತನಾಡಿ, ಸಂಪ್ರದಾಯ, ಸಂಸ್ಕೃತಿ, ಸಹಕಾರ, ಸಹಭಾಗಿತ್ವ, ಸಂತೆ ಮೇಳೈಸಿದಲ್ಲಿ ಜಾತ್ರೆ ಯಶಸ್ವಿಯಾಗಲಿದೆ. ಜಾತ್ರಾ ಮಹೋತ್ಸವಗಳು ಯುವ ಜನತೆಗೆ ಪ್ರೇರಣೆಯಾಗಬೇಕು. ಮಕ್ಕಳಲ್ಲೂ ಸಂಪ್ರದಾಯ ಮುಂದುವರಿಸಿಕೊಂಡು ಹೋಗುವ ಅವಕಾಶ ಬೆಳೆಯಲಿ ಎಂದ ಅವರು, ದೇಶ ಸೇವೆ ದೊಡ್ಡ ಸೇವೆ. ಆದ್ದರಿಂದ ಯುವಕರು ಸೇನೆಗೆ ಸೇರಿ ಕನಿಷ್ಠ 20 ವರ್ಷವಾದರೂ ಸೇವೆ ಸಲ್ಲಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಎ.ಲಕ್ಷ್ಮಣ ಗೌಡ ಅವರು ಮಾತನಾಡಿ, ಹಿಂದೆ ದೇವಸ್ಥಾನಗಳೇ ವಿದ್ಯಾಕೇಂದ್ರ, ನ್ಯಾಯಕೇಂದ್ರವೂ ಆಗಿತ್ತು. ಊರಿನ ದೇವಾಲಯ, ಶಾಲೆಗಳ ಮೂಲಕ ಊರಿನ ಪ್ರಗತಿ ಕಾಣುತ್ತದೆ. ಕಾಂಚನ ನಡ್ಪದಲ್ಲಿನ ಭಕ್ತರ ಏಕತೆ, ಒಂದೇ ಮನಸ್ಸಿನಿಂದ ಮಾಡುತ್ತಿರುವ ಸೇವೆಯಿಂದ ದೇವಸ್ಥಾನ ಅಭಿವೃದ್ಧಿಯಾಗಿದೆ ಎಂದು ಹೇಳಿದರು.
ಸನ್ಮಾನ:
ಗ್ರಾಮ ದೈವವಾದ ಶಿರಾಡಿ ದೈವದ ಭಂಡಾರ ತರುವ ಸೇವೆ ಮಾಡುತ್ತಿರುವ ಮುತ್ತಪ್ಪ ಗೌಡ ನೆಕ್ಕರೆ, ದೈವದ ಪೂಜಾರಿಮೆ ಸೇವೆ ಮಾಡುತ್ತಿರುವ ಪೊಡಿಯ ಗೌಡ ಯಾನೆ ರಾಮಣ್ಣ ಗೌಡ ಮಣಿಕ್ಕಳ, ಲಿಂಗಪ್ಪ ಗೌಡ ಮಣಿಕ್ಕಳ, ಶೀನಪ್ಪ ಗೌಡ ಓಲೆಬಳ್ಳಿ ಮಣಿಕ್ಕಳ, ದೇವಸ್ಥಾನಕ್ಕೆ ಪಾರಂಪರಿಕ ಸೇವೆ ಮಾಡುತ್ತಿರುವ ಮೋನಪ್ಪ ಗೌಡ ಮಣಿಕೆ, ಮೋನಪ್ಪ ಗೌಡ ನೆಕ್ಕರೆ, ಕೆ.ಗುಡ್ಡಪ್ಪ ಗೌಡ ಗುರುಕೃಪಾ ಹೊಸ ಮನೆ, ಶ್ರೀ ದೇವರ ಪರಿಚಾರಿಕೆ ಸೇವೆ ಮಾಡುತ್ತಿರುವ ಕೆಂಚಮ್ಮ ನಡ್ಪ, ಕಮಲ ಶಿವಪುರ, ದೇವಕಿ ಸುರುಳಿಮಜಲು ಹಾಗೂ ಗ್ರಾಮ ದೈವಗಳ ದೂತಗಳಿಗೆ ಬಿಂದು ಸೇವೆ ನೀಡುತ್ತಿರುವ ಪೆರ್ನ ಕಾಂಚನ ಬಿದಿರಾಡಿ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ, ಸ್ಮರಣಿಕೆ, ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ನಿವೃತ್ತ ಯೋಧರಾದ ವಿಶ್ವನಾಥ ಗೌಡ ವಿಶ್ವರೂಪ ಮಾಯಿತಾಲ್, ನವೀನ್ ಕುಮಾರ್ ಅತ್ತಾಜೆ, ಶೀನಪ್ಪ ಗೌಡ ಕಿಂಡೋವು, ಯೋಧ ವೆಂಕಟ್ರಮಣ ಗೌಡ ನಾಗೋಜಿ ಅವರನ್ನು ಸನ್ಮಾನಿಸಲಾಯಿತು. ಇಸ್ರೋದ ಹಿರಿಯ ವಿಜ್ಞಾನಿ ಶಿವಪ್ರಸಾದ್ ಕಾರಂತ ಮಣಿಪುರ ಕಾಂಚನ ಅವರ ಪರವಾಗಿ ಸಹೋದರ ನಾಗೇಶ ಕಾರಂತ ಅವರು ಸನ್ಮಾನ ಸ್ವೀಕರಿಸಿದರು. ಶಿವರಾಮಪ್ರಸಾದ್ ಅವರು ಸನ್ಮಾನ ಪತ್ರ ವಾಚಿಸಿದರು. ಪಾಕಶಾಸ್ತ್ರ ಪರಿಣಿತರಾದ ದಿ. ಗಣಪತಿ ಭಟ್ ಬಾರೆದಡ್ಡು ಅವರ ಪರವಾಗಿ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ವಿಶ್ವನಾಥ ಗೌಡ ಅವರು ಮಾತನಾಡಿ, ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ಸೇನೆಗೆ ಸೇರುವವರ ಸಂಖ್ಯೆ ಬಹಳ ಕಡಿಮೆ ಇದೆ. ಸೇನೆಗೆ ಸೇರಿ ಭಾರತ ಮಾತೆಯ ಸೇವೆ ಮಾಡುವುದರಿಂದ ಗೌರವ ಸಿಗುತ್ತದೆ ಹಾಗೂ ಜೀವನದಲ್ಲಿ ಉನ್ನತಿ ಸಾಧಿಸಬಹುದು. ಮಕ್ಕಳನ್ನು ಸೇನೆಗೆ ಸೇರಿಸಲು ಪೋಷಕರು ಆಸಕ್ತಿ ವಹಿಸಬೇಕು. ವಿದೇಶಕ್ಕೆ ಹೋಗಿ ಸೇವೆ ಸಲ್ಲಿಸುವುದಕ್ಕಿಂತ ಸೇನೆಗೆ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಸಲ್ಲಿಸುವುದರಿಂದ ಆ ರಾಜ್ಯದ ಸಂಸ್ಕೃತಿ, ಭಾಷೆ ಕಲಿಯಲು ಅವಕಾಶ ಸಿಗುತ್ತದೆ ಎಂದರು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಕಾಂಚನ ರೋಹಿಣಿ ಸುಬ್ಬರತ್ನಂ, ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ ಗೌಡ ಶ್ರೀಹರಿ ನಡ್ಪ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರಮಹಾಲಕ್ಷ್ಮಿ ವೃತ ಪೂಜಾ ಸಮಿತಿ ವತಿಯಿಂದ ದೇವಸ್ಥಾನಕ್ಕೆ ರೂ.5 ಸಾವಿರ ದೇಣಿಗೆ ಈ ಸಂದರ್ಭದಲ್ಲಿ ಹಸ್ತಾಂತರ ಮಾಡಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷ ಶಿವರಾಮ ಕಾರಂತ ಉರಾಬೆ ಸ್ವಾಗತಿಸಿ, ಸುರೇಶ್ ಬಿದಿರಾಡಿ ವಂದಿಸಿದರು. ಶಿಕ್ಷಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಮೊಕ್ತೇಸರರೂ, ಅರ್ಚಕರೂ ಆದ ನಾರಾಯಣ ಬಡೆಕ್ಕಿಲ್ಲಾಯ, ಟ್ರಸ್ಟ್‌ನ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ್ ರಾವ್ ಮಣಿಕ್ಕಳ, ಲೆಕ್ಕ ಪರಿಶೋಧಕ ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಲೋಕೇಶ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲ್ಲಾಯ ಹಾಗೂ ಭಕ್ತಾಧಿಗಳು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸನ್ಮಾನ ಸಮಾರಂಭಕ್ಕೆ ಮೊದಲು ವಾರ್ಷಿಕ ಜಾತ್ರೆ ಸಲುವಾಗಿ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಕಡಬ ವಿಶ್ವಮೋಹನ ನೃತ್ಯ ಕಲಾ ಶಾಲೆಯ ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಕೀರ್ತನ ಗಣೇಶ್ ಅವರಿಂದ ಭರತನಾಟ್ಯ ಪ್ರಥಮ ಪ್ರದರ್ಶನ ನಡೆಯಿತು. ನಂತರ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ‘ ರತಿ ಕಲ್ಯಾಣ ‘ ಯಕ್ಷಗಾನ ಬಯಲಾಟ ನಡೆಯಿತು.