ಆರು ವರ್ಷದಲ್ಲೇ ಉಪಯೋಗ ಶೂನ್ಯವಾದ ದೋಣಿ – ನಿರ್ವಹಣೆಯಿಲ್ಲದೆ ಹಾಳು- ಲಕ್ಷಾಂತರ ರೂಪಾಯಿ ಪೋಲು

0

ಉಪ್ಪಿನಂಗಡಿ: ನೆರೆ ಬಂದ ಸಂದರ್ಭ ರಕ್ಷಣೆಗೆಂದು ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒದಗಿಸಲಾದ ಮರ ಮತ್ತು ಫೈಬರ್ ಅನ್ನು ಜೋಡಿಸಿ ಮಾಡಲಾಗಿರುವ ದೋಣಿಯೊಂದು ಸರಿಯಾದ ನಿರ್ವಹಣೆಯಿಲ್ಲದೇ, ಆರು ವರ್ಷಗಳ ಕಾಲವೂ ಬಾಳಿಕೆ ಬರುವಲ್ಲಿ ವಿಫಲವಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಈ ದೋಣಿಯನ್ನು ಈಗಲೂ ನೇತ್ರಾವತಿ ನದಿಯಲ್ಲಿ ಅನಾಥವಾಗಿ ಕಟ್ಟಿಹಾಕಲಾಗಿದೆ.

ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರವಾಗಿರುವ ಉಪ್ಪಿನಂಗಡಿಯು ನೆರೆ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ನೆರೆ ಬಂದ ಸಂದರ್ಭ ರಕ್ಷಣೆಗೆ ಇಲ್ಲಿಗೊಂದು ದೋಣಿಯ ವ್ಯವಸ್ಥೆ ಕಲ್ಪಿಸಬೇಕೆನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. 2014ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು ಉಪ್ಪಿನಂಗಡಿಗೆ ಸೀಮೆ ಎಣ್ಣೆ ಚಾಲಿತ ಒಬಿಎಂ ಯಂತ್ರ ಸಹಿತ ದೋಣಿಯೊಂದನ್ನು ಕಲ್ಪಿಸಲಾಯಿತು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ಅದನ್ನು ನದಿಗೆ ಇಳಿಸಲಾಯಿತು. ದೋಣಿ ಬಂದರೂ, ಎರಡು ವರ್ಷಗಳ ಕಾಲ ಅದಕ್ಕೆ ಅಂಬಿಗನ ವ್ಯವಸ್ಥೆ ಮಾಡಿರಲಿಲ್ಲ. 2016ರಿಂದ ಗೃಹ ರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡ ರಚನೆಯಾಗಿದ್ದು, ಆ ಬಳಿಕ ದೋಣಿಗೆ ಅಂಬಿಗನ ನೇಮಕವೂ ಆಯಿತು. ಆದರೆ 2018ರಲ್ಲಿ ಇದರ ಒಬಿಎಂ ಮೆಷಿನ್ ದುರಸ್ತಿಗೆ ಬಂತು. ಆಗ ಗೃಹ ರಕ್ಷಕ ಇಲಾಖೆಯವರು ಅದನ್ನು ದುರಸ್ತಿ ಮಾಡಿಸಿ, ಅದನ್ನು ಅವರ ಬಳಿಯೇ ಇಟ್ಟುಕೊಂಡರು. ಅದು ಸೀಮೆ ಎಣ್ಣೆ ಚಾಲಿತ ಯಂತ್ರವಾಗಿದ್ದರಿಂದ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯ ಲಭ್ಯತೆ ಇಲ್ಲದ್ದರಿಂದಾಗಿ ಆ ಬಳಿಕವೂ ದೋಣಿಯ ಒಬಿಎಂ ಯಂತ್ರ ಬಳಕೆಗೆ ಬರಲಿಲ್ಲ. ಆದರೂ ಈಗಲೂ ಆ ಯಂತ್ರವನ್ನು ಗೃಹ ರಕ್ಷಕದಳದವರೇ ವರ್ಷಕ್ಕೊಮ್ಮೆ ಸರ್ವೀಸ್ ಮಾಡಿಸಿಕೊಂಡು, ಅದರ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ವರ್ಷ ಮಾತ್ರ ಈ ದೋಣಿಗೆ ಬೇಸಿಗೆಯಲ್ಲಿ ಬಿಸಿಲು ತಾಗದಂತೆ ನದಿ ದಡದಲ್ಲಿ ಟರ್ಫಾಲಿನ್ ಹಾಕಿ ದೋಣಿಯನ್ನು ರಕ್ಷಣೆ ಮಾಡಿದ್ದು ಬಿಟ್ಟರೆ, ಆಮೇಲೆ ಪ್ರತಿ ವರ್ಷವೂ ಈ ದೋಣಿ ಮಳೆ- ಬಿಸಿಲಿಗೆ ಮೈಯೊಡ್ಡಿ ನಿಂತಿತ್ತು. 2020ರಲ್ಲಿ ದೋಣಿಯ ಒಂದೊಂದೇ ಮರದ ತುಂಡುಗಳು ಕಳಚಿ ಬೀಳಲು ಆರಂಭವಾಯಿತು. ಎಲ್ಲಿಯವರೆಗೆ ಅಂದರೆ ಒಬಿಎಂ ಮೆಷಿನ್ ಜೋಡಿಸುವ ದೋಣಿಯ ಜಾಗವೇ ಕಳಚಿ ಬಿದ್ದಿತ್ತು. ಆ ಬಳಿಕ ಈ ದೋಣಿ ಉಪಯೋಗ ಶೂನ್ಯವಾಗಿದೆ. ಈಗಂತೂ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಆದರೂ ಇದು ಈಗಲೂ ನದಿಯಲ್ಲೇ ಬಂಧನದಲ್ಲಿದ್ದು, ಮಳೆಗಾಲದಲ್ಲಿ ನದಿಯ ನೀರು ಹೆಚ್ಚಾದಾಗ ಮೇಲೆ ಬರುತ್ತದೆ. ನದಿಯ ನೀರು ಕಡಿಮೆಯಾದಾಗ ನದಿಯ ಕೆಳಗೆ ಹೋಗುತ್ತದೆ.

ನಿರ್ವಹಣೆಯಿಲ್ಲ: ದ.ಕ. ಜಿಲ್ಲಾಡಳಿತ ಈ ದೋಣಿಯನ್ನು ಇಲ್ಲಿಗೆ ಒದಗಿಸಿದ್ದರೂ, ಇದನ್ನು ಯಾವುದೇ ಇಲಾಖೆಯ ಸುಪರ್ದಿಗೆ ಒಪ್ಪಿಸಿರಲಿಲ್ಲ. ಕಂದಾಯ ಇಲಾಖೆಯು ಇದರ ನಿರ್ವಹಣೆಗೆ ಒತ್ತು ನೀಡಿರಲಿಲ್ಲ. ಇದಕ್ಕೆ ಕಂದಾಯ ಇಲಾಖೆ ಅಂಬಿಗನನ್ನು ನೇಮಿಸಿದ್ದರೂ, ಅವರಿಗೆ ಮಳೆಗಾಲದಲ್ಲಿ ವರ್ಷದ ಮೂರು ತಿಂಗಳು ಮಾತ್ರ ಅಲ್ಲಿ ಕೆಲಸ. ಆ ಬಳಿಕ ದೋಣಿ ಅನಾಥ. ಅಂಬಿಗನಿದ್ದಾಗ ಅವರು ಅದನ್ನು ಶುಚಿಯಾಗಿಡೋದು, ಅದರ ನೀರು ತೆಗೆಯೋದು ಮಾಡುತ್ತಿದ್ದರು. ಆದರೆ ಅವರು ನಿಧನರಾಗಿದ್ದು, 2021ರ ಬಳಿಕ ಆ ದೋಣಿ ಚಾಲನೆಗೆ ಅರ್ಹವಾಗಿಲ್ಲದಿದ್ದರೂ, ಗೃಹ ರಕ್ಷಕ ದಳದವರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದವರು ಈ ಕೆಲಸ ಮಾಡುತ್ತಿದ್ದರು. ಅವರಿಗೂ ಕೂಡಾ ಅಲ್ಲಿ ಕೆಲಸವಿದ್ದದ್ದು ಮಳೆಗಾಲದಲ್ಲಿ ವರ್ಷದ ನಾಲ್ಕು ತಿಂಗಳು ಮಾತ್ರ. ಹಾಗಾಗಿ ಆ ಬಳಿಕ ಆ ದೋಣಿಯ ಹತ್ತಿರ ಸುಳಿಯುವವರೇ ಇರಲಿಲ್ಲ.

ದುಡ್ಡು ಪೋಲು, ಹೆಚ್ಚಿನ ಪ್ರಯೋಜನವೂ ಇಲ್ಲ: ಈ ದೋಣಿ ನೆರೆಯಂತಹ ತುರ್ತು ಸಂದರ್ಭಕ್ಕೆ ಹೇಳಿದ ದೋಣಿಯಲ್ಲ. ಇದು ಪ್ರವಾಸೋದ್ಯಮ ಕೇಂದ್ರಕ್ಕೋ, ಸಮುದ್ರದಲ್ಲಿ ಸಂಚಾರಕ್ಕೆ ಹೇಳಿ ಮಾಡಿಸಿದಂತಿತ್ತು. ಯಾಕಂದರೆ ಭಾರವಾಗಿರುವ ಈ ದೋಣಿಯನ್ನು ನದಿಯಿಂದ ಮೇಲಕ್ಕೆತ್ತಲು, ನದಿಗೆ ಇಳಿಸಲು ಕ್ರೇನ್ ಸಹಾಯವನ್ನೇ ಪಡೆಯಬೇಕು. ನೆರೆಯ ಸಂದರ್ಭದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿದರೂ ಅಲ್ಲಿ ಅದನ್ನು ವಾಹನದಿಂದ ಇಳಿಸಲು ಮತ್ತೆ ಕ್ರೇನ್‌ನ ಸಹಾಯ ಪಡೆಯಬೇಕು. ಇದು ನೆರೆ ಬಂದಾಗ ನದಿಯಲ್ಲೇ ಆ ಕಡೆ, ಈಕಡೆ ಸಂಚರಿಸಲು ಉಪಯೋಗಕ್ಕೆ ಬರಬಹುದಿತ್ತೇ ವಿನಹ ನದಿಯಿಂದ ಹೊರಗೆ ತಂದು ತುರ್ತು ಕಾರ್ಯಾಚರಣೆಗೆ ಬಳಸಲು ಸಾಧ್ಯವಾಗುತ್ತಿರಲಿಲ್ಲ. ನದಿಯಲ್ಲಿ ನೀರು ಕಡಿಮೆ ಇದ್ದಾಗ ಈ ದೋಣಿಯನ್ನು ಕೊಂಡೊಯ್ದರೆ ಬೋಟಿನ ಎಂಜಿನಿಗೆ ಕಲ್ಲು-ಬಂಡೆಗಳು ತಾಗಿ ಅದು ಹಾಳಾಗುವ ಭೀತಿಯೂ ಇತ್ತು. ಆದ್ದರಿಂದ ಈ ದೋಣಿಯಿಂದ ಹೆಚ್ಚಿನ ಪ್ರಯೋಜನ ಇಲ್ಲಿಗೆ ಸಿಕ್ಕಿಲ್ಲ. ಗೃಹ ರಕ್ಷಕದಳದವರಲ್ಲಿದ್ದ ರಬ್ಬರ್ ದೋಣಿಯನ್ನೇ ಈ ಭಾಗದಲ್ಲಿ ಕಾರ್ಯಾಚರಣೆಗೆ ಬಳಸಿದ್ದೇ ಹೆಚ್ಚು.

ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಲಾದ ಈ ದೋಣಿಯು ಕೆಲವೇ ವರ್ಷ ಮಾತ್ರ ಬಾಳಿಕೆ ಬಂದಿದ್ದು, ಈಗ ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿದೆ. ದೋಣಿಯ ಮರದ ತುಂಡುಗಳು ಕಳಚಿ ಹೋಗಿರುವುದು ಒಂದೆಡೆಯಾದರೆ, ದೋಣಿಯ ಕೆಳಗೆ ಹಾಸಲಾಗಿರುವ ಫೈಬರ್ ಕೂಡಾ ಎದ್ದು ಬರುತ್ತಿದೆ. ಮಳೆ ನೀರು ನಿಂತು ಈ ದೋಣಿ ಈಗ ಸೊಳ್ಳೆ ಉತ್ಪಾದನಾ ತಾಣವಾಗಿ ಬದಲಾಗಿದ್ದು, ಆದ್ದರಿಂದ ಕಂದಾಯ ಇಲಾಖೆಯವರು ಈ ಬಾರಿಯಾದರೂ ಈ ದೋಣಿಯನ್ನು ಇಲ್ಲಿಂದ ವಿಲೇವಾರಿ ಮಾಡಬೇಕಿದೆ.

LEAVE A REPLY

Please enter your comment!
Please enter your name here