ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಭೆ – ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆದ ಸಭೆ

0

*ಅಡ್ಡಹೊಳೆ-ಬಿ.ಸಿ.ರೋಡ್‌ 2025ಕ್ಕೆ ಪೂರ್ಣ
*ಏಕಲವ್ಯ ಮಾದರಿ ವಸತಿ ಶಾಲೆಗೆ ಪ್ರಸ್ತಾವನೆ
*ಮಾಣಿ, ಉಪ್ಪಿನಂಗಡಿ  ಫ್ಲೈ ಓವರ್‌ ಡಿಸೆಂಬರ್‌ಗೆ ಪೂರ್ಣ
*ಕಲ್ಲಡ್ಕ ಫ್ಲೈಓವರ್‌ 2025 ರ ಜನವರಿಗೆ ಪೂರ್ಣ
*ನವೆಂಬರ್‌ನಿಂದ ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟ ಪುನರಾರಂಭ  
*ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಜನಮನ್ ಕಾರ್ಯಕ್ರಮ
*ಖನಿಜನಿಧಿಯಿಂದ ಮರಳು ಗಣಿಗಾರಿಕೆ ಬಾಧಿತ ಪ್ರದೇಶದ ಅಭಿವೃದ್ಧಿ

ಮಂಗಳೂರು: ಅತ್ಯಧಿಕ ವಾಹನ ಸಂಚಾರ ಇರುವ ಬಿ.ಸಿ.ರೋಡ್‌-ಸುರತ್ಕಲ್‌ ಹೆದ್ದಾರಿಯ ಶಾಶ್ವತ ನಿರ್ವಹಣೆ ಹಾಗೂ ಈ ಪ್ರದೇಶಗಳ ನಡುವೆ ಬೈಪಾಸ್‌ ನಿರ್ಮಾಣ ಕುರಿತಂತೆ ಪ್ರಸ್ತಾವ ಸಿದ್ಧಪಡಿಸಲು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದಾರೆ. ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಇತರ ಹೆದ್ದಾರಿ ಭಾಗಗಳಿಗೆ ಹೋಲಿಸಿದರೆ ಬಿ.ಸಿ.ರೋಡ್‌ ಮತ್ತು ಸುರತ್ಕಲ್‌ ಮಧ್ಯೆ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಭಾಗ ಹೆಚ್ಚಾಗಿ ಹಾನಿಗೊಳಗಾಗಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಇದಕ್ಕೆ ಶಾಶ್ವತ ನಿರ್ವಹಣೆ ಯೋಜನೆ ರೂಪಿಸಲು ಹೆದ್ದಾರಿ ಸಚಿವಾಲಯದೊಂದಿಗೆ ಚರ್ಚಿಸಿದ್ದು, ಪ್ರಸ್ತಾವನೆ ಸಿದ್ಧಪಡಿಸಬೇಕಿದೆ. ಈ ಎರಡೂ ಪ್ರದೇಶಗಳನ್ನು ಬೆಸೆಯುವ ಬೈಪಾಸ್‌ ಕೂಡ ನಿರ್ಮಿಸಬೇಕಿದೆ ಎಂದರು.

ಅಡ್ಡಹೊಳೆ-ಬಿ.ಸಿ.ರೋಡ್‌ 2025ಕ್ಕೆ ಪೂರ್ಣ
ಈ ಹೆದ್ದಾರಿ ಚತುಷ್ಪಥ ಯೋಜನೆ ಎರಡು ಪ್ಯಾಕೇಜ್‌ಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಪೆರಿಯಶಾಂತಿ-ಅಡ್ಡಹೊಳೆ ನಡುವಿನ ಪ್ಯಾಕೇಜ್‌ 1ರಲ್ಲಿ ಆನೆ ಪಥ ನಿರ್ಮಾಣ ಕುರಿತು ರೆಖ್ಯ ಗ್ರಾಮಸ್ಥರು ನ್ಯಾಯಾಲಯದ ಮೊರೆಹೋಗಿದ್ದಾರೆ. ಉಳಿದ 13 ಕಿ.ಮೀ. ಕೆಲಸ ಪೂರ್ಣಗೊಂಡಿದೆ. ಅಡ್ಡಹೊಳೆ -ಬಿ.ಸಿ.ರೋಡ್‌ ನಡುವಿನ ಪ್ಯಾಕೇಜ್‌-2ರ 48 ಕಿ.ಮೀ.ಪೈಕಿ 31 ಕಿ.ಮೀ. ಪೂರ್ಣಗೊಂಡಿದ್ದು, ಮಾರ್ಚ್‌ ವೇಳೆ ಉಳಿದದ್ದೂ ಪೂರ್ಣವಾಗಬಹುದು ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್‌ ಅಜ್ಮಿ ತಿಳಿಸಿದರು. 

ಮಾಣಿ, ಉಪ್ಪಿನಂಗಡಿ  ಫ್ಲೈ ಓವರ್‌ ಇದೇ ಡಿಸೆಂಬರ್‌ಗೆ ಹಾಗೂ ಕಲ್ಲಡ್ಕ ಫ್ಲೈಓವರ್‌ 2025 ರ ಜನವರಿಗೆ ಮುಗಿಯಲಿದೆ. ನರಹರಿ ಪರ್ವತ ಬಳಿ ಗ್ರಾಮಸ್ಥರು ಸರ್ವಿಸ್‌ ರಸ್ತೆ ಬೇಡಿಕೆ ಇರಿಸಿದ್ದರಿಂದ ಅನುಮೋದನೆ ಪಡೆದು ಮೇ ತಿಂಗಳಿ ನಿಂದ ಕಾರ್ಯಾರಂಭಿಸಿದ್ದು, ತುಸು ವಿಳಂಬವಾಗಿದೆ ಎಂದರು.

ಏಕಲವ್ಯ ಮಾದರಿ ವಸತಿ ಶಾಲೆ
ಕೇಂದ್ರ ಸರಕಾರದ ಬುಡಕಟ್ಟು ವ್ಯವಹಾರಗಳ ಸಚಿವಾ ಲಯ ನಿರ್ವಹಿಸುವ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಜಿಲ್ಲೆಯಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ದಪಡಿಸುವಂತೆ ನಿರ್ದೇಶಿಸಿದ ಸಂಸದರು, ಬೆಳ್ತಂಗಡಿ, ಕಡಬ ಅಥವಾ ಮೂಲ್ಕಿ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಈ ಶಾಲೆ ಆರಂಭಿಸಲು ಅಪರ ಜಿಲ್ಲಾಧಿಕಾರಿಗೆ ಸೂಚಿಸಿದರು.

ರೈಲ್ವೇ ಬಗ್ಗೆ ಮಾಸಿಕ- ತ್ತೈಮಾಸಿಕ ಸಭೆ
ಸಭೆಯಲ್ಲಿ ರೈಲ್ವೆ ಇಲಾಖೆ ಸಂಬಂಧಿತ ವಿಷಯಗಳಿಗೆ ಉತ್ತರಿಸಲು ಯಾವುದೇ ಹಿರಿಯ ಅಧಿಕಾರಿಗಳು ಇರಲಿಲ್ಲ. ಸೂಕ್ತ ನೋಡಲ್‌ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲು ಅಪರ ಜಿಲ್ಲಾಧಿಕಾರಿಗೆ ಸಂಸದರು ಸೂಚಿಸಿದರು. ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟ ಪುನರಾರಂಭಕ್ಕೆ ಸುಬ್ರಹ್ಮಣ್ಯ ಮಾರ್ಗ ವಿದ್ಯುದ್ದೀಕರಣ ಆಗ ಬೇಕಿದೆ. ಅದು ಯಾವಾಗ ಪೂರ್ಣವಾಗಲಿದೆ ಎಂಬ ಸಂಸದರ ಪ್ರಶ್ನೆಗೆ, ನವೆಂಬರ್‌ನೊಳಗೆ ಎಂಬ ಉತ್ತರ ಲಭಿಸಿತು.

ಪ್ರಧಾನಿಯವರ ಜನಮನ್‌ ಕಾರ್ಯಕ್ರಮ ರಾಜ್ಯದ ಐದು ಜಿಲ್ಲೆಗಳಿಗೆ ದೊರಕಿದೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡಲು ಸೂಚಿಸಲಾಯಿತು. 

ಒಂಬತ್ತು ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಕುಡಿಯುವ ನೀರು, ವಿದ್ಯುತ್‌ ಸೋಲಾರ್‌ ವ್ಯವಸ್ಥೆ ಸಹಿತ ಒಂದೇ ಸೂರಿನಡಿ ಕೊರಗ ಸಮುದಾಯಗಳಿರುವ ಪ್ರದೇಶಗಳಲ್ಲಿ ಸೌಲಭ್ಯಗಳು ದೊರೆ ಯುವಂತೆ ಕಾಮಗಾರಿ ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 181 ಕೊರಗ ಕಾಲನಿಗಳನ್ನು ಗುರುತಿಸಲಾಗಿದೆ ಎಂದು ಐಟಿಡಿಪಿ ಅಧಿಕಾರಿ ಮಾಹಿತಿ ನೀಡಿದರು.

ಬಿ.ಸಿ.ರೋಡ್‌ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರು
ಬಿ.ಸಿ.ರೋಡ್‌ ಜಂಕ್ಷನ್‌ಗೆ ಬಹ್ಮಶ್ರೀ ನಾರಾಯಣಗುರು ವೃತ್ತವೆಂದು ಹೆಸರಿಡಲು ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು. 

ಜಿಲ್ಲಾಭಿವೃದ್ಧಿಗೆ ಹಣ ಬಳಕೆ
ಜಿಲ್ಲೆಯ ಗಣಿ ಇಲಾಖೆಯ ಜಿಲ್ಲಾ ಖನಿಜ ನಿಧಿ 18 ಕೋಟಿ ರೂ. ಲಭ್ಯವಿದ್ದು, ಇದನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಲು ಪೂರಕವಾಗಿ ಆಡಳಿತ ಮತ್ತು ನಿರ್ವಹಣ ಸಮಿತಿ ಪುನರ್‌ ರಚಿಸುವಂತೆ ಸಂಸದರು ನಿರ್ದೇಶಿಸಿದರು. ಈ ನಿಧಿಯ ಶೇ.60ನ್ನು ಮರಳು ಗಣಿಗಾರಿಕೆ ಬಾಧಿತ ಪ್ರದೇಶ ಹಾಗೂ ಶೇ.40ನ್ನು ಪರೋಕ್ಷವಾಗಿ ಬಾಧಿತ ಪ್ರದೇಶಗಳ ಪ್ರಗತಿಗೆ ಬಳಸಬಹುದು ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಶಾಸಕರಾದ ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ|ಸಂತೋಷ್‌ ಕುಮಾರ್‌, ಜಿ.ಪಂ. ಸಿಇಒ ಡಾ| ಆನಂದ್‌, ಡಿಸಿಎಫ್ ಆ್ಯಂಟನಿ ಮರಿಯಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here