ಮಳೆಯಿಂದಾಗಿ ಪುತ್ತೂರಿನಲ್ಲಿ ರೂ.8 ಕೋಟಿಗೂ ಅಧಿಕ ಹಾನಿ

0

ಪರಿಹಾರ ನೀಡಲು ಸರಕಾರದಲ್ಲಿ ಹಣದ ಕೊರತೆಯಿಲ್ಲ- ಶಾಸಕ ಅಶೋಕ್‌ ಕುಮಾರ್‌ ರೈ ಮಾಹಿತಿ

ಪುತ್ತೂರು:ಈ ವರ್ಷದ ಮಳೆಯಿಂದಾಗಿ ಪುತ್ತೂರಿನಲ್ಲಿ ರೂ.8 ಕೋಟಿಗೂ ಅಽಕ ಪ್ರಮಾಣದ ಹಾನಿಯುಂಟಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಆ.3ರಂದು ಶಾಸಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.ಅಪಾರ ಹಾನಿಯಾದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರಾಕೃತಿಕ ವಿಕೋಪದಿಂದ ಹಾನಿಯಾದರೆ ಪರಿಹಾರ ನೀಡಲು ಸರಕಾರದಲ್ಲಿ ಹಣದ ಕೊರತೆಯಿಲ್ಲ.ಪ್ರಾಕೃತಿಕ ವಿಕೋಪಕ್ಕೆ ಪರಿಹಾರಕ್ಕಾಗಿ ತಹಶೀಲ್ದಾರ್ ಖಾತೆಯಲ್ಲಿ ರೂ.50 ಲಕ್ಷ ಜಮೆಯಿದೆ ಎಂದು ಶಾಸಕರು ತಿಳಿಸಿದರು.


ದನ, ಕರುಗಳ ಸಾವು ಮಾಲಕರ ಖಾತೆಗೆ ಪರಿಹಾರ ಹಣ:
ಧರೆ ಕುಸಿದು 6 ದನ ಹಾಗೂ 3 ಕರುಗಳು ಮೃತಪಟ್ಟಿವೆ.ಹಸುಗಳಿಗೆ ತಲಾ ರೂ.37,500 ಹಾಗೂ ಕರುಗಳಿಗೆ ತಲಾ ರೂ.20,000ದಂತೆ ಪರಿಹಾರ ನೇರವಾಗಿ ಮ್ಹಾಲಕರ ಖಾತೆಗೆ ಜಮೆ ಮಾಡಲಾಗಿದೆ.


ಕಾಳಜಿ ಕೇಂದ್ರಕ್ಕೆ ಯಾರೂ ಬರುತ್ತಿಲ್ಲ:
ಕೊಂಬೆಟ್ಟು ವಿದ್ಯಾರ್ಥಿ ನಿಲಯ, ಉಪ್ಪಿನಂಗಡಿ ಪುಳಿತ್ತಡಿ ವಿದ್ಯಾರ್ಥಿ ನಿಲಯ ಹಾಗೂ ಜೂನಿಯರ್ ಕಾಲೇಜಿನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.ಅವಶ್ಯವಿದ್ದರೆ ನಗರ ಸಭಾ ಸಮುದಾಯ ಭವನದಲ್ಲಿಯೂ ಕಾಳಜಿ ಕೇಂದ್ರ ತೆರೆಯಲಾಗುವುದು.ಈ ತನಕ ಯಾರೂ ಕಾಳಜಿ ಕೇಂದ್ರಕ್ಕೆ ಬಂದಿಲ್ಲ.ಜನರು ಕಾಳಜಿ ಕೇಂದ್ರಗಳಿಗೆ ಬರಲು ಒಪ್ಪಿಕೊಳ್ಳುವುದಿಲ್ಲ ಎಂದರು.


ಮನೆಗಳಿಗೆ ಹಾನಿಗೆ ಪರಿಹಾರ ವಿತರಣೆ:
11 ಮನೆಗಳಿಗೆ ಹಾನಿಯುಂಟಾಗಿದ್ದು 5 ಮನೆಗಳು ಸಂಪೂರ್ಣ ಹಾನಿ ಹಾಗೂ 6 ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ.ಸಂಪೂರ್ಣ ಹಾನಿಯಾದ ಮನೆಗಳಿಗೆ ರೂ.1.20 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗಳಿಗೆ ರೂ.50,೦೦೦ ಪರಿಹಾರ ನೀಡಲಾಗಿದೆ.ಸಂಪೂರ್ಣ ಹಾನಿಯಾದ ಮನೆಗಳಿಗೆ ರೂ.5 ಲಕ್ಷ ಪರಿಹಾರ ನೀಡುವಂತೆ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಲಾಗಿದೆ.ಮನೆಯೊಳಗೆ ನೆರೆ ಬಂದರೆ ಶುಚಿಗೊಳಿಸಲು ರೂ.10,000 ಪರಿಹಾರ ನೀಡಲಾಗುತ್ತಿದೆ.ಗ್ರಾಮೀಣ ಪ್ರದೇಶಲ್ಲಿ ಹಾನಿಯುಂಟಾದ ಸಂದರ್ಭದಲ್ಲಿ ತುರ್ತು ಕ್ರಮಕ್ಕಾಗಿ ಗ್ರೇಡ್-1 ಪಂಚಾಯತ್‌ಗೆ ರೂ.25,೦೦೦ ಹಾಗೂ ಗ್ರೇಡ್-2 ಪಂಚಾಯತ್‌ಗೆ ರೂ.15,000 ಅನುದಾನ ಒದಗಿಸಲಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಹಾನಿಯುಂಟಾದ ರಸ್ತೆಗಳ ಬಗ್ಗೆ ಅಂದಾಜುಪಟ್ಟಿ ತಯಾರಿಸುವಂತೆ ಸೂಚಿಸಲಾಗಿದೆ.ಶಾಲೆಗಳಿಗೆ ಉಂಟಾದ ಹಾನಿಯಿಂದ ರೂ.65 ಲಕ್ಷ ನಷ್ಟ ಉಂಟಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.


ಮೆಸ್ಕಾಂಗೆ 1.8 ಕೋಟಿ ರೂ.ನಷ್ಟ:
ಗಾಳಿ, ಮಳೆಯಿಂದಾಗಿ ಮರಗಳು ಬಿದ್ದು ಮೆಸ್ಕಾಂನ 760 ವಿದ್ಯುತ್ ಕಂಬಗಳು ಹಾಗೂ 10 ಪರಿವರ್ತಕಗಳಿಗೆ ಹಾನಿಯುಂಟಾಗಿದ್ದು ರೂ.1.8 ಕೋಟಿ ನಷ್ಟ ಉಂಟಾಗಿದೆ.ಸುಮಾರು 38 ಕಿ.ಮೀ ವಿದ್ಯುತ್ ಲೈನ್‌ಗೆ ಹಾನಿಯುಂಟಾಗಿದೆ.ಮಳೆ ಹಾನಿಯಿಂದ ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಉಂಟಾದ ಹಾನಿಯಿಂದ ರೂ.2 ಕೋಟಿ ನಷ್ಟ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಸ್ತೆಗಳ ಹಾನಿಯಿಂದ ರೂ.3.70 ಕೋಟಿ ನಷ್ಟ, ನಗರ ಸಭಾ ವ್ಯಾಪ್ತಿಯಲ್ಲಿ 6 ಕಿ.ಮೀ ರಸ್ತೆಗೆ ಹಾನಿಯುಂಟಾಗಿದ್ದು ರೂ.1 ಕೋಟಿ ನಷ್ಟ ಉಂಟಾಗಿದೆ.ಅಪಾಯಕಾರಿಯಲ್ಲಿರುವ 180 ಮರಗಳನ್ನು ಅರಣ್ಯ ಇಲಾಖೆಯ ಮುಖಾಂತರ ತೆರವುಗೊಳಿಸಲಾಗಿದೆ.ಪಡ್ನೂರು ಬೇರಿಕೆ, ಅಂಡೆಪುಣಿಯಲ್ಲಿ ಗುಡ್ಡ ಕುಸಿದು ನದಿಗೆ ಬಿದ್ದು ಮಳೆ ನೀರು ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಯುಂಟಾಗಿದೆ.ಕೆಮ್ಮಿಂಜೆಯಲ್ಲಿ ಗುಡ್ಡ ಕುಸಿದು ನದಿಗೆ ಬಿದ್ದಿದೆ.ಅಲ್ಲಿಗೆ ವಾಹನಗಳು ತೆರಳಲು ಅಸಾಧ್ಯವಾಗಿರುವುದರಿಂದ ಸದ್ಯ ಮಣ್ಣು ತೆರವುಗೊಳಿಸುವುದು ಅಸಾಧ್ಯವಾಗಿದೆ.ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಧರೆ ಕುಸಿದು ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿದ್ದು ಪರಿಹಾರ ಒದಗಿಸಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.


10 ಕೋಟಿ ರೂ.ಪರಿಹಾರಕ್ಕೆ ಸಿಎಂಗೆ ಮನವಿ ಮಾಡಲಾಗಿದೆ:
ಎಲ್ಲದಕ್ಕೂ ಸರಕಾರ ಪರಿಹಾರ ನೀಡುವುದು ಅಸಾಧ್ಯ.ಹಾನಿಯಾದ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಬೇಕಾದರೆ ರೂ.500 ಕೋಟಿ ಅನುದಾನದ ಅವಶ್ಯಕತೆಯಿದೆ.ರೂ.10 ಕೋಟಿ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಪಟ್ಟಿ ನೀಡಿದ್ದೇನೆ.ಅಧಿಕಾರಿಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು.ಎಲ್ಲರೂ ಕೇಂದ್ರ ಸ್ಥಾನದಲ್ಲಿರಬೇಕು.ಮನೆಗಳಿಗೆ ಅಪಾಯಗಳಿದ್ದರೆ ಅವರನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಕೃತಿಯಿಂದಲ್ಲ ಮಾನವರಿಂದಲೇ ಹಾನಿ
ಪ್ರಕೃತಿಯಿಂದ ಹಾನಿಯುಂಟಾಗಿಲ್ಲ.ಮಾನವರಿಂದಾಗಿ ಹಾನಿ ಉಂಟಾಗುತ್ತಿದೆ.ಗುಡ್ಡಗಳನ್ನು ಕಡಿಯುವುದರಿಂದಾಗಿ ಕುಸಿತಗಳು ಸಂಭವಿಸುತ್ತಿದೆ.ಅವೈಜ್ಞಾನಿಕವಾಗಿ ಗುಡ್ಡವನ್ನು ಕಟ್ ಮಾಡುವುದರಿಂದ ಅಪಾಯವನ್ನು ಆಹ್ವಾನಿಸುತ್ತಿದ್ದೇವೆ.ಇದರ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು.ಹೀಗಾಗಿ ಯಾರೂ ಕೂಡ ಅಪಾಯಕಾರಿ ಸ್ಥಿತಿಯಲ್ಲಿ ಗುಡ್ಡವನ್ನು ಕತ್ತರಿಸಬಾರದು.ಮನೆ ಕಟ್ಟುವಾಗ 14 ಶರ್ತಗಳನ್ನು ನೀಡಲಾಗುತ್ತದೆ.ಎಲ್ಲರೂ ಕಾನೂನು ಪಾಲನೆ ಮಾಡಿದರೆ ಹಾನಿ ತಪ್ಪಿಸಬಹುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

LEAVE A REPLY

Please enter your comment!
Please enter your name here