ಪುತ್ತೂರು:ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಕೊಲೆ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಈಗಾಗಲೇ ಪ್ರಕರಣ ದಾಖಲಾಗಿ ಜಾಮೀನು ಪಡೆದುಕೊಂಡಿರುವ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಇದೀಗ ಅತ್ಯಾಚಾರ ಆರೋಪವನ್ನೂ ಸೇರಿಸಲಾಗಿದೆ.ಸಂತ್ರಸ್ತ ಮಹಿಳೆ ನ್ಯಾಯಾಧೀಶರೆದುರು 164ರಡಿ ಹೇಳಿಕೆ ನೀಡಿದ ಬಳಿಕ ಈ ಬೆಳವಣಿಗೆಯಾಗಿದೆ.ಅತ್ಯಾಚಾರ ಆರೋಪವನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ ಮಾತ್ರವಲ್ಲದೆ, ಘಟನೆ ಬೆಂಗಳೂರುನಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಂತ್ರಸ್ತೆ ನೀಡಿದ್ದ ದೂರು:
ಪುತ್ತಿಲ ಅವರ ಹಿಂದುತ್ವದ ಪ್ರತಿಪಾದನೆ ಮತ್ತು ಪ್ರಖ್ಯಾತಿಯನ್ನು ಕಂಡು ತಾನು ಅಭಿಮಾನವನ್ನು ಹೊಂದಿದ್ದು, ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನೈತಿಕ ಬೆಂಬಲ ನೀಡುತ್ತಿದ್ದೆ. ನನ್ನನ್ನು ಅವರು ಬೆಂಗಳೂರು ಪೈ ವಿಸ್ಟಾ ಹೊಟೇಲ್‌ಗೆ ಜೂನ್ 2023ಕ್ಕೆ ಕರೆಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿ, ತನ್ನ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು.ಇತರ ಕಡೆಗಳಲ್ಲಿ ಮುಖತ: ಸಂಪರ್ಕಿಸುತ್ತಿದ್ದು ಎಲ್ಲಾ ಸಂದರ್ಭಗಳಲ್ಲೂ ಕೂಡಾ, ಒಂದೋ ನಿನ್ನ ಪ್ರಾಣ ಹೋಗುತ್ತದೆ.
ಇಲ್ಲಾ ನನ್ನ ಪ್ರಾಣ ಹೋಗುತ್ತದೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ನನ್ನನ್ನು ಅವರು ಇರುವ ಜಾಗಕ್ಕೆ ಕರೆಸಿಕೊಳ್ಳುತ್ತಿದ್ದರು.ಅಬಲೆಯಾದ ನನ್ನನ್ನು ಮತ್ತು ನನ್ನ ಮಗಳನ್ನು ಜೀವನಪೂರ್ತಿ ಯಾವುದೇ ಕುಂದುಕೊರತೆಗಳಿಲ್ಲದೆ ನೋಡಿಕೊಳ್ಳುತ್ತೆನೆಂದು ಹೇಳಿ ನನ್ನನ್ನು ನಂಬಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು.
ನಾನು ಆತನೊಂದಿಗಿದ್ದ ಕ್ಷಣಗಳ ಛಾಯಾಚಿತ್ರಗಳು,ಸೆಲ್ಫಿಗಳು,ಆಡಿಯೋ-ವೀಡಿಯೋಗಳು ಅರುಣ್ ಕುಮಾರ್ ಪುತ್ತಿಲ ತನ್ನಲ್ಲಿದೆಯೆಂದು ಹೇಳಿ ನನ್ನನ್ನು ಬೆದರಿಸಿ,ಬ್ಲ್ಯಾಕ್‌ಮೇಲ್ ಮಾಡಿ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದು 2024ರ ಲೋಕಸಭೆ ಚುನಾವಣೆಯ ನಂತರ ತನ್ನೊಂದಿಗಿನ ಮಾತುಕತೆಯನ್ನು ಕಡಿಮೆಗೊಳಿಸಿ, ನನ್ನನ್ನು ಸಂಪೂರ್ಣವಾಗಿ ಶೋಷಣೆಗೊಳಪಡಿಸಿರುವುದಾಗಿೞಆರೋಪಿಸಿ ಸಂತ್ರಸ್ತ ಮಹಿಳೆ ಸೆ.೧ರಂದು ನೀಡಿದ್ದ ದೂರಿನ ಮೇರೆಗೆ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಮಹಿಳಾ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 417,354(ಎ),506ರಡಿ ಪ್ರಕರಣ(ಅ.ಕ್ರ..0045/2024)ದಾಖಲಿಸಿಕೊಂಡಿದ್ದರು.
ಪುತ್ತಿಲರಿಗೆ ಜಾಮೀನು: ಸಂತ್ರಸ್ತೆ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.ಆರೋಪಿ ಅರುಣ್ ಕುಮಾರ್ ಪುತ್ತಿಲ ಅವರು ಬಳಿಕ ಪುತ್ತೂರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.
ನ್ಯಾಯಾಧೀಶರೆದುರು ಸಂತ್ರಸ್ತೆಯ ಹೇಳಿಕೆ: ಸೆ.2ರಂದು ಸಂತ್ರಸ್ತೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಆಕೆ ಪುತ್ತೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರೆದುರು ಹೇಳಿಕೆ ನೀಡಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಅವರು ನ್ಯಾಯಾಧೀಶರೆದುರು ಇದ್ದು ಹೇಳಿಕೆ ನೀಡಿದರು.ಬಳಿಕ ಆಕೆಯನ್ನು ಪೊಲೀಸರು ಬೆಂಗಳೂರುಗೆ ಕರೆದೊಯ್ದು ಪೈ ವಿಸ್ಟಾ ಹೊಟೇಲ್‌ನಲ್ಲಿ ಸ್ಥಳ ಮಹಜರು ನಡೆಸಿದ್ದರು.
ಅತ್ಯಾಚಾರ ಆರೋಪ ಸೇರ್ಪಡೆ: ಸಂತ್ರಸ್ತೆ ನ್ಯಾಯಾಧೀಶರೆದುರು ಹೇಳಿಕೆ ನೀಡಿದ ಬಳಿಕ ಪೊಲೀಸರು ಇದೀಗ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಅತ್ಯಾಚಾರ(ಐಪಿಸಿ ಸೆಕ್ಷನ್ 376)ಆರೋಪವನ್ನೂ ಪ್ರಕರಣದಲ್ಲಿ ಸೇರ್ಪಡೆಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣ ಬೆಂಗಳೂರುಗೆ ವರ್ಗಾಯಿಸಲು ಅರ್ಜಿ: 2023ರ ಜೂ.1ರಿಂದ 8ರ ನಡುವಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೃತ್ಯ ನಡೆದಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.ಕೃತ್ಯ ನಡೆದಿರುವುದು ಬೆಂಗಳೂರು ವ್ಯಾಪ್ತಿಯಲ್ಲಿ ಆಗಿರುವುದರಿಂದ ಪುತ್ತೂರು ನ್ಯಾಯಾಲಯದಿಂದ ಈ ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಸುಪರ್ದಿಗೆ ವರ್ಗಾಯಿಸುವಂತೆಯೂ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಈ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ಪ್ರಕರಣವನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸಿದರೆ ಮುಂದಿನ ವಿಚಾರಣೆ ಬೆಂಗಳೂರುನಲ್ಲಿಯೇ ನಡೆಯಲಿದೆ.