ದ.ಕ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಹಕಾರ ಸಂಘದ ಪುತ್ತೂರು ಶಾಖೆ ಉದ್ಘಾಟನೆ

0

ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಗಮನ ತರುತ್ತೇನೆ-ಅಶೋಕ್ ಕುಮಾರ್ ರೈ
ಮಕ್ಕಳನ್ನು ಬೆಳೆಸುವಲ್ಲಿ ನಿಮ್ಮ ಶ್ರಮ ದೊಡ್ಡದು – ಬೂಡಿಯಾರ್ ರಾಧಾಕೃಷ್ಣ ರೈ
ನೀವು ಕೊಡುವ ಸೇವೆ ಬೇರೆ ಯಾವ ಇಲಾಖೆಯೂ ಕೊಡುವುದಿಲ್ಲ – ಸಾಜ ರಾಧಾಕೃಷ್ಣ ಆಳ್ವ
ಸ್ತ್ರೀ ಶಕ್ತಿ ಸಹಕಾರ ಸಂಘದ ಕೂಸು ನಿಮ್ಮ ಬ್ಯಾಂಕ್ – ಮೀನಾಕ್ಷಿ ಮಂಜುನಾಥ್

ಪುತ್ತೂರು: ತಾಯಿಯ ಸ್ಥಾನದಲ್ಲಿ ನಿಂತು ನೀವು ಮಕ್ಕಳ ಸೇವೆ ಮಾಡುತ್ತೀರಿ. ಅಂಗನವಾಡಿಯಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡಿಕೊಂಡು ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನಮನೆಗೂ ಮುಟ್ಟಿಸುವಲ್ಲಿ ನೀವು ಶ್ರಮ ಪಡುತ್ತೀರಿ. ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ವಿಧಾನಸಭೆಯಲ್ಲಿಯೂ ಉಲ್ಲೇಖ ಮಾಡುತ್ತೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆದ ದ.ಕ.ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಹಕಾರ ಸಂಘದ ಪುತ್ತೂರು ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಕಾರದ ಕರ್ತವ್ಯಗಳ ಜತೆಗೆ ಗ್ಯಾರಂಟಿ ಯೋಜನೆಗಳ ಕರ್ತವ್ಯವನ್ನು ಮಾಡುತ್ತಿದ್ದೀರಿ. ನಿಮಗೆ ಸಿಗಬೇಕಾದ ಸೌಲಭ್ಯ, ಸವಲತ್ತುಗಳು ಸಿಗಲೇಬೇಕು. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನಿಮ್ಮ ಟ್ರಸ್ಟ್ ಮೂಲಕ ಹಲವು ಮಹಿಳೆಯರಿಗೆ ನೆರವಾಗಿದ್ದೀರಿ. ಇದು ಉತ್ತಮ ಕೆಲಸ. ನಿಮ್ಮ ಸಹಕಾರ ಸಂಘ ಅಭಿವೃದ್ಧಿ ಹೊಂದಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಶಿಕ್ಷಕರ ಕೆಲಸಕ್ಕಿಂತ ನಿಮ್ಮ ಕೆಲಸ ಕಷ್ಟವಾದದ್ದು. ತಾಯಿ ಸ್ಥಾನದಲ್ಲಿ ಮಕ್ಕಳನ್ನು ಪೋಷಿಸಿದ್ದೀರಿ. ಮಕ್ಕಳನ್ನು ಬೆಳೆಸುವಲ್ಲಿ ನಿಮ್ಮ ಶ್ರಮ ದೊಡ್ಡದು ಎಂದರು. ರೋಟರಿ ಹಾಗೂ ಇತರ ಸಂಸ್ಥೆಗಳ ಮೂಲಕ ಹಲವು ಅಂಗನವಾಡಿಗಳಿಗೆ ಸಹಾಯಹಸ್ತ ಮಾಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಸುಮಾರು 4500ರಷ್ಟು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇದ್ದಾರೆ. ನೀವೆಲ್ಲಾ ಸೇರಿ ವಿಮೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದರು. ವಾರ್ಷಿಕವಾಗಿ ರೂ.500ರ ಹಾಗೆ ಸಂಗ್ರಹ ಮಾಡಿ. ಯಾರನ್ನೂ ಅವಲಂಬಿಸದೆ ನಿವೃತ್ತಿ ಸಮಯದಲ್ಲಿ ಬದುಕಬಹುದು. ನಿಮ್ಮ ಕಷ್ಟದಲ್ಲಿ ನಾನು ಸಹಕಾರ ಮಾಡುತ್ತೇನೆ ಎಂದರು.

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ನೀವು ಕೊಡುವ ಸೇವೆ ಬೇರೆ ಯಾವ ಇಲಾಖೆಯೂ ಕೊಡುವುದಿಲ್ಲ. ಮಕ್ಕಳು ಹಾಗೂ ಗರ್ಭಿಣಿ ಹೆಂಗಸರ ಪೋಷಣೆಯನ್ನು ಮಾಡುತ್ತೀರಿ ಎಂದರು. ಸಹಕಾರ ಸಂಘ ನಡೆಯಲು ವ್ಯವಹಾರಗಳು ಬೇಕು ವ್ಯವಹಾರಗಳು ಬೇಕೆಂದರೆ ಬಂಡವಾಳ ಹಾಗೂ ಸಾಲ ಸೌಲಭ್ಯ ಇರಬೇಕು. ಪುತ್ತೂರು ಶ್ರೀ ಮಹಾಲಿಂಗೇಶ್ವರನ ನೆಲದಲ್ಲಿ ಆರಂಭಿಸಿದ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ. ನಾನು ತಾ.ಪಂ. ಹಾಗೂ ಜಿ.ಪಂ. ಸದಸ್ಯನಾಗಿದ್ದಾಗ ಅಂಗನವಾಡಿಗಳಿಗೆ ಸಹಾಯ ಮಾಡುವಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.

ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ.ಎಂ. ಮಾತನಾಡಿ, ಸೇವಾಂಜಲಿ ಟ್ರಸ್ಟ್‌ನ ಕಾರ್ಯಕ್ರಮಗಳು ಉತ್ತಮವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇಂತಹ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ. ಪುತ್ತೂರು ಶಾಖೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಾಣಿ ಮಾತನಾಡಿ, ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘದ ಸಹಕಾರ ಸಂಘ ಪ್ರಾರಂಭ ಆಗಿದೆ. ನೀವೆಲ್ಲರೂ ದಿಟ್ಟ ಹೆಜ್ಜೆ ಇಟ್ಟಿದ್ದೀರಿ ಆರ್ಥಿಕವಾಗಿ ಸ್ವಾವಲಂಬನೆಗೆ ಸಂಘ ಸಹಕಾರಿಯಾಗಿದೆ ಎಂದರು.

ಪುತ್ತೂರು ನೇತ್ರಾವತಿ ಸ್ತ್ರೀಶಕ್ತಿ ಸಹಕಾರ ಸಂಘದ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ಮಾತನಾಡಿ, ಬ್ಯಾಕ್ ನಡೆಸುವುದು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ. ನೀವೇ ಬೆಳೆಸಿದ ಸ್ತ್ರೀ ಶಕ್ತಿ ಸಂಘದ ಬ್ಯಾಂಕ್‌ನ ಕೂಸು ಆಗಿದೆ ನಿಮ್ಮ ಬ್ಯಾಂಕ್. ಮಹಿಳೆಯರು ಕ್ಲಪ್ತ ಸಮಯದಲ್ಲಿ ಸಾಲ ಕಟ್ಟುತ್ತಾರೆ. ನಿಮ್ಮ ಸಂಘಟನೆ ಶಕ್ತಿ ಇವತ್ತು ಅರಿವು ಆಗಿದೆ. ನಿಮ್ಮ ಬೇಡಿಕೆ ಈಡೇರಲಿ ಎಂದು ಶುಭಹಾರೈಸಿದರು. ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಜೆ. ಬಲ್ಲಾಳ್ ಮಾತನಾಡಿ, ಒಗ್ಗಟ್ಟಿನಿಂದ ಕೆಲಸಗಳು ಆಗುತ್ತದೆ. ಸಹಕಾರ ಸಂಘದಲ್ಲಿಯೂ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಕಾರ್ಯಕರ್ತೆಯರು, ಸಹಾಯಕಿಯರು ಸಹಕಾರ ನೀಡಬೇಕು ಎಂದರು. ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್. ಪ್ರಾಸ್ತಾವಿಕ ಮಾತನಾಡಿ, 1982ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆರಂಭವಾಯಿತು. ಬಳಿಕದ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಂಘವನ್ನು ಪ್ರಾರಂಭಿಸಿದರು. ಹಿರಿಯರು ಸಂಘವನ್ನು ಕಟ್ಟಿದರು. ಅವರು ಪ್ರಾತಃಸ್ಮರಣೀಯರು ಎಂದರು. 175 ರೂ.ನಿಂದ ಆರಂಭವಾದ ಗೌರವಧನ ಇವತ್ತು ನಮಗೆ 11500 ಆಗಿದೆ. ನಮ್ಮ ಸಂಘ ಸ್ವತಂತ್ರ ಸಂಘಟನೆಯಾಗಿ ಬೆಳೆದಿದೆ ಎಂದರು. ಹಲವು ಮಕ್ಕಳಿಗೆ ತಾಯಂದಿರಿಗೆ ರಕ್ಷಣೆಯನ್ನು ನೀಡುತ್ತಿದ್ದೇವೆ. ಆದರೂ ನಮ್ಮನ್ನು ಸರಕಾರ ಇಷ್ಟರವರೆಗೆ ಸರಕಾರಿ ನೌಕರರೆಂದು ಪರಿಗಣಿಸಿಲ್ಲ. ಅಲ್ಲದೆ ಕನಿಷ್ಟ ವೇತನವನ್ನೂ ಜಾರಿಗೊಳಿಸಿಲ್ಲ ಎಂದರು. ನಮ್ಮ ಸಂಘದ ವತಿಯಿಂದ ಸೇವಾಂಜಲಿ ಟ್ರಸ್ಟ್ ಆರಂಭಿಸಿದ್ದೇವೆ ಅದರ ಮೂಲಕ ಅನಾಥ ಸಹಾಯಕಿಯರಿಗೆ, ಕಾರ್ಯಕರ್ತೆಯರಿಗೆ ಪಿಂಚಣಿ ನೀಡಲಾಗುತ್ತದೆ. ಟ್ರಸ್ಟ್ ಮೂಲಕ ಸಹಕಾರ ಸಂಘ ನಡೆಸುತ್ತಿದ್ದೇವೆ ಎಂದರು.

ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಸಂಘದ ಕೋಶಾಧಿಕಾರಿ ವಿಶಾಲಾಕ್ಷಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬದುಕೇ ಒಂದು ಸಮಸ್ಯೆಯಾಗಿದೆ. ನಮ್ಮನ್ನು ಸರಕಾರಿ ನೌಕರರಾಗಿ ಪರಿಗಣಿಸಿಲ್ಲ. ನಮ್ಮ ಸಂಬಳವನ್ನು ಗೌರವಧನವೆಂದು ಗುರುತಿಸಲಾಗಿದೆ. ಸರಕಾರ ಬೇಕಾದ ಸವಲತ್ತು ನೀಡದೆ ನಮ್ಮನ್ನು ದುಡಿಸಿಕೊಳ್ಳುತ್ತಿದೆ. ಸರಕಾರ ಸಮಾಜಸೇವಕರೆಂದು ನಮ್ಮನ್ನು ಗುರುತಿಸಿದೆ ಎಂದರು. ಆರು ವರ್ಷದ ಒಳಗಿನ ಮಕ್ಕಳ ಜವಾಬ್ದಾರಿ ನಮ್ಮ ಮೇಲಿದೆ. ಅವರಿಗೆ ತೊಂದರೆಯಾದರೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ ಆದುದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಕಮಲರವರು ಮಾತನಾಡಿ, ಪುತ್ತೂರಿನಲ್ಲಿ ಉದ್ಘಾಟನೆ ಆದ ಶಾಖೆ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಎಲ್ಲರೂ ಸಹಕಾರ ನೀಡುವಂತೆ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ, ಪುತ್ತೂರು ಅಕ್ರಮ ಸಕ್ರಮ ಸಮಿತಿ ಸದಸ್ಯ, ಮಹಮ್ಮದ್ ಬಡಗನ್ನೂರು, ತಾಲೂಕು ಬೂನ್ಯಾಮಂಡಳಿ ಸದಸ್ಯ ಕೃಷ್ಣಪ್ರಸಾದ್, ನಯನಾ ರೈ ನೆಲ್ಲಿಕಟ್ಟೆ ಹಾಗೂ ಪುತ್ತೂರು, ಕಡಬ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

ಸನ್ಮಾನ : ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ.ಎಂ. ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾರವರನ್ನು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿದರು.

ಷೇರುಪತ್ರ ವಿತರಣೆ: ಸಹಕಾರ ಸಂಘಕ್ಕೆ ಬಂಡವಾಳವಾಗಿ ನೀಡಿದ ದಾನಿಗಳಿಗೆ ಸಾಜ ರಾಧಾಕೃಷ್ಣ ಆಳ್ವ ಷೇರುಪತ್ರ ವಿತರಿಸಿದರು.

ಟ್ರಸ್ಟ್ ಕಾರ್ಯದರ್ಶಿ ಅಜಿತಾ ಟ್ರಸ್ಟ್‌ನ ವರದಿ ವಾಚಿಸಿದರು. ಸುಲೋಚನಾ ಸನ್ಮಾನ ಪತ್ರ ವಾಚಿಸಿದರು. ಚರ್ಚ್ ಬಿಲ್ಡಿಂಗನಲ್ಲಿ ವ್ಯವಹರಿಸಲಿರುವ ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಸಂಘದ ಪುತ್ತೂರು ಶಾಖಾ ಕಚೇರಿಯಲ್ಲಿ ಬೆಳಿಗ್ಗೆ ಪೂಜಾ ವಿಧಿ ವಿಧಾನ ನಡೆಯಿತು. ಟ್ರಸ್ಟ್‌ಗೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸಂಧ್ಯಾ, ಆಶಾಲತಾ, ಸಾವಿತ್ರಿ, ಸೀತಾರತ್ನ, ಜೈನಾಬಿ, ಯಶೋಧಾ, ಪ್ರಮೀಳಾರವರು ಅತಿಥಿಗಳಿಗೆ ಹೂಗುಚ್ಚ ನೀಡಿದರು. ಟ್ರಸ್ಟ್ ನಿರ್ದೇಶಕಿ ಕವಿತಾ ಗುಂಡ್ಯ ಸ್ವಾಗತಿಸಿದರು. ನಿರ್ದೇಶಕಿ ಶ್ಯಾಮಲಾ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಮಾಜಿ ಜಿಲ್ಲಾಧ್ಯಕ್ಷೆ ಅರುಣಾ ಬೀರಿಗ ಕಾರ್ಯಕ್ರಮ ನಿರೂಪಿಸಿದರು.

ವೈಯುಕ್ತಿಕ ನೆಲೆಯಲ್ಲಿ ಶಾಸಕರಿಂದ ರೂ.50,000 ಘೋಷಣೆ
ಸಭೆಯಲ್ಲಿ ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್. ರವರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಸಂಘಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈರವರು ಕಾನೂನಿನ ಅವಕಾಶವಿದ್ದರೆ ರೂ.5ಲಕ್ಷ ನೀಡುತ್ತೇನೆ ಎಂದರು. ಅಲ್ಲದೆ ವೈಯುಕ್ತಿಕ ನೆಲೆಯಲ್ಲಿ ರೂ.50,000 ನೀಡುವುದಾಗಿ ಘೋಷಿಸಿದರು.

ನೆರವು ವಿತರಣೆ
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಸೇವಾಂಜಲಿ ಟ್ರಸ್ಟ್ ವತಿಯಿಂದ ಅಸಾಯಕ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಆರ್ಥಿಕ ನೆರವಿನ ಚೆಕ್ ನೀಡಲಾಯಿತು. ರತ್ನಾವತಿ, ಜಾನಕಿ, ಪ್ರೇಮಾ ಹಾಗೂ ವಿಜಯಾರವರಿಗೆ ಶಾಸಕ ಅಶೋಕ್ ಕುಮಾರ್ ರೈರವರು ಚೆಕ್ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here