





ಬರಹ: ಸಂತೋಷ್ ಮೊಟ್ಟೆತ್ತಡ್ಕ


ಪುತ್ತೂರು: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಪ್ರೊ ಕಬಡ್ಡಿಯ ಹನ್ನೊಂದನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಕ್ರೀಡಾಭಿಮಾನಿಗಳು ಪ್ರೊ ಕಬಡ್ಡಿ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಪ್ರೊ ಕಬಡ್ಡಿ ಕ್ರೀಡೆಯಲ್ಲಿ ಓರ್ವ ಅದ್ವಿತೀಯ ಆಟಗಾರನಾಗಿ, ಕಪ್ತಾನನಾಗಿ ಪಾರಮ್ಯ ಮೆರೆಸಿದ ಪುತ್ತೂರಿನ ಕುವರ, ಪುತ್ತೂರ್ದ ಮುತ್ತು, ಏಕಲವ್ಯ ಪ್ರಶಸ್ತಿ ಪುರಸ್ಕೃತ, ವಿಜಯಾ ಬ್ಯಾಂಕ್(ಬ್ಯಾಂಕ್ ಆಫ್ ಬರೋಡಾ) ಉದ್ಯೋಗಿ ಪ್ರಶಾಂತ್ ರೈ ಕೈಕಾರರವರು ಇದೀಗ ಪ್ರೊ ಕಬಡ್ಡಿ ಪಾಟ್ನಾ ಪೈರೆಟ್ಸ್ ತಂಡದ ಸಹಾಯಕ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.





ಪ್ರೊ ಕಬಡ್ಡಿ ಆರಂಭವಾದಾಗ್ಗಿಂದ ವಿವಿಧ ತಂಡಗಳಲ್ಲಿ ಆಡಿದ ಅನುಭವ ಪ್ರಶಾಂತ್ ರೈಯವರಲ್ಲಿದೆ. ತನ್ನ ಕಾಲೇಜು ದಿನಗಳಲ್ಲಿ ಬಳಿಕ ಪ್ರೊ ಕಬಡ್ಡಿಯಲ್ಲಿ ಮಾಡಿರುವ ಸಾಧನೆಗೆ ರಾಜ್ಯ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ಪ್ರಶಾಂತ್ ರೈಯವರು ಪ್ರೊ ಕಬಡ್ಡಿಯಲ್ಲಿ ಒಂಭತ್ತು ಆವೃತ್ತಿಯಲ್ಲಿ ನಿರಂತರ ಆಡುವ ಮೂಲಕ ಪ್ರಸಿದ್ಧಿ ಹೊಂದಿದ್ದು ತನ್ನದೇ ಅಭಿಮಾನಿಗಳನ್ನು ಹೊಂದಿರುತ್ತಾರೆ.
2014ರಲ್ಲಿ ಆರಂಭವಾದ ಪ್ರೊ ಕಬಡ್ಡಿಯ ಮೊದಲ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್, ಬಳಿಕದ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ, ಐದನೇ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್, ಆರನೇ ಆವೃತ್ತಿಯಲ್ಲಿ ಯೂಪಿ ಯೋಧ, ಏಳನೇ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್, ಎಂಟನೇ ಆವೃತ್ತಿಯಲ್ಲಿ ಪಾಟ್ನಾ ಪೈರೆಟ್ಸ್(ನಾಯಕನಾಗಿ), ಒಂಭತ್ತನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ನಲ್ಲಿ ಆಡಿದ ಅನುಭವ ಹೊಂದಿರುತ್ತಾರೆ.
ಸಾಧಕ ಪ್ರಶಾಂತ್ ರೈಯವರು ಪ್ರೊ ಕಬಡ್ಡಿಯ ಎಂಟನೇ ಆವೃತ್ತಿಯಲ್ಲಿ ಪಾಟ್ನಾ ಪೈರೆಟ್ಸ್ ತಂಡದ ಚುಕ್ಕಾಣಿ ಹಿಡಿದು ತಂಡವನ್ನು ಫೈನಲಿಗೆ ಮುನ್ನೆಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದೀಗ ಅದೇ ತಂಡದ ಸಹಾಯಕ ತರಬೇತುದಾರರಾಗಿ ಪ್ರಶಾಂತ್ ರೈಯವರು ನೇಮಕಗೊಂಡಿರುವುದು ವಿಶೇಷವಾಗಿದೆ.
ವೈಟ್ಲಿಪ್ಟರ್ ಆಗಬಯಸಿದ್ದ ಪ್ರಶಾಂತ್ ರೈರವರಿಗೆ ಕೈಬೀಸಿ ಕರೆದದ್ದು ಮತ್ತು ಬದುಕಿನ ಸಂಜೀವಿನಿಯಾದದ್ದು ಮಾತ್ರ ಕಬಡ್ಡಿ. ಮಡ್ ಕಬಡ್ಡಿಯೊಂದಿಗೆ ಅಭ್ಯಾಸ ಆರಂಭಿಸಿ ಕಬಡ್ಡಿಯಲ್ಲಿ ನಿರಂತರ ಬೆವರು ಸುರಿಸಿದ್ದರಿಂದಲೇ ಪ್ರಶಾಂತ್ ರೈರವರಿಗೆ ಅದೃಷ್ಟದ ಬಾಗಿಲು ತೆರೆದಿದೆ ಎಂದರೆ ಸುಳ್ಳಲ್ಲ. ಪ್ರಶಾಂತ್ ರೈಯವರಿಗೆ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ದೊರಕಿಸಿಕೊಡಲು ಕೋಟಿ-ಚೆನ್ನಯ ಕಂಬಳ ಸಮಿತಿ ಪುತ್ತೂರು ಇದರ ಅಧ್ಯಕ್ಷರಾಗಿರುವ ಎನ್.ಚಂದ್ರಹಾಸ ಶೆಟ್ಟಿ, ಕಬಡ್ಡಿಯಲ್ಲಿ ಉನ್ನತ ಹಂತಕ್ಕೇರಲು ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೋ ಹಾಗೂ ಕಬಡ್ಡಿ ಕೋಚ್ ಹಬೀಬ್ ಮಾಣಿರವರು ಪ್ರಮುಖ ಕಾರಣಕರ್ತರಾಗಿದ್ದಾರೆ.
ದ.ಕ ಕರಾವಳಿ ತೀರದ ಕೈಕಾರ ಎಂಬಲ್ಲಿ ತಂದೆ ಕೆಎಸ್ಆರ್ಟಿಸಿ ಚಾಲಕ ದಿ.ಸೀತಾರಾಮ ರೈ ಹಾಗೂ ತಾಯಿ ದಿ.ಸತ್ಯವತಿ ರೈ ದಂಪತಿಯ ಈರ್ವರು ಗಂಡು ಮಕ್ಕಳಲ್ಲಿ ಹಿರಿಯವನಾಗಿ ಜನಿಸಿದ ಪ್ರಶಾಂತ್ ರೈಯವರು ಪ್ರಸ್ತುತ ಪತ್ನಿ ವಜ್ರೇಶ್ವರಿ, ಪುತ್ರ ಶತಾಯು ರೈ, ಪುತ್ರಿ ಶ್ರೀತ ರೈರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.










