ಕಾವು: ತುಡರ್ ಭಜನಾ ಸಂಘದ 9ನೇ ವಾರ್ಷಿಕೋತ್ಸವ :ಭಜನಾ ಸಂಕೀರ್ತನೆ-ಧಾರ್ಮಿಕ ಸಭೆ-ಸನ್ಮಾನ

0

ಕಾವು: ಭಜನೆಯಲ್ಲಿ ಭಾಗವಹಿಸುವುದು, ಭಜನೆ ಹಾಡುವುದು, ಭಜನೆಯನ್ನು ಕೇಳುವುದರಿಂದ ನಮ್ಮ ಮಾನಸಿಕ ಆಲೋಚನೆಗಳು ದೂರವಾಗಿ ಏಕಾಗ್ರತೆಯತ್ತ ಸಾಗಿ ನಮ್ಮ ಆರೋಗ್ಯ, ಆಯುಷ್ಯ ವೃದ್ಧಿಗೂ ಪರಿಣಾಮವಾಗುತ್ತದೆ, ಭಜನೆಯ ಮೂಲಕ ಹಿಂದೂ ಧರ್ಮದ ಅರಿವಿನ ಜತೆಗೆ ನಮ್ಮಲ್ಲಿ ರಾಷ್ಟ್ರೀಯತೆಯು ಉದ್ದೀಪನ ಆಗುತ್ತದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರವರು ಹೇಳಿದರು.


ಅವರು ಅ.27ರಂದು ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ನಡೆದ ಕಾವು ನನ್ಯ ತುಡರ್ ಭಜನಾ ಸಂಘದ 9ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು.


ಮಕ್ಕಳಲ್ಲಿ ಭಜನೆ ಆಸಕ್ತಿ ತುಂಬಬೇಕು:
ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯನ್ನು ತಪ್ಪಿಸಲು ತಾಯಂದಿರು ಹೆಚ್ಚು ಕಾಳಜಿ ವಹಿಸಿ ಮಕ್ಕಳನ್ನು ಭಜನೆಯತ್ತ ಆಕರ್ಷಿಸಿ ನಿತ್ಯ ಮನೆಯಲ್ಲಿ ಭಜನೆ ಹಾಡಲು ಅಭ್ಯಸಿಸಬೇಕು, ಆ ಮೂಲಕ ತಮ್ಮ ಮಕ್ಕಳನ್ನು ಭಜನಾ ಸಂಘಗಳಿಗೆ ಸೇರಿಸಿ ಧರ್ಮಪ್ರಜ್ಞೆಯನ್ನು ಮೂಡಿಸಬೇಕು. ಸಾಮಾಜಿಕ ಸೇವೆಯ ಜತೆಗೆ ಧಾರ್ಮಿಕತೆಯ ಭಜನಾ ಕಾರ್ಯವನ್ನು ಮಾಡುತ್ತಿರುವ ತುಡರ್ ಯುವಕ ಮಂಡಲದ ಕಾರ್ಯ ಸಾಧನೀಯವಾಗಿದೆ ಎಂದು ಕೊಳ್ತಿಗೆ ನಾರಾಯಣ ಗೌಡರವರು ಹೇಳಿದರು.

ಭಜನೆಯಿಂದ ಧರ್ಮಜಾಗೃತಿ ಸಾಧ್ಯ-ನನ್ಯ
ಶುಭಾಶಂಸನೆಗೈದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ತುಡರ್ ಯುವಕ ಮಂಡಲಕ್ಕೆ ಭಜನಾ ತಂಡವನ್ನು ಕಟ್ಟುವಂತೆ ನಾನು ಸಲಹೆ ನೀಡಿದಾಗ ಆ ಮಾತನ್ನು ಶಿರಸ ಪಾಲಿಸಿ ೨೦೧೫ರಲ್ಲಿ ತುಡರ್ ಭಜನಾ ಸಂಘವನ್ನು ಆರಂಭ ಮಾಡಿದರು, ಇದೀಗ ಭಜನಾ ಸಂಘವು 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಭಜನೆಯಿಂದಾಗಿ ಧರ್ಮ ಜಾಗೃತಿ, ಒಗ್ಗಟ್ಟು, ಸಾಮರಸ್ಯ ಸಾಧ್ಯವಾಗಿದೆ, ತುಡರ್ ಭಜನಾ ಸಂಘವು ಮುಂದಿನ ವರ್ಷ ದಶಮಾನೋತ್ಸವವನ್ನು ಕಾಣಲಿದ್ದು, ಕಾವುನಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಪ್ರೇರಣೆ ನೀಡುವ ಕೆಲಸ ಆಗಲಿ ಎಂದು ಶುಭಹಾರೈಸಿದರು.


10ನೇ ವರ್ಷದಲ್ಲಿ ಭಜನಾ ಸಪ್ತಾಹ ಆಗಲಿ-ನಹುಷ ಭಟ್:
ಮುಖ್ಯ ಅತಿಥಿಯಾಗಿದ್ದ ಕಾವು ಗೋಪೂಜಾ ಸಮಿತಿಯ ಅಧ್ಯಕ್ಷ ನಹುಷ ಭಟ್‌ರವರು ಮಾತನಾಡಿ ಭಜನೆಯ ಮೂಲಕ ನಾವೆಲ್ಲರೂ ಒಂದು ಎಂಬ ಭಾವನೆ ಬೆಳೆಯುತ್ತದೆ, ತುಡರ್ ಭಜನಾ ಸಂಘ ಸೇರಿದಂತೆ ನಮ್ಮ ಗ್ರಾಮದಲ್ಲಿ ಅನೇಕ ಭಜನಾ ತಂಡಗಳಿವೆ ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಯಲ್ಲೂ ಭಜನಾ ತಂಡ ನಿರ್ಮಾಣ ಆಗಬೇಕು, ತುಡರ್ ಭಜನಾ ಸಂಘದ 10ನೇ ವಾರ್ಷಿಕೋತ್ಸವದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯಬೇಕು ಎಂದು ಹೇಳಿದರು.


ಭಜನಾ ಸಂಘದಿಂದಾಗಿ ಎಲ್ಲರ ಮನೆ-ಮನ ತಲುಪುತ್ತಿದ್ದೇವೆ-ಪರುಷೋತ್ತಮ ಆಚಾರ್ಯ:
ಸಭಾಧ್ಯಕ್ಷತೆ ವಹಿಸಿದ್ದ ಪುರುಷೋತ್ತಮ ಆಚಾರ್ಯ ನನ್ಯರವರು ಮಾತನಾಡಿ ನಮ್ಮ ಭಜನಾ ಸಂಘದ ಬೆಳವಣಿಗೆಗೆ ಪ್ರತಿ ತಿಂಗಳು ಭಜನಾ ಸೇವೆ ನಡೆಸಲು ಅವಕಾಶ ಮಾಡಿಕೊಡುವ ಮನೆಯವರು ಪ್ರಮುಖ ಕಾರಣವಾಗಿದ್ದಾರೆ, ನಮ್ಮನ್ನು ಭಜನೆಗೆ ಆಹ್ವಾನಿಸಿದ ಮನೆಯವರು ಭಜನಾಪಟುಗಳಿಗೆ ಸತ್ಕರಿಸುವ, ಗೌರವಿಸುವ ರೀತಿಯನ್ನು ನೋಡಿದಾಗ ನಮ್ಮ ಭಜನಾ ಸಂಘದ ಬೆಳವಣಿಗೆಗೆ ಮತ್ತಷ್ಟು ಸ್ಫೂರ್ತಿಯನ್ನು ನೀಡುತ್ತದೆ, ಭಜನಾ ಸಂಘದ ಮೂಲಕ ಎಲ್ಲರ ಮನೆ-ಮನವನ್ನು ನಮ್ಮ ಯುವಕ ಮಂಡಲ ತಲುಪುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ಉಪಸ್ಥಿತರಿದ್ದರು.


ಗೌರವಾರ್ಪಣೆ:
ಭಜನಾ ಕಾರ್ಯಕ್ರಮದಲ್ಲಿ ಭಜನಾ ಸೇವೆ ನಡೆಸಿಕೊಟ್ಟ ಕೌಡಿಚ್ಚಾರ್ ಶ್ರೀ ಭಜನಾ ಮಂದಿರದ ಭಜನಾ ತಂಡದ ಪರವಾಗಿ ಹಿರಿಯರಾದ ಸದಾಶಿವ ಮಣಿಯಾಣಿ ಕುತ್ಯಾಡಿಯವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭಜನಾ ಕಾರ್ಯಕ್ರಮ:
ಸಂಜೆ ಗಂಟೆ 5.30ಕ್ಕೆ ದೀಪ ಪ್ರಜ್ವಲನೆಯ ಮೂಲಕ ಭಜನಾ ಕಾರ್ಯಕ್ರಮ ಆರಂಭಗೊಂಡಿತು. ತುಡರ್ ಭಜನಾ ಸಂಘ ನನ್ಯ, ತುಡರ್ ಮಾತೃಭಜನಾ ಮಂಡಳಿಯವರಿಂದ ಭಜನಾ ಸೇವೆ ಬಳಿಕ ತುಡರ್ ಸುಜ್ಞಾನ ಮಕ್ಕಳ ಭಜನಾ ಸಂಘದಿಂದ ಕುಣಿತ ಭಜನೆ ನಡೆಯಿತು. ಬಳಿಕ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಸದಸ್ಯರಿಂದ ಭಜನಾ ಸೇವೆ ನಡೆಯಿತು.

ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ ವಂದಿಸಿದರು. ಯುವಕ ಮಂಡಲದ ಪದಾಧಿಕಾರಿಗಳಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಲಿಂಗಪ್ಪ ನಾಯ್ಕ ನನ್ಯ, ಜಗದೀಶ ನಾಯ್ಕ ಆಚಾರಿಮೂಲೆ, ಶೇಷಪ್ಪ ಗೌಡ ಪರನೀರು, ಶ್ರೀಕುಮಾರ್ ಬಲ್ಯಾಯ, ನಿರಂಜನ ರಾವ್ ಕಮಲಡ್ಕ, ಯತೀಶ್ ರೈ ಮದ್ಲರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಯುವಕ ಮಂಡಲದ ಸದಸ್ಯರಾದ ಬಾಲಕೃಷ್ಣ ಪಾಟಾಳಿ ನನ್ಯ, ರಮೇಶ್ ಗೌಡ ಆಚಾರಿಮೂಲೆ, ತಿರುಮಲೇಶ ಮಿನೋಜಿಕಲ್ಲು, ಭವಿತ್ ರೈ ಮದ್ಲ, ರಾಜೇಶ್ ಬಿ, ರಿತೇಶ್ ಪಾಟಾಳಿ, ನಿಕೇಶ್ ಕುಲಾಲ್, ಹರ್ಷಿತ್ ಎ.ಆರ್, ರಾಘವ ಪಿ.ಎಸ್‌ರವರು ಸಹಕರಿಸಿದರು. ಧಾರ್ಮಿಕ ಸಭೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸನ್ಮಾನ:
ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಕಳೆದ 30 ವರ್ಷಗಳಿಂದ ಸಂಭಾವನೆಯನ್ನು ನಿರೀಕ್ಷಿಸದೇ ಪ್ರಧಾನ ಅರ್ಚಕರಾಗಿ ಪೂಜಾಸೇವೆಯನ್ನು ಮಾಡುತ್ತಿರುವ ಕರುಣಾಕರ ಗೌಡ ಆಚಾರಿಮೂಲೆಯವರಿಗೆ ತುಡರ್ ಭಜನಾ ವಾರ್ಷಿಕೋತ್ಸವದ ವೇದಿಕೆಯಲ್ಲಿ ಗೌರವದ ಸನ್ಮಾನ ನೀಡಲಾಯಿತು. ಕರುಣಾಕರ ಗೌಡರವರಿಗೆ ಅತಿಥಿಗಳು ಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ, ಫಲಪುಷ್ಪ ಕಾಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಿದರು. ಎಂ.ಕಾಂ ವಿದ್ಯಾರ್ಥಿನಿ ಪೂಜಾಲಕ್ಷ್ಮೀ ಚಾಕೋಟೆಯವರು ಸನ್ಮಾನಪತ್ರ ವಾಚಿಸಿದರು.

LEAVE A REPLY

Please enter your comment!
Please enter your name here