ನಿಮ್ಮ ಲಂಚ, ಭ್ರಷ್ಟಾಚಾರದ ಹಣದಲ್ಲಿ ಊಟ ಮಾಡುವುದಿಲ್ಲ – ನಮ್ಮ ಹಣದಲ್ಲಿಯೇ ಊಟ ಮಾಡುತ್ತೇವೆ – ವಿಪಕ್ಷ ನಾಯಕ ಅಶೋಕ್ ಹೇಳಿಕೆ ಭ್ರಷ್ಟಾಚಾರಿಗಳ ಮುಖಕ್ಕೆ ಹೊಡೆದಂತೆ ಇದೆ ಅಲ್ಲವೇ?

0

*ಅದನ್ನು ಎಲ್ಲರೂ ಅನುಸರಿಸಿದರೆ, ಭ್ರಷ್ಟಾಚಾರಿಗಳಿಗೆ ಹೇಳಿದರೆ ಏನಾಗಬಹುದು?
*ಕಾಂಗ್ರೆಸ್, ದಳ, ಬಿಜೆಪಿ ಎಲ್ಲದರ ಶಾಸಕರು, ನಾಯಕರು ಭ್ರಷ್ಟಾಚಾರದ ವಿರುದ್ಧ ಜಾಥಾ ಮಾಡುತ್ತಿದ್ದಾರೆ. ಅದು ಭ್ರಷ್ಟಾಚಾರದ ವಿರುದ್ಧ ಚರಿತ್ರಾರ್ಹ ಜಾಥಾವಾಗಿ ದಾಖಲೆಯಾಗಬೇಕಲ್ಲವೇ?
*ಇದರಿಂದ ಎಲ್ಲಾ ಪಕ್ಷದಲ್ಲಿಯ ಭ್ರಷ್ಟಾಚಾರಿಗಳು ಜೈಲಿಗೆ ಹೋಗುವಂತಾಗಲಿ.
*ಲಂಚ, ಭ್ರಷ್ಟಾಚಾರ ವಿರುದ್ಧದ ಸಂಸ್ಕೃತಿ ಬೆಳೆಯಲಿ
*ಶಾಸಕರು, ಸಂಸದರು ತಮ್ಮ ತಮ್ಮ ಕ್ಷೇತ್ರವನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಪ್ರತಿಜ್ಞೆ ಮಾಡಲಿ.
*ಎಲ್ಲರ ಮನೆಗಳಲ್ಲಿ, ಮಳಿಗೆಗಳಲ್ಲಿ ಮತದಾರರ ಜಾಗೃತಿ, ಭ್ರಷ್ಟಾಚಾರ ವಿರುದ್ಧದ ಫಲಕ ಅಳವಡಿಸಲಿ
* ಆಗಸ್ಟ್ 15 ಸ್ವಾತಂತ್ರ್ಯ ದಿನ ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಆಚರಿಸುವ ರಾಜ್ಯ ನಮ್ಮದಾಗಲಿ


ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಎರಡು ಕಲಾಪಗಳಲ್ಲಿ ವಾಲ್ಮಿಕಿ ಹಗರಣ ಮತ್ತು ಮೂಡಾ ಹಗರಣವೇ ಸದ್ದು ಮಾಡಿದೆ. ಉಳಿದ ವಿಷಯಗಳ ಬಗ್ಗೆ ಚರ್ಚೆಯಾಗಲಿಲ್ಲ. ಸದನದ ಒಳಗಡೆ ಮತ್ತು ಹೊರಗಡೆ ಪ್ರತಿಭಟನೆಗಳು ನಡೆದಿದೆ. ಅಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವಾಗ ಊಟದ ವ್ಯವಸ್ಥೆಯನ್ನು ಸರಕಾರ ಮಾಡಲು ಹೊರಟಾಗ ವಿಪಕ್ಷ ನಾಯಕ ಅಶೋಕ್‌ರವರು ನಿಮ್ಮ ಭ್ರಷ್ಟಾಚಾರದ ಹಣದಿಂದ ನಾವು ಊಟ ಮಾಡುವುದಿಲ್ಲ. ನಮ್ಮ ಸ್ವಂತ ಹಣದಿಂದಲೇ ಊಟ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಭ್ರಷ್ಟಾಚಾರಿಗಳ ಮುಖಕ್ಕೆ ಹೊಡೆದಂತೆ ಇರುವ ಆ ಘೋಷಣೆಯನ್ನು ವಿರೋಧ ಪಕ್ಷ ಮಾತ್ರವಲ್ಲ ಆಡಳಿತ ಪಕ್ಷದವರು, ಎಲ್ಲಾ ರಾಜಕೀಯ ನಾಯಕರು ಅನುಸರಿಸಿದರೆ ರಾಜ್ಯ ಲಂಚ, ಭ್ರಷ್ಟಾಚಾರ ಮುಕ್ತವಾಗಲಿಕ್ಕಿಲ್ಲವೇ?.

ಇದೀಗ ಬಿಜೆಪಿ ಮತ್ತು ದಳ ಪಕ್ಷದವರು ವಾಲ್ಮಿಕಿ ಹಾಗೂ ಮೂಡಾ ಹಗಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇದೆ, ಅವರು ರಾಜೀನಾಮೆ ಕೊಡಬೇಕು ಎಂದು ಬೆಂಗಳೂರಿನಿಂದ ಮೈಸೂರಿಗೆ ಜಾಥಾ ಹೊರಡಲಿದ್ದಾರೆ. ಅದೇ ಸಮಯಕ್ಕೆ ಕಾಂಗ್ರೆಸ್‌ನವರು ಬಿಜೆಪಿಯವರ 21 ಹಗರಣಗಳ ಪಟ್ಟಿಯನ್ನು ಹಿಡಿದುಕೊಂಡು ಮೈಸೂರಿನಿಂದ ಬೆಂಗಳೂರಿಗೆ ಜಾಥಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಜಾಥಾಗಳು ಕರ್ನಾಟಕ ರಾಜ್ಯದ ಚರಿತ್ರೆಯಲ್ಲಿ ಚರಿತ್ರಾರ್ಹ ಘಟನೆಗಳಾಗಿ ದಾಖಲೆಯಾಗಲಿವೆ. ಇಲ್ಲಿ ಸಮಸ್ಯೆ ಇರುವುದು ಲಂಚ, ಭ್ರಷ್ಟಾಚಾರ ಯಾರ‍್ಯಾರು ಮಾಡಿದ್ದಾರೆ ಎಂದೇ ಆಗಿದೆ. ಈ ಹಿಂದೆ ಬಿಜೆಪಿ ಸರಕಾರ 40% ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಹೋರಾಟ ಮಾಡಿ ಅಧಿಕಾರ ಹಿಡಿದಿದ್ದಾರೆ. ಇಂದು ಬಿಜೆಪಿ ಮತ್ತು ದಳದವರು ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ ಎಂದು ಅವರನ್ನು ಇಳಿಸಿ ಅಽಕಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಕಾಂಗ್ರೆಸ್ ದಳದವರು ಪರಸ್ಪರ ಘೋಷಣೆ ಮಾಡಿಕೊಂಡಿರುವುದನ್ನು ಸಾಬೀತು ಪಡಿಸಲಿ. ಆ ಮೂಲಕ ಭ್ರಷ್ಟಾಚಾರಿಗಳೆಲ್ಲಾ ಜೈಲು ಸೇರುವಂತಾಗಲಿ. ಅವರ ಸಂಪತ್ತನ್ನೆಲ್ಲಾ ಸರಕಾರ ವಶಪಡಿಸುವಂತಾಗಲಿ. ಪ್ರಾಮಾಣಿಕರಾದ ರಾಜಕೀಯ ನಾಯಕರು, ಶಾಸಕರು, ಸಂಸದರು ಉಳಿಯಲಿ. ಆ ಮೂಲಕವಾದರೂ ಲಂಚ, ಭ್ರಷ್ಟಾಚಾರ ಮುಕ್ತ ಆಡಳಿತ ಬರಲಿ ಎಂದು ಜನರು ಹಾರೈಸಬೇಕು. ಅದೇ ರೀತಿ ಶಾಸಕರು ಮತ್ತು ಸಂಸದರು ತಮ್ಮ ತಮ್ಮ ಕ್ಷೇತ್ರದಲ್ಲಿ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ನಿಲ್ಲಿಸಲು ಪ್ರಯತ್ನ ಮಾಡಲಿ. ಅದು ನಡೆಯುವಂತೆ ಆಯಾ ಕ್ಷೇತ್ರದ ಮತದಾರ ರಾಜರು ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕಾಗಿದೆ.

ಮನೆ ಮನೆಗಳಲ್ಲಿ ಮತ್ತು ಎಲ್ಲಾ ಕಛೇರಿಗಳಲ್ಲಿ ಮತದಾರರ ಜಾಗೃತಿಯ ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕವನ್ನು ಅಳವಡಿಸಬೇಕು. ಆ ಮೂಲಕ ಲಂಚ, ಭ್ರಷ್ಟಾಚಾರ ವಿರೋಧಿಸುವ ಸಂಸ್ಕೃತಿ ಬೆಳೆಯಲಿ. ಶಾಸಕರ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜಾಥಾದಲ್ಲಿ ತೆರಳಿ ಈ ಸಲ ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಆಚರಣೆ ಮಾಡಬೇಕು. ಜನರಿಗೆ ನಿಜವಾದ ಸ್ವಾತಂತ್ರ್ಯ ಸಿಗುವಂತೆ ಜನತೆ ಘೋಷಿಸಬೇಕು.

ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ

LEAVE A REPLY

Please enter your comment!
Please enter your name here