ಬೊಬ್ಬೆಕೇರಿ ಶಾಲೆಯಲ್ಲಿ ಅಕ್ಷಯ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರಕ್ಕೆ ಚಾಲನೆ

0

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದು – ಭಾಗೀರಥಿ ಮುರುಳ್ಯ
ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರಲು ಎನ್.ಎಸ್.ಎಸ್ ಸಹಕಾರಿ-ಜಯಂತ್ ನಡುಬೈಲು

ಕಾಣಿಯೂರು: ಶಿಕ್ಷಣದ ಜೊತೆಗೆ ಒಂದಷ್ಟು ಪರಿಸರವನ್ನು ಪ್ರೀತಿಸುವ ಗುಣ ಹೊಂದಿರಬೇಕು. ಅಗ ಮಾತ್ರ ಸ್ವಾವಲಂಬಿಯಾಗಿ ಬದುಕಲು ಸಾಧ್ಯ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಅಕ್ಷಯ ಕಾಲೇಜು ಪುತ್ತೂರು ಇದರ ನೇತೃತ್ವದಲ್ಲಿ ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.5ರಿಂದ ಮಾ.11ರವರೆಗೆ ನಡೆಯಲಿರುವ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಮಾ.5ರಂದು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಭವಿಷ್ಯದ ಬೆಳಕಾದ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜತೆಗೆ ಸೇವಾ ಮನೋಭಾವನೆ ಬೆಳಿಸಿಕೊಳ್ಳಬೇಕು. ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರಲು ಸಹಕಾರಿಯಾಗುತ್ತದೆ ಮತ್ತು ವ್ಯಕ್ತಿ ವಿಕಸನಕ್ಕೆ ಸಹಾಯ ಮಾಡುತ್ತದೆ. ಏಳು ದಿನಗಳ ಶಿಬಿರದಲ್ಲಿ ಇಲ್ಲಿನ ಪ್ರದೇಶದ ಜನರೊಂದಿಗೆ ಬೆರೆತು ಸಾಮಾಜಿಕ ಪ್ರಜ್ಞೆ ಮೂಡಿಸಬೇಕು, ಅದರೊಂದಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಪುತ್ತೂರು ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗುತ್ತವೆ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶಶಿಕಲಾ, ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ, ಬೊಬ್ಬೆಕೇರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಪುತ್ತೂರು ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಜೀವನ್. ಬಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಮಿತಾ ಪ್ರಾರ್ಥಿಸಿದರು. ಕಾಲೇಜಿನ ಉಪನ್ಯಾಸಕರು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹ ಯೋಜನಾಧಿಕಾರಿ ಮೇಘಶ್ರೀ ಸ್ವಾಗತಸಿ, ಘಟಕದ ನಾಯಕಿ ನವಮಿ ವಂದಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ನೂತನ ಕಟ್ಟಡ ಒದಗಿಸುವಂತೆ ಶಾಸಕರಿಗೆ ಮನವಿ
ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶಶಿಕಲಾರವರು ಮಾತನಾಡಿ, ಬೊಬ್ಬೆಕೇರಿ ಶಾಲಾ ಮೇಲ್ಚಾವಣಿ ಕುಸಿತಗೊಂಡ ಹಿನ್ನಲೆಯಲ್ಲಿ ತುರ್ತು ದುರಸ್ಥಿಗಾಗಿ ಈಗಾಗಲೇ ಶಾಸಕಿ ಭಾಗೀರಥಿ ಮುರುಳ್ಯ ಅವರು ರೂ 5 ಲಕ್ಷ ಅನುದಾನ ಒದಗಿಸಿದ್ದಾರೆ. ಶತಮಾನ ಕಂಡ ಸುಮಾರು 120 ವರ್ಷಗಳನ್ನು ಪೂರೈಸಿರುವ ಬೊಬ್ಬೆಕೇರಿ ಶಾಲೆಯ ಕಟ್ಟಡಗಳು ತೀರ ದುಸ್ಥಿತಿಯಲ್ಲಿದ್ದು, ಮುಂದಿನ ದಿನಗಲ್ಲಿಯೂ ಶಾಲೆಗೆ ನೂತನ ಕಟ್ಟಡಗಳನ್ನು ಒದಗಿಸಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here