ಇಲಾಖಾ ಆ್ಯಪ್,ವೆಬ್ ಅಪ್ಲಿಕೇಷನ್ ಸಹಿತ ಹಲವು ಸಮಸ್ಯೆಗಳಿಗೆ ಪರಿಹಾರ ನೀಡದಿದ್ದಲ್ಲಿ ಸೆ.26ರಿಂದ ಅನಿರ್ಧಿಷ್ಟಾವಧಿ ಮುಷ್ಕರ

0

ಪುತ್ತೂರು ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಎಚ್ಚರಿಕೆ – ಮನವಿ

ಪುತ್ತೂರು: ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಆ್ಯಪ್, ವೆಬ್ ಅಪ್ಲಿಕೇಷನ್‌ಗಳು ಸಹಿತ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಪುತ್ತೂರು ತಾಲೂಕು ಘಟಕದಿಂದ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮತ್ತು ತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿದಲ್ಲದೆ ಬೇಡಿಕೆಗಳು ಈಡೇರದಿದ್ದಲ್ಲಿ ಸೆ.26ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್‌ಗಳಿಂದ ಸಮಸ್ಯೆ:
ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್ ಟಾಪ್ ಮತ್ತು ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್ ಹಾಗು ಸ್ಕ್ಯಾನರ್‌ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತಾಧಿಕಾರಿಗಳ ಸಾವು ನೋವುಗಳು ಆಗುತ್ತಿದ್ದು, ನಿರಂತರವಾಗಿ ಮಾರಣಾಂತಿಕ ಹಲ್ಲೆ ನಡೆಯುತ್ತಿರುತ್ತದೆ. ಎಲ್ಲಾ ಮೊಬೈಲ್ ಆ್ಯಪ್ ಗಳು ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ ಹಾಗು ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗುತ್ತಿರುತ್ತವೆ. ಈ ನಿಟ್ಟಿನಲ್ಲಿ ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್ ಟಾಪ್/ಗೂಗಲ್ ಕ್ರೋಮ್ ಬುಕ್, ಪ್ರಿಂಟರ್, ಇಂಟರ್ ನೆಟ್ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಲಾಗಿದೆ. ಇದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ರಾಜ್ಯದಲ್ಲಿನ 1196 ಗ್ರೇಡ್ -1 ಗ್ರಾಮ ಪಂಚಾಯತ್ ಹಾಗು 304 ಕಸಬಾ ಹೋಬಳಿ ವೃತ್ತಗಳನು ಗ್ರೇಡ್ -1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ಚದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು /ಪ್ರಥಮ ದರ್ಜೆ ಸಹಾಯಕರು/ ಗ್ರೇಡ್ -1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿಯ್ನು ನೀಡಬೇಕು. ಗ್ರಾಮ ಸಹಾಯಕರಿಗೆ ಸೇವಾಭದ್ರತೆಯನ್ನು ಒದಗಿಸುವುದು ಸಹಿತ ಸುಮಾರು 9 ಇತರ ಬೇಡಿಕೆಗಳನ್ನು ಮನವಿಯಲ್ಲಿ ತಿಳಿಸಲಾಗಿದೆ. ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಉಮೇಶ್ ಕಾವಡಿ, ಗೌರವಾಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷ ಸುಜಾತ, ಕಾರ್ಯದರ್ಶಿ ಜಯಚಂದ್ರ, ಖಜಾಂಚಿ ಅಶ್ವಿನಿ, ಸಂಘಟನಾ ಕಾರ್ಯದರ್ಶಿ ಶರಣ್ಯ, ರಾಜ್ಯ ಪ್ರತಿನಿಧಿನರಿಯಪ್ಪ ಸಹಿತ ಸದಸ್ಯರು ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.


ಸೆ.26ರಿಂದ ಮುಷ್ಕರ ಎಚ್ಚರಿಕೆ
ಸಮಸ್ಯೆಗಳು ಪರಿಹಾರವಾಗದಿದ್ದಲ್ಲಿ ಮತ್ತು ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಬೇಡಿಕೆ ಈಡೇರುವ ತನಕ ಸೆ.26ರಿಂದ ಎಲ್ಲಾ ಬಗೆಯ ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ರಾಜ್ಯ ವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಉಮೇಶ್ ಕಾವಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here