ನಿರ್ಗತಿಕರಿಗೆ ಬದುಕು ಕಟ್ಟಿಕೊಡುವ ಕೆಲಸ ಧರ್ಮಸ್ಥಳದಿಂದ ಆಗುತ್ತಿದೆ : ದುಗ್ಗೇ ಗೌಡ
ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಹಾಗೂ ಊರವರ ಸಹಕಾರದೊಂದಿಗೆ ಈ ಬಡ ನಿರ್ಗತಿಕ ಕುಟುಂಬಕ್ಕೆ ವಾತ್ಸಲ್ಯ ಎಂಬ ಸೂರು ಕೊಡುವ ಮೂಲಕ ಅವರಿಗೆ ಬದುಕು ಕಟ್ಟಿಕೊಡುವ ಕೆಲಸ ಧರ್ಮಸ್ಥಳದಿಂದ ಆಗಿದೆ. ಬಡವರ, ನಿರ್ಗತಿಕರ ಕಷ್ಟಗಳಿಗೆ ಸದಾ ಸ್ಪಂದನೆ ಕೊಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸದಾ ಮಾಡುತ್ತಾ ಬಂದಿರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ. ಬಾಣಬೆಟ್ಟುವಿನ ಈ ತಾಯಿ, ಮಗಳ ಬದುಕು ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡರವರು ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಒಳಮೊಗ್ರು ಗ್ರಾಮದ ಕೈಕಾರ ಬಾಣಬೆಟ್ಟು ಎಂಬಲ್ಲಿರುವ ಲಲಿತಾ ಮತ್ತು ಸವಿತಾ ಎಂಬ ತಾಯಿ ಮಗಳು ಬಡ ಕುಟುಂಬಕ್ಕೆ ಮಾ.20 ರಂದು ವಾತ್ಸಲ್ಯ ಮನೆ ಹಸ್ತಾಂತರ ಮಾಡಿ ಮಾತನಾಡಿದರು. ಲಲಿತಾರವರ ಕುಟುಂಬಕ್ಕೆ ಕ್ಷೇತ್ರದಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಟ್ಟಿದ್ದು ಅಲ್ಲದೆ ಅವರ ಜೀವನ ನಿರ್ವಹಣೆಗೆ ಮಾಸಿಕ 1ರಿಂದ 1.5 ಸಾವಿರ ರೂಪಾಯಿ ಕೊಡುವ ವ್ಯವಸ್ಥೆಯು ಆಗಲಿದೆ ಎಂದ ಅವರು, ಈ ಮನೆ ನಿರ್ಮಾಣ ಕಾರ್ಯದಲ್ಲಿ ಯೋಜನೆಯೊಂದಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಕುಟುಂಬಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ದೊರೆತಿದೆ. ಮುಂದಕ್ಕೆ ಕುಟುಂಬ ಆರೋಗ್ಯ, ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ಮಾತನಾಡಿ, ವಾತ್ಸಲ್ಯ ಮನೆ ಎಂಬುದು ಧರ್ಮಸ್ಥಳದ ಮಾತೃಶ್ರೀ ಅಮ್ಮನವರ ಕಲ್ಪನೆಯಾಗಿದೆ. ಇದು ಅತ್ಯಂತ ಬಡ ನಿರ್ಗತಿಕ ಕುಟುಂಬಕ್ಕೆ ಕಟ್ಟಿಕೊಡುವ ಮನೆಯಾಗಿದ್ದು ಇಂದು ಬಾಣಬೆಟ್ಟು ಲಲಿತಾ ಮತ್ತು ಸವಿತಾರವರ ಕುಟುಂಬಕ್ಕೆ ಈ ಮನೆ ದೊರೆತಿದೆ. ಮುಂದಕ್ಕೆ ಇವರ ಜೀವನ ಉಜ್ಷಲವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಜಿ.ಮಹಾಬಲ ರೈ ವಳತ್ತಡ್ಕ, ಜನ ಜಾಗೃತಿ ಒಳಮೊಗ್ರು ವಲಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಜನ ಜಾಗೃತಿ ಬಲ್ನಾಡು ವಲಯ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಮೇಲ್ವಿಚಾರಕರಾದ ಜಯಂತಿ, ಯೋಜನೆಯ ಒಳಮೊಗ್ರು ವಲಯ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಜನ ಜಾಗೃತಿ ವೇದಿಕೆಯ ಸದಸ್ಯ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಒಕ್ಕೂಟ ಅಧ್ಯಕ್ಷ ಗೋವಿಂದ ನಾಯ್ಕ್ ಗುರಿಕುಮೇರ್, ಸೇವಾ ಪ್ರತಿನಿಧಿಗಳಾದ ತ್ರಿವೇಣಿ ಪಲ್ಲತ್ತಾರು, ಉಷಾ, ಸವಿತಾ ಎಸ್, ಅಕ್ಷತಾ, ಶಶಿಕಲಾ, ವಿಶಾಲಕ್ಷಿ, ನಳಿನಾಕ್ಷಿ ಮತ್ತು ಜಯಂತಿ ಅಲ್ಲದೆ ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಮಹೇಶ್ ರೈ ಕೇರಿ, ಪ್ರದೀಪ್ ದರ್ಬೆತ್ತಡ್ಕ, ರೇಖಾ, ಮಾಜಿ ಸದಸ್ಯೆ ಉಷಾ ನಾರಾಯಣ್, ನಿವೃತ್ತ ಶಿಕ್ಷಕ ಸುಧಾಕರ ರೈ ಕುಂಬ್ರ, ಒಕ್ಕೂಟ ಅಧ್ಯಕ್ಷೆ ಲಲಿತಾ ಬೊಳ್ಳಾಡಿ, ವಿಪತ್ತು ನಿರ್ವಹಣ ಘಟಕ ಬೆಟ್ಟಂಪಾಡಿ ವಲಯದ ಸದಸ್ಯರುಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು.
ಸೋಲಾರ್ ದೀಪ ಕೊಡುಗೆ:
ವಾತ್ಸಲ್ಯ ಮನೆಗೆ 3 ದೀಪದ ಸೋಲಾರ್ ಲೈಟ್ ವ್ಯವಸ್ಥೆಯನ್ನು ಪುತ್ತೂರು ಪದ್ಮಾ ಸೋಲಾರ್ ಸಿಸ್ಟಮ್‌ನ ಮಾಲಕರು, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರು ಆಗಿರುವ ಪದ್ಮನಾಭ ಶೆಟ್ಟಿಯವರು ಕೊಡುಗೆಯಾಗಿ ನೀಡಿದ್ದಾರೆ.
ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು:
ವಾತ್ಸಲ್ಯ ಮನೆ ಸುಮಾರು 1 ಲಕ್ಷ 50 ಸಾವಿರ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ. ಮನೆ ನಿರ್ಮಾಣಕ್ಕೆ ಧರ್ಮಸ್ಥಳದಿಂದ 1 ಲಕ್ಷ ರೂಪಾಯಿಗಳು ಬಂದಿದ್ದು ಉಳಿದಂತೆ ಸ್ಥಳೀಯ ದಾನಿಗಳು ಸಹಕಾರ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ರಾಜೇಶ್ ರೈ ಪರ್ಪುಂಜ, ಯುವರಾಜ್ ಶೆಟ್ಟಿ ಮೇರ್ಲ, ಗೋವಿಂದ ನಾಯ್ಕ ಗುರಿಕುಮೇರ್, ತ್ರಿವೇಣಿ ಪಲ್ಲತ್ತಾರು, ಸುಧಾಕರ ರೈ ಕುಂಬ್ರ, ರಾಧಕೃಷ್ಣ ರೈ ಬೂಡಿಯಾರ್, ಸಂತೋಷ್ ಕುಮಾರ್ ನಾಲ, ಸವಿತಾ ಎಸ್ ಶೇಖಮಲೆ, ಮೋನಪ್ಪ ಪೂಜಾರಿ ಬಡಕ್ಕೋಡಿ, ಹರೀಶ್ ಬಿಜತ್ರೆ, ಸುಂದರ ಪೂಜಾರಿ ಬೊಳಂತಿಮಾರು, ರೇಖಾ ಯತೀಶ್ ಬಿಜತ್ರೆ, ಕೆ.ಸಿ ಅಶೋಕ್ ಕುಮಾರ್, ಅಶ್ರಫ್ ಉಜಿರೋಡಿ, ಉಷಾ ನಾರಾಯಣ್ ಕುಂಬ್ರ, ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಆಚಾರಿ ಕೊಲತ್ತಡ್ಕ, ಪ್ರಕಾಶ್ಚಂದ್ರ ರೈ ಕೈಕಾರ, ಎಸ್.ಮಾಧವ ರೈ ಕುಂಬ್ರ, ಲಲಿತಾ ಬೊಳ್ಳಾಡಿ, ರತನ್ ರೈ ಕುಂಬ್ರ, ಗಿರೀಶ್ ನಾಯ್ಕ್ ಸಂಟ್ಯಾರ್, ಚಿಗುರು ಸ್ವ.ಸ.ಸಂಘ ಮತ್ತು ಶ್ರೀದೇವಿ ಸ್ವ.ಸ.ಸಂಘ ಒಳಮೊಗ್ರು ಇವರುಗಳು ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ.
ಸುದ್ದಿಯ ವರದಿಗೆ ಶ್ಲಾಘನೆ:
ಕೈಕಾರ ಬಾಣಬೆಟ್ಟು ದಲಿತ ಕುಟುಂಬದ ಸ್ಥಿತಿಗತಿಗಳ ಬಗ್ಗೆ ಸುದ್ದಿ ಚಾನೆಲ್ ಮತ್ತು ಸುದ್ದಿ ಪತ್ರಿಕೆ ಪ್ರಪ್ರಥಮವಾಗಿ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಕುಟುಂಬದವರ ಜೊತೆ ಮಾತುಕತೆ ನಡೆಸಿತ್ತು. ಆ ಬಳಿಕ ಲಲಿತಾರವರ ಕುಟುಂಬಕ್ಕೆ ಧರ್ಮಸ್ಥಳದಿಂದ ವಾತ್ಸಲ್ಯ ಮನೆ ಕಟ್ಟಿಸಿಕೊಡುವುದಾಗಿ ಈ ಸಂದರ್ಭದಲ್ಲಿ ಕುಟುಂಬಕ್ಕೆ ಭರವಸೆ ನೀಡಲಾಗಿತ್ತು. ಅದರಂತೆ ಲಲಿತಾ ಮತ್ತು ಅವರ ಓರ್ವ ಪುತ್ರಿ ಸವಿತಾರವರಿಗೆ ಈ ಮನೆಯನ್ನು ಕಟ್ಟಿಸಿಕೊಡಲಾಗಿದೆ. ಮನೆ ಹಸ್ತಾಂತರ ಸಂದರ್ಭದಲ್ಲೂ ಯೋಜನೆಯ ಅಧಿಕಾರಿಗಳು, ಸ್ಥಳೀಯರು ಸುದ್ದಿ ಬಳಗವನ್ನು ಈ ಸಂದರ್ಭದಲ್ಲಿ ಹೂಗುಚ್ಚ ನೀಡುವ ಮೂಲಕ ಅಭಿನಂದಿಸಿದರು.
ಮನೆಯ ಒಡತಿ ಲಲಿತಾರವರು ತುಳಸಿ ಕಟ್ಟೆಗೆ ಗಿಡ ನೆಟ್ಟು ನೀರೆರೆದು ಆ ಬಳಿಕ ರಿಬ್ಬನ್ ತುಂಡರಿಸಿ ದೇವಳದ ಪ್ರಸಾದದೊಂದಿಗೆ ಮನೆಯೊಡತಿ ಮನೆ ಪ್ರವೇಶಿಸಿದರು. ಮನೆಯೊಳಗೆ ಮಂಜುನಾಥ ಸ್ವಾಮಿಯ ಫೋಟೋ ಎದುರು ದೀಪ ಬೆಳಗಿಸಿ, ಹಾಲು ಉಕ್ಕಿಸುವ ಮೂಲಕ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಬಳಿಕ ಪಾಯಸದೂಟ ನೀಡಲಾಯಿತು.’ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮನೆ ನಿರ್ಮಿಸಿ ಕೊಟ್ಟಿರುವುದು ನಮಗೆ ಬಹಳಷ್ಟು ಖುಷಿ ಕೊಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ಪರಿಸ್ಥಿತಿಯನ್ನು ಸಮಾಜಕ್ಕೆ ಮುಟ್ಟಿಸಿದ ಸುದ್ದಿ ಬಳಗಕ್ಕೆ ಹಾಗೂ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈ ಖುಷಿಯನ್ನು ವರ್ಣಿಸಲು ನಮ್ಮಲ್ಲಿ ಪದಗಳೇ ಇಲ್ಲ…’
-ಲಲಿತಾ ಕುಟುಂಬಸ್ಥರು, ಬಾಣಬೆಟ್ಟು ಕೈಕಾರ