ಪರಮವೀರ ಚಕ್ರ ಪುರಸ್ಕೃತ ಕ್ಯಾ.ಯೋಗೀಂದ್ರ ಯಾದವ್ ಹಾಗೂ ಸೇನಾ ಪದಕ ಪುರಸ್ಕೃತ ಕ್ಯಾ.ನವೀನ್ ನಾಗಪ್ಪ ಜು.19ಕ್ಕೆ ಪುತ್ತೂರಿಗೆ
ಪುತ್ತೂರು: ಇಂದಿನ ಅನೇಕ ಮಂದಿ ಯುವಸಮುದಾಯದವರು ಕಾರ್ಗಿಲ್ ಹೋರಾಟದ ಸಂದರ್ಭದಲ್ಲಿ ಹುಟ್ಟಿದ್ದಿರಲಿಕ್ಕಿಲ್ಲ. ಯಾಕೆಂದರೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ಥಾನವನ್ನು ಬಗ್ಗುಬಡಿದು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಸಂಭ್ರಮಕ್ಕೆ ಇದೀಗ ಇಪ್ಪತ್ತೈದು ವರ್ಷ ತುಂಬಿದೆ! ಹಾಗಾಗಿ ಅನೇಕ ಯುವ ಮನಸ್ಸುಗಳಿಗೆ ಕಾರ್ಗಿಲ್ ಹೋರಾಟ ಎಂಬುದು ಇತಿಹಾಸ ಕಥಾನಕವಾಗಿ ಉಳಿದುಕೊಂಡಿದೆ. ಆದರೆ ಆ ಕಥಾನಕದ ಇಬ್ಬರು ಹೀರೋಗಳು ಪುತ್ತೂರಿಗೆ ಆಗಮಿಸುತ್ತಿದ್ದಾರೆ ಎಂಬುದು ರೋಮಾಂಚನಕಾರಿ ವಿಚಾರ. ಕಾರ್ಗಿಲ್ ಹೋರಾಟದಲ್ಲಿ ಅಕ್ಷರಶಃ ಸಿಂಹದ ಮರಿಗಳಂತೆ ಹೋರಾಡಿ, ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಮಹಾ ಯೋಧರಿಬ್ಬರು ಇದೇ ಜು.19ರಂದು ಪುತ್ತೂರಿನ ಜನರ ಮುಂದೆ ಹಾಜರಾಗಲಿದ್ದಾರೆ.
ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ, ಮಾಜಿ ಸೈನಿಕರ ಸಂಘ ಪುತ್ತೂರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು ಹಾಗೂ ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್ 19ರಂದು ಪುತ್ತೂರಿನ ಹೆಮ್ಮೆಯೆನಿಸಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದೆದುರು ಕಾರ್ಗಿಲ್ ವಿಜಯೋತ್ಸವದ ಬೆಳ್ಳಿಹಬ್ಬ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ಗಿಲ್ ಹೋರಾಟದಲ್ಲಿ ಅಪ್ರತಿಮ ಸಾಹಸ ಮೆರೆದು ಅತೀ ಕಿರಿಯ ವಯಸ್ಸಿನಲ್ಲಿಯೇ ಸೇನೆಯ ಅತ್ಯುನ್ನತ ಗೌರವವಾದ ಪರಮವೀರ ಚಕ್ರ ಪ್ರಶಸ್ತಿ ಪಡೆದ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಹಾಗೂ ಅದೇ ಯುದ್ಧದಲ್ಲಿ ವಿಕ್ರಮ ತೋರಿದ ಕ್ಯಾಪ್ಟನ್ ನವೀನ್ ನಾಗಪ್ಪ ಆಗಮಿಸುತ್ತಿದ್ದಾರೆ. ಪುತ್ತೂರು ಹಾಗೂ ಸುತ್ತಮುತ್ತಲಿನ ಯುವ ಸಮುದಾಯಕ್ಕೆ ತಾವು ಕಥಾನಕದಲ್ಲಿ ಕೇಳಿದ್ದ ಹೀರೋಗಳನ್ನು ಕಣ್ಣಾರೆ ಕಾಣುವ ಅವಕಾಶ ಲಭ್ಯವಾಗುತ್ತಿದೆ.
ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್: ಈ ಬಾರಿಯ ಕಾರ್ಗಿಲ್ ವಿಜಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ಗಿಲ್ ಹೋರಾಟದಲ್ಲಿ ಕೆಚ್ದಚೆದೆಯನ್ನು ಪ್ರದರ್ಶಿಸಿ, ಪಾಕಿಸ್ಥಾನಕ್ಕೆ ಸಿಂಹಸ್ವಪ್ನರಾಗಿ ಕಾಡಿದ್ದ ಅಪ್ರತಿಮ ಯೋಧ, ಸಾಹಸಿ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಅವರನ್ನು ಆಹ್ವಾನಿಸಲಾಗಿದೆ. ಉತ್ತರ ಪ್ರದೇಶದ ಔರಂಗಾಬಾದ್ನಲ್ಲಿ 1980ರಲ್ಲಿ ಜನಿಸಿದ ಯಾದವ್ 1965 ಹಾಗೂ 1971ರ ಯುದ್ಧದಲ್ಲಿ ಭಾಗಿಯಾಗಿದ್ದ ಕರಣ್ ಸಿಂಗ್ ಅವರ ಪುತ್ರ. ಕಾರ್ಗಿಲ್ ಯುದ್ಧದಲ್ಲಿ ಘಟಕ್ ಪ್ಲಾಟೂನ್ ಕಮಾಂಡೊ ಪಡೆಯ ನಾಯಕತ್ವ ವಹಿಸಿಕೊಂಡು, ದೇಶದ ಅಸ್ಮಿತೆಯ ಸಂಕೇತವಾದ ಟೈಗರ್ ಹಿಲ್‌ನೆಡೆಗೆ ಧಾವಿಸಿದವರು. ತನ್ನ ದೇಹಕ್ಕೆ 17 ಗುಂಡುಗಳು ತಗಲಿದ್ದರೂ ಹಠ ಬಿಡದೆ ಪಾಕಿಸ್ಥಾನದ ಮೂರು ಬಂಕರ್‌ಗಳನ್ನು ವಶಪಡಿಸಿಕೊಂಡು ಸಾಹಸ ಮೆರೆದವರು. ಇವರ ಸಾಹಸಗಾಥೆಗೆ ಭಾರತ ಸರ್ಕಾರ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಅತ್ಯಂತ ಕಿರುವಯಸ್ಸಿನಲ್ಲಿ ಮಿಲಿಟರಿ ವ್ಯವಸ್ಥೆಯಲ್ಲಿನ ಅತಿ ದೊಡ್ಡ ಗೌರವವೆನಿಸಿದ ಪರಮವೀರ ಚಕ್ರ ಪಡೆದ ಖ್ಯಾತಿ ಯೋಗೀಂದ್ರ ಸಿಂಗ್ ಯಾದವ್ ಅವರದ್ದು. 2021 ಡಿಸೆಂಬರ್‌ನಲ್ಲಿ ಸೈನ್ಯದಿಂದ ನಿವೃತ್ತಿ ಹೊಂದುವ ವೇಳೆಗೆ ಗೌರವ ಕ್ಯಾಪ್ಟನ್ ಪದವಿ ಪಡೆದದ್ದು ಅವರ ಯೋಗ್ಯತೆಗೆ ಸಂದ ಗೌರವ. ನಮ್ಮ ಮಕ್ಕಳಿಗೆ ಬಹುದೊಡ್ಡ ಆದರ್ಶವೆನಿಸಿರುವ ಇಂತಹ ಸಮರ್ಥ ಯೋಧ ಮೊತ್ತಮೊದಲ ಬಾರಿಗೆ ಪುತ್ತೂರಿನ ಮಣ್ಣಿಗೆ ಅಡಿಯಿಡುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.
ಕ್ಯಾಪ್ಟನ್ ನವೀನ್ ನಾಗಪ್ಪ: ಕಾರ್ಗಿಲ್ ವಿಜಯೋತ್ಸವಕ್ಕೆ ಮತ್ತೋರ್ವ ಅತಿಥಿ ಕ್ಯಾಪ್ಟನ್ ನವೀನ್ ನಾಗಪ್ಪ. ಕರ್ನಾಟಕದ ಈ ಯೋಧ ಕಾರ್ಗಿಲ್ ಹೋರಾಟದಲ್ಲಿ ಅಪ್ರತಿಮ ಸಾಹಸ ತೋರಿದ ವಿಕ್ರಮಿ. ಪಾಕಿಸ್ಥಾನ ವಶಪಡಿಸಿಕೊಂಡಿದ್ದ ಭಾರತದ ಬಂಕರ್ ಅನ್ನು ಮರಳಿ ಭಾರತದ ತೆಕ್ಕೆಗೆ ತಂದ ಮಹಾಯೋಧ. ಅರವತ್ತು ಗಂಟೆಗಳಕಿಗೂ ಮಿಕ್ಕಿ ಅನ್ನಾಹಾರವಿಲ್ಲದೆ, ಪಾಕಿಸ್ಥಾನದ ದಾಳಿಯಿಂದ ದೇಹ ಜರ್ಝರಿತವಾಗಿದ್ದರೂ ಎಡೆಬಿಡದೆ ಹೋರಾಡಿ ಭಾರತಾಂಬೆಗೆ ಗೆಲುವಿನ ಹಾರ ಅರ್ಪಿಸಿದ ವೀರ ಯೋಧ. ಇವರ ಸಾಹಸಕ್ಕೆ ಮೆಚ್ಚಿ ಸೇನಾ ಪದಕ ನೀಡಿ ಗೌರವಿಸಲಾಗಿದೆ.
ಈ ಇಬ್ಬರೂ ಮಹಾಯೋಧರನ್ನು ಆ ದಿನ ಬೆಳಗ್ಗೆ 9.3೦ಕ್ಕೆ ತೆರೆದ ವಾಹನದಲ್ಲಿ ದರ್ಬೆವೃತ್ತದಿಂದ ಕಿಲ್ಲೆ ಮೈದಾನದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತಿದ್ದು ವ್ಯಾಪಾರಿಗಳು, ಜನಸಾಮಾನ್ಯರು, ದೇಶಭಕ್ತ ಬಂಧುಗಳು ಹಾರಾರ್ಪಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.