3.44 ಲಕ್ಷ ರೂ.ನಿವ್ವಳ ಲಾಭ; ಶೇ.20 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 71 ಪೈಸೆ ಬೋನಸ್ ಘೋಷಣೆ
ಕಡಬ: ಏಣಿತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.19ರಂದು ಸಂಘದ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುಶೀಲ ಬಿ.ಕೆ., ಅವರು ಮಾತನಾಡಿ, ಸಂಘವು 2023-24ನೇ ಸಾಲಿನಲ್ಲಿ 1,13,37,527.93 ರೂ.ವ್ಯವಹಾರ ನಡೆಸಿ 3,44,712.55 ರೂ.ನಿವ್ವಳ ಲಾಭಗಳಿಸಿದೆ. ಲಾಭದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ 71 ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ಸಂಘದಲ್ಲಿ 194 ಸದಸ್ಯರಿದ್ದು 32450 ರೂ.ಪಾಲು ಬಂಡವಾಳವಿದೆ. ವರದಿ ಸಾಲಿನಲ್ಲಿ ಹೈನುಗಾರರಿಂದ 2,31,037.9 ಲೀ.ಹಾಲು ಖರೀದಿಸಲಾಗಿದ್ದು ಇದರಲ್ಲಿ 1083.5 ಲೀ.ಹಾಲು ಸ್ಥಳೀಯವಾಗಿ ಹಾಗೂ ಉಳಿಕೆ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಹಾಲು ವ್ಯಾಪಾರದಿಂದ 7,04,142.77 ರೂ.ಆದಾಯ ಗಳಿಸಿದೆ. 2030 ಚೀಲ ಪಶು ಆಹಾರ, 690 ಕೆ.ಜಿ.ಲವಣ ಮಿಶ್ರಣ ಮಾರಾಟ ಆಗಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು. ದ.ಕ.ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯ ಪಿ.ಅವರು ಒಕ್ಕೂಟದಿಂದ ಸಿಗುವ ಅನುದಾನದ ಬಗ್ಗೆ, ಪಶುಗಳ ಪಾಲನೆಯ ವೈಜ್ಞಾನಿಕ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಬಹುಮಾನ ವಿತರಣೆ:
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ವಾರಿಜ ಆರ್(ಪ್ರಥಮ), ಸುಂದರಿ ಎ.,(ದ್ವಿತೀಯ) ಮತ್ತು ಶುಭ(ತೃತೀಯ)ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿನಿಗೆ ಸನ್ಮಾನ:
ಸಂಘದ ಸದಸ್ಯೆ ಶಶಿಕಲಾರವರ ಪುತ್ರಿ ಅನನ್ಯ ಅವರು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದು ಅವರನ್ನು ಮಹಾಸಭೆಯಲ್ಲಿ ಶಾಲು ಹೊದಿಸಿ,ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ವಿಮಲ ಎ.,ನಿರ್ದೇಶಕರಾದ ವಾರಿಜ ಆರ್., ಲಲಿತ ಪಿ., ಜಯಂತಿ ಎಸ್., ಶರ್ಮಿಳಾ, ಯಕ್ಷತಾ, ನೀತಾ ಯನ್., ತೀರ್ಥಾವತಿ, ಪಾರ್ವತಿ ಪಿ., ಕುಸುಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಪಾ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ಸ್ವಾಗತಿಸಿ ಯಕ್ಷತಾ ವಂದಿಸಿದರು. ಜಯಂತಿ ಯನ್.ಪ್ರಾರ್ಥಿಸಿದರು.