ದಾರಿ ವಿವಾದ: ಪ್ರಗತಿಪರ ಕೃಷಿಕನ ಅಟ್ಟಾಡಿಸಿ ಕೊಲೆ-ಸಂಬಂಧಿ ಸಹಿತ ಮೂವರ ಕೃತ್ಯ: ಆರೋಪಿಗಳು ಪರಾರಿ

0

ನೆಲ್ಯಾಡಿ: ದಾರಿ ವಿವಾದಕ್ಕೆ ಸಂಬಂಧಿಸಿ ಪ್ರಗತಿಪರ ಕೃಷಿಕರೋರ್ವರನ್ನು ಅವರ ಸಂಬಂಧಿಕನೇ ರಾತ್ರಿ ಹೊತ್ತು ಕಾದು ಕುಳಿತು ಅಟ್ಟಾಡಿಸಿ ಕತ್ತಿಯಿಂದ ಕೊಲೆ ನಡೆಸಿದ ಬೀಭತ್ಸ್ಯ ಘಟನೆ ನ.8ರಂದು ನಡೆದಿದೆ.


ಕಡಬ ತಾಲೂಕಿನ ಆಲಂತಾಯ ಗ್ರಾಮದ ಪೆರ್ಲ ನಿವಾಸಿ ವೆಂಕಪ್ಪ ಗೌಡ ಮತ್ತು ದೇಜಮ್ಮ ದಂಪತಿಯ ಪುತ್ರ ರಮೇಶ ಗೌಡ (49) ಕೊಲೆಯಾದ ವ್ಯಕ್ತಿ. ಇವರ ಸಂಬಂಧಿಕನೇ ಆಗಿರುವ ಪೆರ್ಲದ ಕಲ್ಲಂಡದ ಹರೀಶ (38) ಮತ್ತಿತರ ಇಬ್ಬರು ಸೇರಿ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.


ಘಟನೆಯ ವಿವರ:
ರಮೇಶ ಗೌಡರ ಮನೆಯ ಬಳಿ ಹರೀಶನಿಗೆ ಸೇರಿದ ತೋಟವೊಂದಿದ್ದು, ಆ ತೋಟಕ್ಕೆ ರಮೇಶ ಗೌಡರ ಮನೆಯ ಬಳಿಯಿಂದ ದಾರಿಯಿದ್ದು, ಆ ದಾರಿಯ ವಿಷಯಕ್ಕೆ ಸಂಬಂಧಿಸಿ ಇವರಿಬ್ಬರೊಳಗೆ ಪದೇ ಪದೇ ಜಗಳ ನಡೆಯುತ್ತಿತ್ತು. ನ.8ರ ಬೆಳಗ್ಗೆ ಕೂಡಾ ಜಗಳ ನಡೆದಿದೆ. ನ.8ರ ರಾತ್ರಿ ಏಳರ ಸುಮಾರಿಗೆ ರಮೇಶ ಗೌಡರು ಪೆರ್ಲ ದೇವಸ್ಥಾನದಲ್ಲಿ ನಡೆಯುವ ವಾರದ ಭಜನೆಗೆ ತನ್ನ ಬೈಕ್‌ನಲ್ಲಿ ತೆರಳಿದ್ದು, ತನ್ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ದೇವಸ್ಥಾನಕ್ಕೆ ತಿರುಗುವ ಜಾಗದಲ್ಲಿ ಆರೋಪಿ ಹರೀಶ ಮತ್ತಿಬ್ಬರು ಕಾದು ಕುಳಿತಿದ್ದು, ಇವರ ಬೈಕ್‌ಗೆ ಅಡ್ಡ ಹೋಗಿ ರಮೇಶ್ ಅವರಿಗೆ ಕತ್ತಿಯಿಂದ ಕಡಿದಿದ್ದಾರೆ.

ಈ ಸಂದರ್ಭ ಬೈಕ್ ಪಲ್ಟಿಯಾಗಿದ್ದು, ಜೀವರಕ್ಷಣೆಗೆಂದು ಮತ್ತೊಂದು ದಾರಿಯಲ್ಲಿ ರಮೇಶ್ ಅವರು ಓಡಿ ಹೋಗಿದ್ದಾರೆ. ಆಗ ಬೆನ್ನಟ್ಟಿದ ಆರೋಪಿಯು ಕುಸುಮಾ ಎಂಬವರ ಮನೆ ಸಮೀಪ ರಮೇಶರನ್ನು ಭೀಭತ್ಸ್ಯವಾಗಿ ಕತ್ತಿಯಿಂದ ಕಡಿದು ಕೊಲೆ ನಡೆಸಿ, ಪರಾರಿಯಾಗಿದ್ದಾರೆ. ರಮೇಶ್‌ ಅವರ ಬೊಬ್ಬೆ ಕೇಳಿ ಅವರ ಪತ್ನಿ ಸ್ಥಳಕ್ಕೆ ಓಡಿ ಬಂದರಾದರೂ ಆ ವೇಳೆಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಎಸ್ಪಿ ಆಗಮನ:ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧಿಕ್ಷಕ ಯತೀಶ್‌ ಎನ್‌, ಪುತ್ತೂರು ಡಿವೈ ಎಸ್ಪಿ ಅರುಣ್‌ ನಾಗೇಗೌಡ, ವೃತ್ತ ನಿರೀಕ್ಷಕ ರವಿ ಬಿ.ಎಸ್‌, ಉಪ್ಪಿನಂಗಡಿ ಪೊಲೀಸ್‌ ಉಪನಿರೀಕ್ಷಕ ಅವಿನಾಶ್‌ ಗೌಡ, ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿದ್ದು, ಮಹಜರು ಪ್ರಕ್ರಿಯೇ ನಡೆಸಿದರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೊಲೆಯಾದ ರಮೇಶ್ ಗೌಡ ಅವರು, ಸಜ್ಜನ ವ್ಯಕ್ತಿಯಾಗಿದ್ದು, ಉತ್ತಮ ಭಜನಾ ಸಂಘಟಕರಾಗಿದ್ದರು. ಗೋಳಿತೊಟ್ಟು ವಲಯ ಭಜನಾ ಪರಷತ್ ಅಧ್ಯಕ್ಷರಾಗಿ, ಆಲಂತಾಯ ಪೆರ್ಲ ಶ್ರೀ ಷಣ್ಮುಖ ಭಜನಾ ಮಂಡಳಿ ಅಧ್ಯಕ್ಷರಾಗಿ, ಒಕ್ಕಲಿಗ ಗೌಡ ಸೇವಾ ಸಂಘದ ಆಲಂತಾಯ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ, ಪೆರ್ಲ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. ಮೃತರು ತಂದೆ ವೆಂಕಪ್ಪ ಗೌಡ, ತಾಯಿ ದೇಜಮ್ಮ, ಪತ್ನಿ ಗೀತಾ, ಓರ್ವ ಪುತ್ರಿ ಹಾಗೂ ಓರ್ವ ಪುತ್ರ, ಸಹೋದರಿಯೋರ್ವರನ್ನು ಅಗಲಿದ್ದಾರೆ.



LEAVE A REPLY

Please enter your comment!
Please enter your name here