ಉಲಾಯಿಬೆಟ್ಟು ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣ : ಪ್ರಮುಖ ಆರೊಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ

0

ಬಂಟ್ವಾಳ: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಲಾಯಿಬೆಟ್ಟುವಿನಲ್ಲಿ ಪದ್ಮನಾಭ ಕೋಟ್ಯಾನ್ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಆರೋಪಿಗಳನ್ನು ಬಂಧಿಸಿದ್ದರೂ ಅವರು ದರೋಡೆ ಮಾಡಿದ ನಗದು ಹಾಗೂ ಚಿನ್ನಾಭರಣಗಳು ವಶಕ್ಕೆ ಪಡೆದುಕೊಂಡಿರುವುದಿಲ್ಲ. ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟ ಮುಖ್ಯ ಆರೋಪಿಗಳು ಅಂದರೆ ದರೋಡೆಗೆ ಸಂಬಂಧಪಟ್ಟ ವಸ್ತುಗಳು ಇವರಲ್ಲಿವೆ ಎಂದು ಹೇಳಲಾದ ಆರೋಪಿಗಳು ಇನ್ನು ಪತ್ತೆಯಾಗಿರುವುದಿಲ್ಲ. ಜಿಲ್ಲೆಯ ಜನತೆಯನ್ನು ಆತಂಕಗೊಳಿಸಿದ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳನ್ನು ಬಂಧಿಸಿ ದರೋಡೆಯಾದ ವಸ್ತುಗಳನ್ನು ಸ್ವಾಧೀನಪಡಿಸುವಂತೆ ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.


ಕಳೆದ ಜೂ. 21ರಂದು ಈ ಪ್ರಕರಣ ನಡೆದಿದ್ದು 12 ಮಂದಿ ಮುಸುಕುಧಾರಿಗಳು ಪದ್ಮನಾಭ ಕೋಟ್ಯಾನ್ ಅವರ ಮನೆಗೆ ಅಕ್ರಮ ಪ್ರವೇಶಗೈದು ಮನೆಮಂದಿಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದರೋಡೆಗೈದಿದ್ದರು. ಅಲ್ಲದೆ ಬಲತ್ಕಾರವಾಗಿ ಕಾರಿನ ಕೀ ಪಡೆದು ಕಾರನ್ನು ಕೊಂಡುಹೋಗಿ ಅರ್ಧದಲ್ಲಿ ಬಿಟ್ಟು ಹೋಗಿದ್ದಾರೆ. ಘಟನೆಯ ಬಳಿಕ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರೂ ಕೂಡ ದರೋಡೆಯಾದ ವಸ್ತುಗಳ ವಶವಾಗಿರುವುದಿಲ್ಲ, ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪದ್ಮನಾಭ ಕೋಟ್ಯಾನ್ ಅವರು ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿದ್ದು ಅವರ ಮನೆಯಿಂದ ದರೋಡೆಯಾಗಿರುವ ಸೊತ್ತುಗಳನ್ನು ವಶ ಪಡಿಸಿಕೊಂಡು ವಾರಸುದಾರರಿಗೆ ಒಪ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.


ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೆಶಕರಾದ ಆರ್. ಸಿ. ನಾರಾಯಣ್, ವಿಶ್ವನಾಥ ಬಿ. ವಿಜಯ್ ಕುಮಾರ್ ಸೊರಕೆವ, ಗಣೇಶ್ ಮೂಡುಪೆರಾರ, ಶಿವಪ್ಪ ಸುವರ್ಣ, ಸಿಐಒ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here