@ ಸಿಶೇ ಕಜೆಮಾರ್
ಬೇಸಿಗೆಯ ರಣ ಬಿಸಿಲು ಒಂದು ಕಡೆಯಲ್ಲಿ ಭೂಮಿಯನ್ನು ಒಣಗಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದಾಗಿ ಜನರು ಅದರಲ್ಲೂ ಮಕ್ಕಳು, ಹಸುಗೂಸುಗಳು ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಶಾಖದ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದಲೇ ಆರಂಭವಾಗುವ ಬಿಸಿಯಾದ ತಾಪಮಾನ ಸಂಜೆ 4 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ರಣ ಬಿಸಿಲು ಚರ್ಮ ಹಾಗೂ ಹೊಟ್ಟೆಗೆ ಸಂಬಂಧಿಸಿದ ಅಜೀರ್ಣದಂತಹ ಅನಾರೋಗ್ಯದ ಅಪಾಯಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಬಿಸಿಲಿನ ತಾಪಮಾನದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಅತೀ ಅಗತ್ಯ. ಈ ನಿಟ್ಟಿನಲ್ಲಿ ನಾವೇನು ಮಾಡಬಹುದು ಎಂಬ ಬಗ್ಗೆ ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನೀಡಲಾಗಿದೆ.
ಬಿಸಿಲಿಗೆ ಹೋಗುವುದನ್ನು ತಪ್ಪಿಸಿ
ಮಕ್ಕಳಿಗೆ ಆಟವಾಡುವುದು ಎಂದರೆ ಖುಷಿ. ಎಷ್ಟು ಹೇಳಿದರೂ ಮಕ್ಕಳು ಕೇಳುವುದಿಲ್ಲ. ಆದ್ದರಿಂದ ಬಿಸಿಲಿನಲ್ಲಿ ಆಟವಾಡುವುದನ್ನು ತಪ್ಪಿಸಿ. ಅದರಲ್ಲೂ ಮಧ್ಯಾಹ್ನದ ಹೊತ್ತಲ್ಲಿ ಬಿಸಿಲಿಗೆ ಹೋಗದಂತೆ ನೋಡಿಕೊಳ್ಳಿ. ಬಿಸಿಲಿನಿಂದ ಮಕ್ಕಳ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಈಜು ಅಥವಾ ತಣ್ಣೀರಿನ ಸ್ನಾನ ಮಾಡಿಸಿ
ಬೇಸಿಗೆಯಲ್ಲಿ ಮಕ್ಕಳಿಗೆ ನೀರಲ್ಲಿ ಆಟವಾಡುವುದು ಎಂದರೆ ಏನೋ ಖುಷಿ. ಮನೆಯಲ್ಲಿರುವ ಮಕ್ಕಳು ಬಿಸಿಲಿನ ತಾಪಮಾನದಿಂದ ಜಾಸ್ತಿ ಕಿರಿಕಿರಿ ಅನುಭವಿಸುವುದು ಗಮನಕ್ಕೆ ಬಂದರೆ ತಕ್ಷಣವೆ ಅವರಿಗೆ ತಣ್ಣೀರಿನ ಸ್ನಾನ ಮಾಡಿಸಿ ಅಥವಾ ನೀರಿನ ಟಬ್ ಅಥವಾ ಈಜು ಕೊಳದಲ್ಲಿ ನೀರು ತುಂಬಿಸಿ ಈಜಾಟವಾಡಲು ಬಿಡಿ. ಇದು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಸಿ
ಬೇಸಿಗೆಯಲ್ಲಿ ಜಾಸ್ತಿಯಾಗಿ ನಿರ್ಜಲೀಕರಣಕ್ಕೆ ಮಕ್ಕಳು ತುತ್ತಾಗದಂತೆ ನೋಡಿಕೊಳ್ಳಬೇಕಾಗಿದೆ. ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ನೀರನ್ನು ಕುಡಿಸುವುದು ಒಳ್ಳೆಯದು. ಕುದಿಸಿ ಆರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಕೊಡುವುದರಿಂದ ಅವರು ನಿರ್ಜಲೀಕರಣದಿಂದ ಬಳಲುವುದನ್ನು ತಪ್ಪಿಸಬಹುದಾಗಿದೆ.
ಮೂತ್ರದ ಬಣ್ಣವನ್ನು ಗಮನಿಸಿ
ಬೇಸಿಗೆಯಲ್ಲಿ ದೇಹವು ಹೀಟ್ ಆಗುವುದರಿಂದ ಮೂತ್ರದ ಬಣ್ಣದಲ್ಲಿ ಬದಲಾವಣೆ ಕಂಡು ಬರುತ್ತದೆ. ದೇಹದಲ್ಲಿ ಉಷ್ಣಾಂಶ ಜಾಸ್ತಿಯಾದೊಡನೆ ಮೂತ್ರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಮಕ್ಕಳ ಮೂತ್ರದ ಬಣ್ಣವನ್ನು ಗಮನಿಸಿ, ಒಂದೊಮ್ಮೆ ಮೂತ್ರದ ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ ಮತ್ತಷ್ಟು ಚೆನ್ನಾಗಿ ನೀರು ಕುಡಿಸಿ, ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.
ಹತ್ತಿಯಿಂದ ಕೂಡಿದ ಬಟ್ಟೆಗಳನ್ನೇ ಬಳಸಿ
ಬೇಸಿಗೆಯಲ್ಲಿ ಮಕ್ಕಳ ಬಟ್ಟೆಗಳ ಬಗ್ಗೆ ಗಮನ ಹರಿಸುವುದು ಅತೀ ಅಗತ್ಯ. ಮಕ್ಕಳಿಗೆ ಹತ್ತಿಯ ಬಟ್ಟೆಗಳನ್ನೇ ಹೆಚ್ಚಾಗಿ ಬಳಸಿ. ರಾತ್ರಿ ಮಲಗುವಾಗಲೂ ಹತ್ತಿಯ ಬೆಡ್‌ಶೀಟ್ ಬಳಸಿ ಇದು ಮಕ್ಕಳಿಗೆ ಹಿತವಾಗಿರುತ್ತದೆ. ಹಸುಗೂಸು ಅಥವಾ ಪುಟಾಣಿ ಮಕ್ಕಳು ಮಲಗಿರುವಾಗ ಅವರ ಮೇಲೆ ದಪ್ಪ ಹೊದಿಕೆ ಹಾಕಬೇಡಿ. ಸಾಧ್ಯವಾದಷ್ಟು ಮಗುವಿನ ಮೇಲೆ ತಂಗಾಳಿ ಬೀಸುತ್ತಿರುವಂತೆ ವ್ಯವಸ್ಥೆ ಮಾಡಿ. ಮಕ್ಕಳಿಗೆ ಕಿರಿಕಿರಿಯುಂಟು ಮಾಡುವ ಬಟ್ಟೆಗಳನ್ನು ಧರಿಸಬೇಡಿ. ಜೀನ್ಸ್, ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಲು ಹೋಗಬೇಡಿ. ಇದು ಮಕ್ಕಳ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು.
ಪ್ರವಾಸ ಮಾಡುವ ಮುನ್ನ ಎಚ್ಚರವಿರಲಿ
ಇತ್ತೀಚಿನ ಕೆಲವು ದಿನಗಳಿಂದ ತಾಪಮಾನ ಏರುತ್ತಲೇ ಇದೆ. ಆದ್ದರಿಂದ ಮಕ್ಕಳೊಂದಿಗೆ ಪ್ರವಾಸ ಮಾಡುವುದು ಬೇಡ. ಒಂದೊಮ್ಮೆ ಪ್ರವಾಸ ಹೋಗಲೇಬೇಕು ಅಂತ ಡಿಸೈಡ್ ಮಾಡಿಕೊಂಡಿದ್ದರೆ ಮೊದಲು ನೀವು ಹೋಗುವ ಸ್ಥಳದ ಬಗ್ಗೆ ಅಲ್ಲಿನ ತಾಪಮಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಜಾಸ್ತಿ ಬಿಸಿಲು ಇರುವಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಡಿ.
ಆರೋಗ್ಯಕರ ಪಾನೀಯ, ಆಹಾರ ಕೊಡಿ
ಮಕ್ಕಳಿಗೆ ಜಾಸ್ತಿಯಾಗಿ ಐಸ್ ಹಾಕಿದ ತಂಪು ಪಾನೀಯ ಕೊಡಲು ಹೋಗಬೇಡಿ. ಸಾಧ್ಯವಾದಷ್ಟು ಆರೋಗ್ಯಕರ ನೈಸರ್ಗಿಕ ಪಾನೀಯಗಳನ್ನೇ ಕೊಡಿ. ಎಳನೀರು, ಮನೆಯಲ್ಲೇ ತಯಾರಿಸಿದ ಮಜ್ಜಿಗೆ, ಲಿಂಬೆ ಜ್ಯೂಸ್, ಕಬ್ಬು ಜ್ಯೂಸ್, ಕಲ್ಲಂಗಡಿ ಜ್ಯೂಸ್ ಇತ್ಯಾದಿಗಳನ್ನು ಕೊಡಿ. ಇದು ಮಕ್ಕಳ ದೇಹಕ್ಕೆ ಉಲ್ಲಾಸ ಕೊಡುತ್ತದೆ. ಆಹಾರದ ವಿಷಯದಲ್ಲೂ ಗಮನ ಇರಲಿ. ಜಂಕ್ ಫುಡ್‌ಗಳನ್ನು ಕೊಡಬೇಡಿ. ಚಹಾ, ಕಾಫಿ ಇತ್ಯಾದಿಗಳು ಬೇಡ.
ವೈದ್ಯರನ್ನು ಸಂಪರ್ಕಿಸಿ
ಬೇಸಿಗೆಯಲ್ಲಿ ಜಾಸ್ತಿಯಾಗಿ ಮಕ್ಕಳಿಗೆ ಹೊಟ್ಟೆಗೆ ಸಂಬಂಧಿಸಿದ ಅಜೀರ್ಣದಂತಹ ಕೆಲವೊಂದು ಅನಾರೋಗ್ಯ ಕಂಡು ಬರುತ್ತದೆ. ಈ ಬಗ್ಗೆ ನಿರ್ಲಕ್ಷ್ಯ ಬೇಡ. ತಕ್ಷಣವೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಔಷಧಿಗಳನ್ನು ಪಡೆದುಕೊಳ್ಳಿ.
ʼಬೇಸಿಗೆಯಲ್ಲಿ ಮಕ್ಕಳ ಬಗ್ಗೆ ನಿಗಾ ಇರಲಿ. ಹುಳಿ, ಖಾರ, ಮಸಾಲ ಪದಾರ್ಥಗಳನ್ನು ಕೊಡಬೇಡಿ. ಲಿಕ್ವಿಡ್ ಫುಡ್ ಜಾಸ್ತಿ ಕೊಡಿ. ಐಸ್ ಹಾಕಿದ ತಂಪು ಪಾನೀಯ ಒಳ್ಳೆಯದಲ್ಲ. ಬಿಸಿಲಿನಿಂದ ಮಕ್ಕಳ ಚರ್ಮದ ಮೇಲೆ ಕಜ್ಜಿಯಂತಹ ಅಲರ್ಜಿ, ಹೊಟ್ಟೆಯಲ್ಲಿ ಅಜೀರ್ಣದಂತಹ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ತಣ್ಣೀರಿನಲ್ಲಿ ಸ್ನಾನ ಅಥವಾ ಮೈ ಉಜ್ಜುವುದು ಒಳ್ಳೆಯದು. ಇದು ಮಕ್ಕಳ ದೇಹವನ್ನು ತಂಪಾಗಿರಿಸುತ್ತದೆ. ಹೆಚ್ಚಿನ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿರಿ.ʼ
ಡಾ| ಮುರಳೀಕೃಷ್ಣ ರೈ ಕುಂಬ್ರ, ಚಿರಾಯು ಕ್ಲಿನಿಕ್