ಪುತ್ತೂರು : ಮಹಿಳೆಯರ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ 5 ಗ್ಯಾರಂಟಿಗಳು ಮಹಿಳೆಯರಿಗೆ ಶಕ್ತಿ ತುಂಬಿದೆ. ಪ್ರಚಾರದ ಸಂದರ್ಭದಲ್ಲಿ ಪ್ರತಿ ಮನೆ ಮನೆಗಳ ಮಹಿಳೆಯರಲ್ಲಿ ಖುಷಿ ಕಾಣಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದ್ದಾರೆ.
ಅವರು ಏ.23ರಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದ. ಕ. ಜಿಲ್ಲೆಯ ಜನತೆ ಈ ಬಾರಿ ಜನತೆ ಬದಲಾವಣೆ ಬಯಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಪರ ಉತ್ತಮ ಸ್ಪಂದನೆ ಇದೆ. ಜನ ಬದಲಾವಣೆ ಬಯಸಿ ಪದ್ಮರಾಜ್‌ರವರನ್ನು ಗೆಲ್ಲಿಸಲಿದ್ದಾರೆ ಎಂದರು. ಕಾಂಗ್ರೆಸ್ ಮಹಿಳೆಯರ ಪರ ಸರಕಾರ. ಇಂದಿರಾಗಾಂಧಿ ಸರಕಾರದಿಂದ ಆರಂಭಗೊಂಡು ರಾಜೀವಗಾಂಧಿ ಆಡಳಿತದಲ್ಲಿ ಸ್ಥಳೀಯಾಡಳಿತಗಳಲ್ಲಿ ಮಹಿಳಾ ಮೀಸಲಾತಿ ನೀಡಲಾಗಿತ್ತು. ದಿನೋಪಯೋಗಿ ವಸ್ತುಗಳು ಗಗನಕ್ಕೇರಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಮೂಲಕ ಮಹಿಳೆಯರ ನೆರವಿಗೆ ನಿಂತಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ಜತೆಗೆ ಕಾಂಗ್ರೆಸ್ ಪಕ್ಷ ಈಗ ಘೋಷಿಸಿರುವ ನಾರಿ ನ್ಯಾಯ, ಮಹಾಲಕ್ಷ್ಮಿ ಯೋಜನೆಗಳ ಮೂಲಕ 1 ಲಕ್ಷ ನೀಡುವುದು ಮಹಿಳೆಯರಲ್ಲಿ ಸ್ವಾವಲಂಬಾನೆಗೆ ಕಾರಣವಾಗಲಿದೆ. ಯುವ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಪ್ರತಿಯೊಬ್ಬರ ಪ್ರಗತಿಗೆ ಪೂರಕವಾಗಲಿದೆ. ಹೆಚ್ಚು ಮತದಾರರಾಗಿರುವ ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದರು. ಕಾಂಗ್ರೆಸ್ ಮಹಿಳಾ ಮುಖಂಡರಾದ ರೂಪರೇಖಾ ಆಳ್ವ, ವೇದಾವತಿ, ಅರುಣಾ ಡಿ. ರೈ, ಜಯಂತಿ ಪಟ್ಟುಮೂಲೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.