ಪುತ್ತೂರು: ಪುತ್ತೂರು ಪೇಟೆಯ ಹಲವು ಭಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗ ನಗರಸಭೆ ನೂತನ ಅಧ್ಯಕ್ಷೆ ಲೀಲಾವತಿ ಮತ್ತು ಉಪಾಧ್ಯಕ್ಷ ಬಾಲಚಂದ್ರ ಅವರಿಗೆ ಮನವಿ ಮಾಡಿದರು.
ನಗರಸಭೆಯ ರಸ್ತೆಯು ತೀವ್ರ ಸ್ವರೂಪದಲ್ಲಿ ಕೆಟ್ಟುಹೋಗಿದ್ದು ಪ್ರಾಣಾಪಾಯ ಸಂಭವಿಸುವ ರೀತಿಯಲ್ಲಿರುವುದರಿಂದ ಈಗಾಗಲೆ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗಿದೆ. ಅಲ್ಲದೆ ಜನರಿಗೆ ನಡೆದಾಡಲು (ಫುಟ್ ಪಾತ್) ಕಾಲುದಾರಿಗಳು ಅವಶ್ಯವಿದ್ದು ಎಲ್ಲಾ ಕಡೆಯೂ ನಿರ್ಮಿಸುವುದು ಮತ್ತು ಅಪಾಯ ಸ್ಥಿತಿಯಲ್ಲಿರುವ ಕಾಲುದಾರಿ (ಫುಟ್ ಪಾತ್) ಗಳನ್ನು ಅತೀ ಶೀಘ್ರದಲ್ಲಿ ಸರಿಪಡಿಸಬೇಕು. ಇದರ ಜೊತೆಗೆ ಈಗಾಗಲೇ ಪೇಟೆಯಲ್ಲಿ ಗಣೇಶೋತ್ಸವವು ನಡೆಯುತ್ತಿದ್ದು ಕೆಲವು ದಿನಗಳಲ್ಲಿ ಶೋಭಾಯಾತ್ರೆಯು ನಡೆಯಲಿರುವುದು. ಅಂತೆಯೇ ಪೇಟೆಯಲ್ಲಿ ಜನ ಸಂಚಾರ ಅಧಿಕವಾಗಲಿರುವುದು ಹಾಗೂ ಸ್ವಚ್ಛತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಸಹಕಾರ:
ನಗರಸಭೆ ವ್ಯಾಪ್ತಿಯೊಳಗೆ ವಾಹನ ಪಾರ್ಕಿಂಗ್ ಆಗಬೇಕಾಗಿದೆ. ಕೋರ್ಟ್ ರಸ್ತೆಯ ಏಕಮುಖ ವಾಹನ ಸಂಚಾರ ಪರಿಷ್ಕರಿಸಬೇಕು, ಆನ್ ಲೈನ್ ಪೇಮೆಂಟ್ ಸರಿಯಾದ ರೀತಿಯಲ್ಲಿ ಜಾರಿ ಮಾಡಬೇಕು. ಪ್ಲಾಸ್ಟಿಕ್ ನಿಷೇಧ ಕುರಿತು ಉತ್ಪಾದನೆ ಹಂತದಲ್ಲೇ ಕಡಿವಾಣ ಹಾಕಬೇಕು, ಸ್ವಚ್ಚತೆಯ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ವರ್ತಕ ಸಂಘ ಸದಾ ಪೂರ್ಣ ಸಹಕಾರ ನೀಡಲಿದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಅವರು ನಗರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ತಿಳಿಸಿದರು. ನಗರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ದಿ ಮತ್ತು ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಮನೋಜ್ ಟಿ ವಿ, ಉಪಾಧ್ಯಕ್ಷರಾದ ರವಿಕೃಷ್ಣ ಕಲ್ಲಾಜೆ, ರಮೇಶ್ ಪ್ರಭು, ಕೋಶಾಧಿಕಾರಿ ಉಲ್ಲಾಸ್ ಪೈ, ಕಾರ್ಯದರ್ಶಿ ನೌಶದ್ ಹಾಜಿ ಬೊಳುವಾರು ಉಪಸ್ಥಿತರಿದ್ದರು.