ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸ.ನಂ.61ರಲ್ಲಿರುವ ಊರಮಾಲ್ ಕೋಟಿ ಚೆನ್ನಯ ಗರೋಡಿ ಜಾಗದಲ್ಲಿ ಈಗಾಗಲೇ ಕೊಳವೆಬಾವಿ(ಬೋರ್ ವೆಲ್) ಕೊರೆಯಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಿಕ್ಕಿರುತ್ತದೆ. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು ಸಂಪರ್ಕ ಸಿಕ್ಕಿದೊಡನೆ ಬೆಳ್ಳಿಪಾಡಿ ಊರಮಾಲ್ ಮನೆತನ, ಗ್ರಾಮಸ್ಥರು ಮತ್ತು ಸಾರ್ವಜನಿಕರ ಉಪಸ್ಥಿತಿಯಲ್ಲಿ ಕೊಳವೆಬಾವಿಯ ಉದ್ಘಾಟನೆ ನಡೆಯಲಿದೆ ಎಂದು ಬೆಳ್ಳಿಪಾಡಿ ಊರಮಾಲ್ ಕೋಟಿ ಚೆನ್ನಯ ಗರೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೆಳ್ಳಿಪಾಡಿ ಊರಮಾಲ್ ಗುಣಶೇಖರ ರೈ ತಿಳಿಸಿದ್ದಾರೆ.
ಕಳೆದ 80 ವರ್ಷಗಳಿಂದ ಬೆಳ್ಳಿಪಾಡಿ ಊರಮಾಲ್ ಮನೆತನದವರ ಸಾರ್ವಜನಿಕವಾಗಿ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದ ಕೋಟಿ ಚೆನ್ನಯರ ನೇಮ ಕಾರಣಾಂತರಗಳಿಂದ ನಿಂತುಹೋಗಿದೆ. ಆದರೆ ಪ್ರತಿವರ್ಷ, ಪ್ರತಿ ತಿಂಗಳು ಕೋಟಿ ಚೆನ್ನಯರ ಆರಾಧನೆ, ತಂಬಿಲ ನಿರಾತಂಕವಾಗಿ ನಡೆಯುತ್ತಿದೆ. ಜೀರ್ಣೋದ್ಧಾರ ಕಾರ್ಯಕ್ಕಾಗಿ ಎಲ್ಲಾ ಗುಡಿಗಳನ್ನು ತೆಗೆದು ಕಳೆದ 4 ವರ್ಷಗಳಿಂದ ಕೋಟಿ ಚೆನ್ನಯರ ವಿಗೃಹವನ್ನು ಬಾಲಾಲಯದಲ್ಲಿಟ್ಟು ಆರಾಧನೆ, ತಂಬಿಲದಂತಹ ಕಾರ್ಯಗಳನ್ನು ಬೆಳ್ಳಿಪಾಡಿ ಊರಮಾಲ್ ಮನೆತನದವರು ನಡೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ಕೋಟಿ ಚೆನ್ನಯರ ಗರೋಡಿ ಜಾಗದ ಕುರಿತು ನಡೆಯುತ್ತಿದ್ದ ವ್ಯಾಜ್ಯಕ್ಕೆ(ಸಿ ನಂ.ಆರ್‌ಇವಿಎಸ್‌ಆರ್ 25/2019) ಸಂಬಂಧಪಟ್ಟಂತೆ ಪುತ್ತೂರು ಏಸಿ ಕೋರ್ಟ್ ಈ ಜಾಗ ಕೋಟಿ ಚೆನ್ನಯರ ಗರೋಡಿ ಜಾಗವಾಗಿರುತ್ತದೆ ಎಂದು ತೀರ್ಪು ನೀಡಿದೆ. ಮಾತ್ರವಲ್ಲದೆ, ಜೀರ್ಣೋದ್ಧಾರ ಕಾರ್ಯ ನಡೆಸುವ ಸಲುವಾಗಿ ಬೆಳ್ಳಿಪಾಡಿ ಊರಮಾಲ್ ಮನೆತನದವರು ಈ ಜಾಗದಲ್ಲಿ ನಿರ್ಮಿಸಿರುವ ಕಟ್ಟಡವು ಈ ಗರೋಡಿಗೆ ಸಂಬಂಧಪಟ್ಟದ್ದೆಂದು ತೀರ್ಪು ನೀಡಿದೆ ಎಂದು ಬೆಳ್ಳಿಪಾಡಿ ಊರಮಾಲ್ ಗುಣಶೇಖರ ರೈ ತಿಳಿಸಿದ್ದಾರೆ.