ಪೆರ್ಲಂಪಾಡಿ ಲೋಕವಿಕಾಸ ಪ್ರತಿಷ್ಠಾನದಿಂದ ಲಷ್ಕರಿ ಪ್ರಶಸ್ತಿ ಪ್ರದಾನ, ಕೃತಿ ಅನಾವರಣ

0

ಪುತ್ತೂರು: ಪೆರ್ಲಂಪಾಡಿ ಲೋಕವಿಕಾಸ ಪ್ರತಿಷ್ಠಾನದ ವತಿಯಿಂದ ಎಸ್.ಜಿ. ಕೃಷ್ಣ ಪ್ರವರ್ತಿತ ಲಷ್ಕರಿ ಪ್ರಶಸ್ತಿ-2024 ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಕೃತಿ ಅನಾವರಣ ಸಮಾರಂಭ ಆ.4ರಂದು ಕಲ್ಲಾರೆ ಕೃಷ್ಣ ಆರ್ಕೇಡ್ ಸಭಾಭವನದಲ್ಲಿ ನಡೆಯಿತು.

ಸಾಹಿತ್ಯದ ಸಂತ, ಸಾಹಿತ್ಯದ ಉಪಾಸೆನೆಯೇ ಇವರ ಗುರಿ-ಡಾ|ಗಜಾನನ ಹೆಗಡೆ:
ಹೊನ್ನಾವರ ಅಳ್ಳಂಕಿ ಸ.ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಗಜಾನನ ಹೆಗಡೆಯವರು ಲಷ್ಕರಿ ಪ್ರಶಸ್ತಿ ಪುರಸ್ಕೃತ ಡಾ|ಜಿ.ಎಂ.ಹೆಗಡೆಯವರ ಬಗ್ಗೆ ಅಭಿನಂದನಾ ಭಾಷಣ ಮಾಡಿ ಇದೊಂದು ಮಾದರಿ ಕಾರ್ಯಕ್ರಮ. ವೇ.ಮೂ.ಕೇಶವ ಭಟ್‌ರವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯಾಗಿದೆ. ಬರಹಗಳ ಮೂಲಕ 60ಕ್ಕೂ ಹೆಚ್ಚು ಕೃತಿ ವಿಮರ್ಶನೆ ಮಾಡಿದ ಡಾ|ಎಂ.ಜಿ.ಹೆಗಡೆಯವರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತೋಷದಾಯಕ ಎಂದರು. ಡಾ|ಜಿ.ಎಂ.ಹೆಗಡೆಯವರು ಸುಮಾರು 75ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ತನ್ನ ಅಪ್ಯಾಯಮಾನ ಶೈಲಿ, ಅಕ್ಕರೆಯ ನಿರೂಪಣೆಯಿಂದ ಹೆಸರುವಾಸಿಯಾಗಿದ್ದಾರೆ. ಕೃತಿಯ ಗುಣದೋಷದಲ್ಲಿ ಹೊಸ ಹಾದಿಯನ್ನು ಹಿಡಿದಿದ್ದಾರೆ. ಸಾಹಿತ್ಯ ಲೋಕಕ್ಕೆ ಅಕ್ಷರದ ಶಿಲ್ಪವನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದರು. ಎಲ್ಲ ಕವಿಗಳ ಬಗ್ಗಯೂ ಬರೆದು ಕನ್ನಡ ಸಾರಸ್ವತ ಲೋಕವನ್ನು ತೆರೆದಿಟ್ಟಿದ್ದಾರೆ. ಸಾಹಿತ್ಯದ ಸಂತನಾಗಿದ್ದ ಇವರಿಗೆ ಸಾಹಿತ್ಯದ ಉಪಾಸೆನೆಯೇ ಇವರ ಗುರಿಯಾಗಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಿದ್ದಾರೆ ಎಂದರು.

ಶಿಕ್ಷಕ ಶ್ರೇಷ್ಠತೆಗೆ ಮಾದರಿಯಾಗಿ ಬದುಕಿದವರು ಎಸ್.ಜಿ.ಕೃಷ್ಣ-ಡಾ|ಜಿ.ಎಂ.ಹೆಗಡೆ:
ಲಷ್ಕರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ|ಜಿ.ಎಂ.ಹೆಗಡೆಯವರು ನನಗೆ ಅತ್ಯಂತ ಪ್ರಿಯವಾದ ಕವಿಯೆಂದರೆ ಚೆನ್ನವೀರ ಕಣವಿ. ಅವರು ಮಳೆಗಾಲದ ಕವಿಯೂ ಹೌದು. ಪ್ರಶಸ್ತಿ ಸ್ವೀಕರಿಸಿದಕ್ಕೆ ಸಂತೋಷ ಇದೆ. ಎಸ್.ಜಿ.ಕೃಷ್ಣರವರು ತನ್ನ ತಂದೆಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಶಿಕ್ಷಕ ಶ್ರೇಷ್ಠತೆಗೆ ಮಾದರಿಯಾಗಿ ಬದುಕಿದವರು ಎಸ್.ಜಿ.ಕೃಷ್ಣರವರು. ಅವರೊಂದಿಗೆ ನನಗೆ ಸಾಹಿತ್ಯ ಸಂಬಂಧ ಇದೆ ಎಂದರು. ಪುಸ್ತಕವನ್ನು ಗೌರವಿಸುವ ಸಂಸ್ಕೃತಿ ಇಂದು ಕಡಿಮೆ ಆಗಿದೆ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ, ಚಿಂತನೆಗೆ ಒಳಪಡಿಸುವುದು ಇಂದಿನ ಅಗತ್ಯತೆಯಲ್ಲಿ ಒಂದಾಗಿದೆ. ಸಾಂಸ್ಕೃತಿಕ ಮನಸ್ಸನ್ನು ನಾವು ಕಳೆದುಕೊಳ್ಳಬಾರದು ಎಂದರು.

ಸಾಹಿತಿಗಳಿಗೆ ಪ್ರಕಾಶನದ ಸಮಸ್ಯೆ ಇದೆ-ಎಸ್.ಜಿ.ಕೃಷ್ಣ
ಲೋಕವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಎಸ್.ಜಿ.ಕೃಷ್ಣ ಮಾತನಾಡಿ ಬರಹಗಾರರು ಸಂತೃಪ್ತರಾಗಿರುವುದಿಲ್ಲ. ಬರವಣಿಗೆ ಸುಲಭ ಅಲ್ಲ. ಸಾಹಿತಿಗಳಿಗೆ ಪ್ರಕಾಶನದ ಸಮಸ್ಯೆ ಇದೆ. ಪುಸ್ತಕ ಪ್ರಕಾಶನಗೊಂಡರೂ ಪುಸ್ತಕ ತೆಗೊಳ್ಳುವವರು ಇಲ್ಲ ಎಂದರು. ಪ್ರೀತಿ ಇಟ್ಟು ನನ್ನ ಬಗ್ಗೆ ಕೃತಿ ರಚಿಸಿದ ಗಜಾನನ ಹೆಗಡೆಯವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಮುಂದೆಯೂ ಸಾಹಿತ್ಯ ಚಟುವಟಿಕೆಗಳು ನಡೆಯಲಿ ಎಂದರು.

ನನಗೆ ಸಾಕಷ್ಟು ಅರಿವು ಕೊಟ್ಟವರು ಎಸ್.ಜಿ.ಕೃಷ್ಣರವರು-ಕೆ.ಜಯರಾಜ ಆಚಾರ್:
ಅಧ್ಯಕ್ಷತೆ ವಹಿಸಿದ್ದ ಲೋಕವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಜಯರಾಜ ಆಚಾರ್ ಮಾತನಾಡಿ ಮನುಷ್ಯ ಮನುಷ್ಯನಾಗಿ ಬದುಕಬೇಕು. ಇವತ್ತಿನ ಕಾಲಘಟ್ಟದಲ್ಲಿ ಇದು ನಡೆಯುತ್ತಿಲ್ಲ. ಅಪರೂಪವಾದ ಮಾನವ ಜನ್ಮವನ್ನು ಸದುಪಯೋಗ ಪಡೆದುಕೊಳ್ಳಬೇಕು. ಎಸ್.ಜಿ.ಕೃಷ್ಣರವರು ಮಕ್ಕಳನ್ನು ಬೆಳೆಸಿದ ರೀತಿ ನನ್ನ ಮೇಲೆ ಪ್ರಭಾವ ಬೀರಿದೆ ನನಗೆ ಸಾಕಷ್ಟು ಅರಿವು ಕೊಟ್ಟ ಎಸ್.ಜಿ.ಕೃಷ್ಣರವರು ನನಗೆ ಗುರುಗಳ ಸಮಾನ ಎಂದರು. ಮುಂದೊಂದು ದಿನ ಪುಸ್ತಕಗಳನ್ನು ಕೇಳಿ ಪಡೆದುಕೊಳ್ಳುವ ಕಾಲ ಬರಬಹುದು ಎಂಬ ಆಶಾಭಾವನೆ ನನ್ನದು ಎಂದರು.

ಸನ್ಮಾನ:
ಎಸ್.ಜಿ.ಕೃಷ್ಣರವರ ಬಗ್ಗೆ ಚತುರ್ಮುಖ ಎಂಬ ಕೃತಿಯ ಸಂಪಾದಕರಾದ ಡಾ|ಗಜಾನನ ಹೆಗಡೆಯವರನ್ನು ಪ್ರತಿಷ್ಠಾನದ ವತಿಯಿಂದ ಹಾರ, ಶಲ್ಯ, ಪೇಟ, ಬಂಗಾರ ನೀಡಿ ಸನ್ಮಾನಿಸಲಾಯಿತು.

ಶಿವಪ್ಪ ಎಂಬವರಿಗೆ ಲೋಕವಿಕಾಸ ಪ್ರತಿಷ್ಠಾನದಿಂದ ಸಹಾಯಧನ ವಿತರಿಸಲಾಯಿತು. ಚತುರ್ಮುಖ ಕೃತಿಗೆ ಲೇಖನಗಳನ್ನು ಬರೆದುಕೊಟ್ಟ ಸೀತಾರಾಮ ಅಮಳ, ಶಿವರಾಮ ಅಮಳ, ಉಮಾಮಹೇಶ್ವರರವರನ್ನು ಅಭಿನಂದಿಸಲಾಯಿತು. ಲೋಕವಿಕಾಸ ಪ್ರತಿಷ್ಠಾನದ ಕಾರ್ಯದರ್ಶಿ ಶಿವರಾಮ ಅಮಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ|ಶೋಭಾಹರ್ಷಪ್ರಸಾದ್ ಪ್ರಾರ್ಥಿಸಿ ಕೃಷ್ಣ ಆರ್ಕೇಡ್ ಮಾಲಕ ಡಾ|ಎಲ್.ಕೃಷ್ಣಪ್ರಸಾದ್ ಸ್ವಾಗತಿಸಿದರು. ಲಷ್ಕರಿ ಪ್ರಶಸ್ತಿ ಆಯ್ಕ ಸಮಿತಿ ಸಂಚಾಲಕ ಎಕ್ಕಡ್ಕ ವಿಷ್ಣು ಭಟ್ ವಂದಿಸಿ ಲೋಕವಿಕಾಸ ಪ್ರತಿಷ್ಠಾನದ ನಿರ್ದೇಶಕ ಉಮಾಮಹೇಶ್ವರ ಕಾರ್ಯಕ್ರಮ ನಿರೂಪಿಸಿದರು.

ಲಷ್ಕರಿ ಪ್ರಶಸ್ತಿಗೆ ಭಾಜನರಾದ ವಿಮರ್ಶಕ, ಸಂಶೋಧಕ ಡಾ|ಜಿ.ಎಂ.ಹೆಗಡೆ
ಲೋಕವಿಕಾಸ ಪ್ರತಿಷ್ಠಾನದ ವತಿಯಿಂದ ಪ್ರತೀ ವರ್ಷ ವೇ.ಮೂ.ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಬಾರಿ ಖ್ಯಾತ ವಿಮರ್ಶಕ ಹಾಗೂ ಸಂಶೋಧಕ ದಾರವಾಡದ ಡಾ|ಜಿ.ಎಂ.ಹೆಗಡೆಯವರಿಗೆ ಲಷ್ಕರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾರ, ಫಲಪುಷ್ಪ, ಸ್ಮರಣಿಕೆ, ಪೇಟ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್.ಜಿ.ಕೃಷ್ಣರವರಿಗೆ ಚತುರ್ಮುಖ ಕೃತಿ ಅರ್ಪಣೆ
ಲೋಕವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಎಸ್.ಜಿ.ಕೃಷ್ಣರವರ ಬಗ್ಗೆ ಹೊನ್ನಾವರ ಅಳ್ಳಂಕಿ ಸ.ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಗಜಾನನ ಹೆಗಡೆಯವರು ಚತುರ್ಮುಖ ಕೃತಿ ಬರೆದಿದ್ದು ಇದನ್ನು ಅನಾವರಣಗೊಳಿಸಲಾಯಿತು. ಚತುರ್ಮುಖ ಕೃತಿಯನ್ನು ಎಸ್.ಜಿ.ಕೃಷ್ಣರವರಿಗೆ ಅರ್ಪಿಸಲಾಯಿತು. ಕೃತಿಯ ಬಗ್ಗೆ ಡಾ|ಗಜಾನನ ಹೆಗಡೆಯವರು ಮಾತನಾಡಿದರು.

LEAVE A REPLY

Please enter your comment!
Please enter your name here