ಈಗ ಬೆಲೆ ಇದೆ..ಆದರೆ ಬೆಳೆ ಇಲ್ಲ…
ಮಂಗಗಳ ಉಪಟಳ, ಸೀಯಾಳ ಮಾರಾಟದಿಂದ ತೆಂಗಿನಕಾಯಿ ಪೂರೈಕೆ ಇಳಿಕೆ
ಸವಣೂರು : ಕಳೆದ ತಿಂಗಳಷ್ಟೇ 25 ರೂ.ಗೆ ಕುಸಿತ ಕಂಡಿದ್ದ ತೆಂಗಿನಕಾಯಿ ದರ ಇದೀಗ 50 ರೂ. ತಲುಪಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ತೆಂಗಿನಕಾಯಿಗಿಂತ ಎಳನೀರಿಗೆ ಬೇಡಿಕೆ ಇದ್ದ ಕಾರಣ ಬೆಳಗಾರರಲ್ಲಿ ಬಹುತೇಕ ಮಂದಿ ಖರ್ಚು ಕಡಿಮೆ, ಹೆಚ್ಚಿನ ದರ ಸಿಗುತ್ತಿದೆ ಎಂಬ ಕಾರಣಕ್ಕಾಗಿ ಎಳನೀರನ್ನೇ ಮಾರಾಟ ಮಾಡುತ್ತಿದ್ದರು. ಹೀಗಾಗಿ ತೆಂಗಿನಕಾಯಿ ಇಳುವರಿ ಕುಂಠಿತಗೊಂಡಿತ್ತು. ಆದರೀಗ ತೆಂಗಿನಕಾಯಿಗೆ ಬೇಡಿಕೆ ಶುರುವಾಗಿ ದರ ಏರಿಕೆ ಕಂಡಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಇದಲ್ಲದೇ ಕೊಬ್ಬರಿ ಎಣ್ಣೆ ಹಾಗೂ ತೆಂಗಿನಕಾಯಿ ಪುಡಿ ದರ ಸಹ ಏರಿಕೆ ಆಗಿರುವುದು ತೆಂಗಿನಕಾಯಿ ದರವನ್ನೂ ಹೆಚ್ಚಿಸುವಂತೆ ಮಾಡಿದೆ.
ತೆಂಗಿನ ಬೆಳೆಗೆ ಆಗಾಗ ನುಸಿರೋಗ ಬಾಧಿಸುತ್ತಲೇ ಇರುತ್ತದೆ. ಅಲ್ಲದೇ ಕಟಾವಿಗೆ ಬಂದ ಸಂದರ್ಭದಲ್ಲಿ ಸಾಕಷ್ಟು ಖರ್ಚು ತಗಲುತ್ತದೆ. ಈ ನಡುವೆ ತಿಂಗಳೊಳಗೆ ತೆಂಗಿನಕಾಯಿ ಬೆಲೆ ದಾಖಲೆ ಬರೆದಿದೆ. ತೆರೆದ ಮಾರುಕಟ್ಟೆಯಲ್ಲಿ ಕೆ.ಜಿ.ತೆಂಗಿನಕಾಯಿ ಸದ್ಯ 50 ರೂ. ಇದ್ದು, ಇನ್ನೂ ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತೆಂಗಿನಕಾಯಿಯನ್ನು ಎಣ್ಣೆಯಲ್ಲದೇ ಪೌಡರ್ ಉದ್ದೇಶಕ್ಕೂ ಹೆಚ್ಚು ಬಳಸಲಾಗುತ್ತದೆ.
ತೆಂಗಿನಕಾಯಿ ರಾಜ್ಯದ ತುಮಕೂರು, ತಿಪಟೂರಿಗಲ್ಲದೇ ಹೊರರಾಜ್ಯಗಳಿಗೂ ಸಾಗಣೆಯಾಗುತ್ತದೆ. ಈಗಾಗಲೇ ಸಾಕಷ್ಟು ವ್ಯಾಪಾರಿಗಳು ಬೆಳೆಗಾರರಿಗೆ ಮುಂಗಡ ಹಣ ನೀಡಿ ಕೆ.ಜಿ.ಗೆ 50 ರೂ. ದರದಲ್ಲಿ ಖರೀದಿಸಲು ಮುಂದಾಗಿದ್ದಾರೆ ಎಂಬುದು ವಿಶೇಷ.
ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ತೆಂಗಿನ ಕಾಯಿಗೆ ಬೇಡಿಕೆ ವ್ಯಕ್ತವಾಗಿದೆ. ಅದರ ಜೊತೆಗೆ ಕೊಬ್ಬರಿ, ಕೊಬ್ಬರಿ ಎಣ್ಣೆಗೂ ಬೇಡಿಕೆ ಬಂದಿದೆ. ಹೀಗಾಗಿ ಕೊಬ್ಬರಿ, ತೆಂಗಿನ ಕಾಯಿ ಬೆಲೆಯಲ್ಲೂ ದಿಢೀರ್ ಏರಿಕೆ ಕಂಡುಬಂದಿದ್ದು, ರೈತರು ಮತ್ತು ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಧಾರಣೆ ಏರಿಕೆ ತಾತ್ಕಾಲಿಕವಾಗಿದ್ದು ಬೇಡಿಕೆಯ ಕಾರಣದಿಂದ ಪೂರೈಕೆ ಇಲ್ಲದೆಯೇ ಧಾರಣೆ ಏರಿಕೆ ಕಂಡುಬಂದಿದೆ. ಹವಾಮಾನ ವೈಪರೀತ್ಯ ಇದೇ ಮಾದರಿ ಮುಂದುವರಿದರೆ ಧಾರಣೆ ಏರಿಕೆಯೂ ಮುಂದುವರಿಯುವ ಸಾಧ್ಯತೆ ಇದೆ. ತೆಂಗಿನ ಮಾರುಕಟ್ಟೆ ವಲಯದ ಎಲ್ಲಿ ಕೇಳಿದರೂ ನಿರೀಕ್ಷಿತ ಪ್ರಮಾಣದಲ್ಲಿ ತೆಂಗಿನಕಾಯಿ ಲಭ್ಯವಿಲ್ಲ.
ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ, ತೆಂಗು ಬೆಳೆಯುವ ಪ್ರದೇಶಗಳಲ್ಲಿ ಈ ಬಾರಿ ಎಳನೀರನ್ನು ಹೆಚ್ಚಾಗಿ ತೆಗೆಯಲಾಗಿದೆ. ಬೇಸಗೆಯಲ್ಲಿ ವಿಪರೀತ ತಾಪಮಾನದ ಕಾರಣದಿಂದ ಎಳನೀರಿಗೆ ಬೇಡಿಕೆ ಇತ್ತು. ಹೀಗಾಗಿ ಎಳನೀರನ್ನೇ ರೈತರು ತೆಗೆದು ಮಾರಾಟ ಮಾಡಿದ್ದರು. ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಪೂರೈಕೆ ಮಾಡಲು ತೆಂಗಿನಕಾಯಿಯೇ ಇಲ್ಲವಾಗಿದೆ. ಕರ್ನಾಟಕದಲ್ಲಿ ಬರಗಾಲದಂತಹ ಪರಿಸ್ಥಿತಿಗಳು ತೆಂಗಿನ ಉತ್ಪಾದನೆಯನ್ನು ಕಡಿಮೆ ಮಾಡಿದೆ ಕೂಡಾ. ಇನ್ನು ಕರಾವಳಿ ಭಾಗದಲ್ಲಿ ಮಂಗಗಳ ಕಾಟದಿಂದ ಶೇ.50 ರಷ್ಟು ಪ್ರತೀ ಬಾರಿಯೂ ಇಳುವರಿ ಕಡಿಮೆಯಾಗಿದೆ.