ಪುತ್ತೂರು: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ, ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು, ಶ್ರೀ ಪತಂಜಲಿ ಯೋಗ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರ ತುಮಕೂರು, ಮೈಸೂರು, ಆಯುಷ್ ಇಲಾಖೆ ಹಾಗೂ ದ.ಕ. ಜಿಲ್ಲಾಡಳಿತದ ಸಹಯೋಗದೊಂದಿಗೆ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಧ್ಯೇಯದೊಂದಿಗೆ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಜೂ. 21 ರಂದು ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಲಿದೆ ಎಂದು ಎಸ್‌ಪಿವೈಎಸ್‌ಎಸ್ ಪ್ರಕಟಣೆ ತಿಳಿಸಿದೆ.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ
ಎಸ್‌ಪಿವೈಎಸ್‌ಎಸ್ ಕರ್ನಾಟಕ ಇಂದು ಯೋಗ ವಿದ್ಯೆಯ ಮುಖಾಂತರ ಸಮಾಜವನ್ನು ಪುಷ್ಠೀಕರಣ ಮಾಡುತ್ತಿರುವ ಸಂಘಟನೆಯಾಗಿದೆ. ಸಂಘಟನೆಯು 1980 ರಲ್ಲಿ ತುಮಕೂರಿನಲ್ಲಿ ಆರಂಭವಾಯಿತು. ಸಮಿತಿಯ ಮೂಲ ಶಿಲ್ಪಿ ಅ.ರ.ರಾಮಸ್ವಾಮಿ ಅಣ್ಣನವರ ನೇತೃತ್ವದಲ್ಲಿ ಒಂದು ಪುಟ್ಟ ಯೋಗ ತರಗತಿ ಸ್ವರೂಪದಲ್ಲಿ ಜನ್ಮ ತಳೆದು ಇಂದು 1,500 ಶಾಖೆಗಳ ಮುಖಾಂತರ ಸುಮಾರು 8 ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ಮತ್ತು ಲಕ್ಷಾಂತರ ಯೋಗ ಬಂಧುಗಳ ಪರಿವಾರದ ಹೆಮ್ಮರವಾಗಿ ಬೆಳೆದಿದೆ. ಸಂಸ್ಕಾರ, ಸೇವೆ ಮತ್ತು ಸಂಘಟನೆ ಧ್ಯೇಯೋದ್ದೇಶದೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) (ಎಸ್‌ಪಿವೈಎಸ್‌ಎಸ್ ಕರ್ನಾಟಕ) ಕಳೆದ 44 ವರ್ಷಗಳಿಂದ ಸಮಿತಿಯ ಪ್ರಧಾನ ಸಂಚಾಲಕರಾದ ಅ.ರಾ.ರಾಮಸ್ವಾಮಿ ಅಣ್ಣನವರ ಮಾರ್ಗದರ್ಶನದಲ್ಲಿ ನುರಿತ ಯೋಗಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿಧ ರಾಜ್ಯ, ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ ಯೋಗದ ಮೂಲಕ ಸಂಸ್ಕಾರಯುತ ಜೀವನ ಶೈಲಿಯನ್ನು ನೀಡುತ್ತಿದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಮಂಗಳೂರಿನಲ್ಲಿ 200 ಕ್ಕೂ ಹೆಚ್ಚು ಶಾಖೆ ಹಾಗೂ ಪುತ್ತೂರಿನಲ್ಲಿ 13 ಶಾಖೆಗಳನ್ನು ಹೊಂದಿದ್ದು, ಸಾವಿರಾರು ಜನರಿಗೆ ಯೋಗ ಶಿಕ್ಷಣದ ಜೊತೆಗೆ ಆರೋಗ್ಯ,ಧನಾತ್ಮಕ ಚಿಂತನೆ,ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡಿ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ.ಕೋವಿಡ್‌ನಂತಹ ಸಂದರ್ಭದಲ್ಲೂ ಆನ್ಲೈನ್ ಮೂಲಕ ಯೋಗ ಶಿಕ್ಷಣವನ್ನು ನೀಡಿ ದೇಶ ವಿದೇಶಗಳಲ್ಲಿ ಲಕ್ಷಾಂತರ ಜನರಿಗೆ ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ತುಂಬಿಸುವ ಕೆಲಸ ನಡೆದಿದೆ. ಸಮಿತಿ ಯೋಗ ವಿದ್ಯೆಯ ಮುಖಾಂತರ ಸಮಾಜದ ಅವಶ್ಯಕತೆಗಳಾದ ಆರೋಗ್ಯ, ಮಕ್ಕಳಿಗೆ ನೈತಿಕ ಶಿಕ್ಷಣ, ಯುವಕರಿಗೆ ಮಾರ್ಗದರ್ಶನ, ಗೃಹಸ್ಥಾಶ್ರಮ ಧರ್ಮ, ಸ್ವಚ್ಛತೆ ಹಾಗೂ ಸೌಂದರ್ಯ, ಒತ್ತಡ ರಹಿತ ವ್ಯವಸ್ಥಿತ ಜೀವನ, ವೃತ್ತಿಯಲ್ಲಿ ನಾವಿನ್ಯತೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಮಾಡುತ್ತಿದೆ. ಇದಲ್ಲದೆ ನಿತ್ಯ ಯೋಗ ತರಬೇತಿಯ ಜೊತೆಗೆ ಸಮಿತಿಯು ನಿರಂತರವಾಗಿ ತನ್ನ ಶಾಖೆಗಳಲ್ಲಿ ಅಗ್ನಿ ಹೋತ್ರ, ಮಾತೃಪೂಜನ, ಮಾತೃಭೋಜನ, ಭಾರತ ಮಾತ ಪೂಜನ, ಸಾಮೂಹಿಕ ಸೂರ್ಯ ನಮಸ್ಕಾರ, ಸಾಮೂಹಿಕ ಶಿವ ನಮಸ್ಕಾರ, ದುರ್ಗಾನಮಸ್ಕಾರ, ರಕ್ಷಾಬಂಧನ, ಶಿವರಾತ್ರಿ, ಯುಗಾದಿ, ಸಂಕ್ರಾಂತಿ ಉತ್ಸವಗಳ ಆಚರಣೆಯನ್ನು ಮಾಡುತ್ತಿದೆ. ಇದಲ್ಲದೆ ರಕ್ತದಾನ, ಅನಾಥಾಶ್ರಮ ಮತ್ತು ಅನಾಥ ಮಕ್ಕಳ ಆಶ್ರಮಗಳಿಗೆ ಸೇವೆಯನ್ನು ಮಾಡುತ್ತಾ ಬರುವ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಬಂದಿದೆ.
ಉಚಿತ ಯೋಗ ಶಿಕ್ಷಣ
ಕೇಂದ್ರ ಸಮಿತಿಯಿಂದ ಶಿಕ್ಷಣ ಪಡೆದ ನುರಿತ ಶಿಕ್ಷಕ ವರ್ಗದವರಿಂದ ಉಚಿತವಾಗಿ ಯೋಗ ಹೇಳಿಕೊಡಲಾಗುತ್ತಿದೆ. ಮುಖ್ಯವಾಗಿ ಉದ್ವೇಗ, ಒತ್ತಡ, ಖಿನ್ನತೆ ಶಮನಕ್ಕಾಗಿ, ಏಕಾಗ್ರತೆಗಾಗಿ, ನೆನಪಿನ ಶಕ್ತಿಯ ಚುರುಕಿಗೆ, ಸಂಧಿವಾತ ದೋಷ, ನಿದ್ದೆಯ ಸಮಸ್ಯೆ, ಅಸಿಡಿಟಿ, ಮೂಲವ್ಯಾಧಿ, ರಕ್ತದೊತ್ತಡ, ಗಂಟುನೋವು, ಬೆನ್ನುನೋವು, ಮೈಗ್ರೇನ್, ತಲೆನೋವು ಇತ್ಯಾದಿ ಸಮಸ್ಯೆ ಗಳ ನಿವಾರಣೆಗೆ ಯೋಗ ರಾಮ ಬಾಣವಾಗಿದೆ.