ಎಫ್ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ,ಬೆಂಬಲಿಗರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ

0

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸೋಟಕ ಕಾಯ್ದೆಯಡಿ ಬಂಽತರಾಗಿದ್ದ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ನಿಂದಿಸಿ, ಬೆದರಿಸಿದ ಆರೋಪ ಕೈಬಿಡಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಉಚ್ಛ ನ್ಯಾಯಾಲಯ ಸೂಚಿಸಿದೆ.
ಬೆಳ್ತಂಗಡಿ ಠಾಣೆಯ ಪೊಲೀಸರ ವಿರುದ್ಧ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ ಹಾಗೂ ಪ್ರತಿಭಟನೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದಾಖಲಾಗಿರುವ ಎರಡು ಎಫ್ಐಆರ್‌ಗಳನ್ನು ರದ್ದು ಮಾಡುವಂತೆ ಕೋರಿ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠವು ಜು.5ರಂದು ಈ ನಿರ್ದೇಶನ ನೀಡಿ, ಅರ್ಜಿಗಳನ್ನು ವಜಾಗೊಳಿಸಿದೆ.


ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ:
ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ವಿರುದ್ಧ ಪೊಲೀಸರು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಸಿರುವ ಕಾರಣ ಆರೋಪಗಳನ್ನು ಕೈಬಿಡಲು ಕೋರಿ ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಲಿ. ವಿಚಾರಣಾ ನ್ಯಾಯಾಲಯವು 4 ವಾರಗಳಲ್ಲಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಮಾನ ಕೈಗೊಳ್ಳಬೇಕು. ಅಲ್ಲಿಯವರೆಗೆ ವಿಚಾರಣೆಗೆ ಹಾಜರಾಗಲು ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಬಾರದು ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಾಲಯಗಳ ನ್ಯಾಯವ್ಯಾಪ್ತಿಯ ಕುರಿತು ಸುಪ್ರೀಂ ಕೋರ್ಟ್ ಹಲವು ಬಾರಿ ಎಚ್ಚರಿಕೆ ನೀಡಿದೆ. ಹೈಕೋರ್ಟ್‌ನಲ್ಲಿ ಈಗಾಗಲೇ ಇಂತಹ ಹಲವು ಅರ್ಜಿಗಳಿದ್ದು, ವಿಚಾರಣಾ ನ್ಯಾಯಾಲಯದಲ್ಲೇ ಪರಿಹಾರ ಪಡೆಯುವಂತೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಽಶರ ಬಳಿ ಹಿಂತಿರುಗಿ, ಆರೋಪ ಕೈಬಿಡಲು ಕೋರುವುದರಿಂದ ಅರ್ಜಿದಾರರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿ ಕಾನೂನಿಗೆ ಅನುಸಾರವಾಗಿ ನಾಲ್ಕು ವಾರಗಳ ಅವಽಯಲ್ಲಿ ಅರ್ಜಿದಾರರು ಆರೋಪದಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಅರ್ಜಿದಾರರ ವೈಯಕ್ತಿಕ ಉಪಸ್ಥಿತಿಗೆ ಸೂಚಿಸದಂತೆ ವಿಚಾರಣಾ ನ್ಯಾಯಾಧಿಶರಿಗೆ ಆದೇಶ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.


ಕೇಸಿನ ಹಿನ್ನಲೆ-
ಹರೀಶ್ ಪೂಂಜ ವಿರುದ್ಧದ ಮೊದಲನೇ ಪ್ರಕರಣದಲ್ಲಿ ಬೆಳ್ತಂಗಡಿ ಎಸ್.ಐ. ಮುರಳೀಧರ ನಾಯ್ಕ್ ಕೆ.ಜಿ. ದೂರುದಾರರಾಗಿದ್ದು, ಐಪಿಸಿ 504 ಮತ್ತು 352ರ ಅಡಿಯಲ್ಲಿ ಎಫ್ಐ‌ಆರ್ ದಾಖಲಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್.ಐ. ಚಂದ್ರಶೇಖರ್ ಎ.ಎಂ. ದೂರುದಾರರಾಗಿದ್ದು, ಐಪಿಸಿ ಸೆಕ್ಷನ್ 506, 341, 504, 143, 147 ಮತ್ತು 149ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಎರಡೂ ಪ್ರಕರಣಗಳಿಗೆ ಸಂಬಂಧಿಸಿ ಹೈಕೋರ್ಟಿನಲ್ಲಿ ಹರೀಶ್ ಪೂಂಜ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವಡಗಿ ಹಾಗೂ ಸರಕಾರದ ಪರ ಹೆಚ್ಚುವರಿ ಎಸ್.ಪಿ.ಪಿ. ಬಿ.ಎನ್.ಜಗದೀಶ್ ವಾದ ಮಂಡಿಸಿದ್ದಾರೆ.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲೇ ಹರೀಶ್ ಪೂಂಜ ಪ್ರಕರಣದ ವಿಚಾರಣೆ
ಶಾಸಕ ಹರೀಶ್ ಪೂಂಜ ವಿರುದ್ಧ ದಾಖಲಾಗಿರುವ ಎಪ್ಐಆರ್‌ಗಳನ್ನು ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್, ಈ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲೇ ಆರೋಪ ಕೈಬಿಡುವ ಕುರಿತು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಪೊಲೀಸರು ಬೆಂಗಳೂರಿನಲ್ಲಿರುವ ಜನಪ್ರತಿನಿಽಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದರಿಂದ ಮುಂದಿನ ವಿಚಾರಣೆಯೂ ಅದೇ ನ್ಯಾಯಾಲಯದಲ್ಲಿ ನಡೆಯಲಿದೆ. ಶಾಸಕ ಹರೀಶ್ ಪೂಂಜ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಇದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿದೆ.

65 ಕಾರ್ಯಕರ್ತರ ಮೇಲಿನ ಎರಡು ಎಫ್ಐಆರ್ ಕುರಿತ ಅರ್ಜಿಯೂ ವಜಾ:
ಶಾಸಕ ಹರೀಶ್ ಪೂಂಜ ಅವರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ 18ರಂದು ರಾತ್ರಿ ಪ್ರತಿಭಟನೆ ನಡೆಸಿದ 27 ಬೆಂಬಲಿಗರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಹಾಗೂ ಬೆಳ್ತಂಗಡಿ ಆಡಳಿತ ಸೌಧದ ಎದುರು ಮೇ 20ರಂದು ಪ್ರತಿಭಟನೆ ನಡೆಸಿದ 38 ಮಂದಿ ವಿರುದ್ಧದ ಎಫ್ಐಆರ್‌ಗಳನ್ನೂ ರದ್ದು ಮಾಡುವಂತೆ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯೂ ಹರೀಶ್ ಪೂಂಜರ ಪ್ರಕರಣಗಳೊಂದಿಗೆ ನಡೆದಿದೆ. ಬೆಳ್ತಂಗಡಿ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ಎಂ.ಕೆ. ಸಹಿತ 27 ಮಂದಿ ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು. 38 ಮಂದಿ ವಿರುದ್ಧ ದಾಖಲಾಗಿರುವ ಇನ್ನೊಂದು ಎಫ್ಐಆರ್ ರದ್ದುಗೊಳಿಸಲು ಜಯಾನಂದ ಗೌಡ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯದಲ್ಲೇ ಪರಿಹಾರ ಕಂಡುಕೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿ ಅರ್ಜಿಗಳನ್ನು ವಜಾಗೊಳಿಸಿದೆ. ಬೆಂಬಲಿಗರ ಪ್ರಕರಣದ ವಿಚಾರಣೆ ಯಾವ ಕೋರ್ಟಿನಲ್ಲಿ ನಡೆಯುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ.

LEAVE A REPLY

Please enter your comment!
Please enter your name here