ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿಯವರ ಹೇಳಿಕೆ ಅರ್ಥಹೀನ-ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ

0

ಪುತ್ತೂರು: ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಮುಸ್ಲಿಂ ಲೀಗಿನ ಪ್ರಣಾಳಿಕೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅರ್ಥಹೀನ ಮಾತನ್ನು ಹೇಳಿದ್ದಾರೆ. ಪ್ರಧಾನಿಯವರ ಹೇಸಿಗೆ ಹೇಳಿಕೆಯಲ್ಲಿ ಪ್ರಾಮಾಣಿಕತೆ ಇದ್ದರೆ ಅವರು ಯಾವ ಅರ್ಥದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಂತಹಾ ವಿಚಾರಗಳಿವೆ ಎಂಬುದನ್ನು ತಿಳಿಸಬೇಕು. ಪ್ರಣಾಳಿಕೆಯ ಯಾವ ಭಾಗದಲ್ಲಿ ಅವರು ಹೇಳಿದಂತಹ ಮಾತು ಅಡಕವಾಗಿದೆ ತಿಳಿಸಬೇಕು. ಚುನಾವಣೆಯಲ್ಲಿ ಸೋಲಿನ ಭಯದಿಂದ ಅವರು ಹೇಸಿಗೆ ಮಾತು ಅತ್ಯಂತ ಅಸಹ್ಯಕರ, ಅಸಂಬದ್ಧ ಹಾಗೂ ದ್ವೇಷ ರಾಜಕಾರಣದಿಂದ ಕೂಡಿದೆ. ಇದನ್ನು ದೇಶದ ಜನ ಒಕ್ಕೊರಳಿನಿಂದ ಖಂಡಿಸಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಅಮಳ ರಾಮಚಂದ್ರ ಹೇಳಿದರು.


ಏ.23ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ರಾಜಸ್ಥಾನದ ಚುನಾವಣಾ ರ್‍ಯಾಲಿಯಲ್ಲಿ ಹೇಳಿಕೆ ನೀಡಿದ್ದಾರೆ.ಅವರು ಈ ಮಾತನ್ನು ಬಾಯಿ ತಪ್ಪಿನಿಂದ ಹೇಳಿದ್ದಲ್ಲ. ಉತ್ತರ ಪ್ರದೇಶದ ರ್‍ಯಾಲಿಯಲ್ಲಿ ಮತ್ತೆ ಅದೇ ಮಾತನ್ನು ಹೇಳಿದ್ದು ಕೇವಲ ಬಾಯಿ ತಪ್ಪಿನಿಂದ ಭಾಷಣದ ಭರದಲ್ಲಿ ಬಾಯಿ ತಪ್ಪಿ ಹೇಳಿದ್ದಲ್ಲ. ಅವರು ಈ ಹೇಸಿಗೆ ಮಾತನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಇಂತಹ ಮಾತಿನ ಮೂಲಕ ಚುನಾವಣೆಯಲ್ಲಿ ಜನಬೆಂಬಲವನ್ನು ಪಡೆಯುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಒಂದು ಪ್ರಜಾಪ್ರಭುತ್ವ ಅಥವಾ ಒಂದು ನಾಗರಿಕ ಸಮಾಜ ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಪ್ರಧಾನಮಂತ್ರಿಯವರು ಕೇವಲ ಬಿಜೆಪಿಗೆ ಮಾತ್ರ ಪ್ರಧಾನಮಂತ್ರಿಗಳಲ್ಲ, ಅವರು ಈ ದೇಶದ ಎಲ್ಲಾ ನಾಗರಿಕರಿಗೂ ಪ್ರಧಾನ ಮಂತ್ರಿಗಳು. ಪ್ರಧಾನಮಂತ್ರಿಗಳ ಈ ಹೇಸಿಗೆ ಮಾತಿನಿಂದ ದೇಶದ ಪ್ರತಿಯೊಬ್ಬ ನಾಗರಿಕರು ನಾಚಿಕೆಯಿಂದ ತಲೆತಗ್ಗಿಸಿ ನಿಲ್ಲುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಮೋದಿ ಈ ತನಕ ಎಲ್ಲಿಯೂ ಇಂತಹ ಮಾತುಗಳನ್ನು ಹೇಳಿದ್ದಿಲ್ಲ. ಅವರು ನೇರವಾಗಿ ಹೇಳುತ್ತಿರಲಿಲ್ಲ ಅಷ್ಟೇ. ದ್ವೇಷ ಭಾಷಣಗಳನ್ನು ಮಾಡುವುದಕ್ಕೆ ಬಿಜೆಪಿಯಲ್ಲಿ ಪ್ರತ್ಯೇಕ ತಂಡಗಳೇ ಇದ್ದುವು. ಇವುಗಳಿಗೆಲ್ಲ ಪ್ರಧಾನ ಮಂತ್ರಿ ಮೋದಿ ಅವರ ಪರೋಕ್ಷ ಬೆಂಬಲ ಇದೆ. ಈಗ ಬಿಜೆಪಿಯಲ್ಲಿ ದ್ವೇಷ ಭಾಷಣ ಮಾಡುವುದಕ್ಕೆ ತಕ್ಕುದಾದ ಜನರ ಕೊರತೆ ಇರುವುದರಿಂದಲೇ ಪ್ರಧಾನಿ ಮೋದಿಯವರು ಈ ದ್ವೇಷ ಭಾಷಣವನ್ನು ಮಾಡಿದ್ದಾರೆ. ಪ್ರಧಾನಿಯವರ ಹೇಳಿಕೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಗಳು ಕಾಂಗ್ರೆಸ್‌ನ ಪ್ರಣಾಳಿಕೆಯಲಿಲ್ಲ. ಅವರಿಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ರೀತಿ ಇದೆ ಎಂದು ಕನಸು ಬಿದ್ದಿರಬೇಕು. ತಮಗೆ ತಾವೇ ಕಲ್ಪನೆಗಳನ್ನು ಮಾಡಿಕೊಂಡು, ತಮ್ಮ ಕಲ್ಪನೆಯಂತೆ ವಿಶ್ಲೇಷಿಸಿ, ಕಾಂಗ್ರೆಸ್ ಮಾಡದ ತಪ್ಪನ್ನು ಅದರ ಮೇಲೆ ಹಾಕಿದ್ದಾರೆ. ಪ್ರಧಾನ ಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಅವರು ಚುನಾವಣೆಯಲ್ಲಿ ಲಾಭ ಗಳಿಸುವುದು ಉದ್ದೇಶದಿಂದ ಇಂತಹಾ ಹೇಸಿಗೆ ಹೇಳಿಕೆಯನ್ನು ನೀಡುತ್ತಿರುವುದು ಖಂಡನೀಯವಾಗಿದೆ.

ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿ ಸಂಪತ್ತಿನ ಮತ್ತು ಅವಕಾಶಗಳ ಸಮಾನ ಹಂಚಿಕೆಯನ್ನು ಮಾಡುವುದಕ್ಕೆ ಬದ್ಧತೆಯನ್ನು ತೋರಲಾಗಿದೆ. ಇದನ್ನು ಜಾರಿ ಮಾಡುವುದಕ್ಕಾಗಿ ಅನೇಕ ಯೋಜನೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಂಪತ್ತಿನ ಸಮಾನ ಹಂಚಿಕೆ ಉದ್ದೇಶದಿಂದಲೇ ಐದು ಗ್ಯಾರಂಟಿಯನ್ನು ರಾಜ್ಯದ ಜನರಿಗೆ ನೀಡಲಾಯಿತು. ಮತ್ತು ಅಧಿಕಾರಕ್ಕೆ ಬಂದ ನಂತರ ಈ ಐದು ಗ್ಯಾರಂಟಿಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈ ಚುನಾವಣೆಯಲ್ಲಿ ಬಿಜೆಪಿಗೆ ಏನಾದರೂ ಅಧಿಕ ಸ್ಥಾನಗಳು ಬಂದು ಹೋದರೆ ಅವರು ಆಪರೇಷನ್ ಮಾಡಿ ಸರಕಾರವನ್ನು ಬೀಳಿಸುವ ಎಲ್ಲಾ ಪ್ರಯತ್ನವನ್ನು ಮಾಡಿಯೇ ಮಾಡುತ್ತಾರೆ. ಒಂದು ವೇಳೆ ಅವರು ಯಶಸ್ವಿಯಾದರೆ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ. ಚುನಾವಣೆ ಕಳೆದ ಆರು ತಿಂಗಳಲ್ಲಿ ಸರಕಾರವನ್ನು ಬೀಳಿಸುವ ಮಾತನಾಡುತ್ತಿದ್ದಾರೆ. ಹೀಗಾಗಿ ಗ್ಯಾರೆಂಟಿಗಳಿಗೆ ಯಶಸ್ವಿಯಾಗಿ ಮುಂದುವರಿಯಬೇಕಾದರೆ ಜನ ಕಾಂಗ್ರೆಸ್ಸನ್ನು ಬೆಂಬಲಿಸಬೇಕಾದಾಗ ಅಗತ್ಯ ಇದೆ. ಅವರು ಸಂಪತ್ತಿನ ಸಮಾನ ಹಂಚಿಕೆಯ ವಿರೋಧಿಗಳಲಾಗಿದ್ದಾರೆ ಎಂದು ಅವರು ಆರೋಪಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಡಿದ ಆರೋಪಿಯನ್ನು ಸರಕಾರ ಬಂಧಿಸಿ ಸಿಓಡಿ ತನಿಖೆಗೆ ವಹಿಸಿದೆ. ಈ ಘಟನೆ ಬಿಜೆಪಿಗೆ ಅಸ್ತ್ರವಾಗಿದೆ. ನೇಹಾ ತಂದೆ ತಾಯಿ ಕಾಂಗ್ರೆಸ್ ಪಕ್ಷದವರು. ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದೆ. ಅಲ್ಲಿ ಹತ್ಯೆ ಮಾಡಿದವ ಮುಸ್ಲಿಂ ಅಲ್ಲ. ಅಲ್ಲಿಗೇ ಬಿಜೆಪಿ ಹೋಗಿಲ್ಲ. ಸೌಜನ್ಯ ಹತ್ಯೆ, ನೇರಳಕಟ್ಟೆಯಲ್ಲಿ ಶಕುಂತಳಾ, ಪುತ್ತೂರಿನಲ್ಲಿ ಗೌರಿ ಹತ್ಯೆಯ ಬಗ್ಗೆ ಬಿಜೆಪಿಯವರು ಮಾತನಾಡಿಲ್ಲ. ತನ್ನ ಕ್ಷೇತ್ರದಲ್ಲಿ ಎರಡು ಘಟನೆ ನಡೆದರೂ ಮಾತನಾಡದ ಸಂಜೀವ ಮಠಂದೂರವರಿಗೆ ಮಾತನಾಡುವ ಯೋಗ್ಯತೆಯಿಲ್ಲ ಎಂದು ತಿಳಿಸಿದರು. ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷಣ್ ರೈ ಬನ್ನೂರು, ನಗರ ಕಾಂಗ್ರೆಸ್ ಕಾರ್ಯದರ್ಶಿ ವಿಕ್ಟರ್ ಪಾಯಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎಸ್‌ಡಿಪಿಐ ಲೆಕ್ಕಕ್ಕಿಲ್ಲ
ಎಸ್‌ಡಿಪಿಐ ಪಕ್ಷದ ಬೆಂಬಲವನ್ನು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ತಿರಸ್ಕರಿಸಿದೆ. ಕರ್ನಾಟಕದಲ್ಲಿಯೂ ಲೆಕ್ಕಕ್ಕಿಲ್ಲ. ಇಲ್ಲಿ ಅವರು ಬೆಂಬಲ ಕೊಡುವುದಾಗಿ ಹೇಳಿಯೂ ಇಲ್ಲ. ಕಾಂಗ್ರೆಸ್ ಅವರ ಬಳಿ ಬೆಂಬಲ ಕೇಳುವುದೂ ಇಲ್ಲ. ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಹೇಳಿದರು.

LEAVE A REPLY

Please enter your comment!
Please enter your name here