





ಪುತ್ತೂರು: ಬರ್ಕೆ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 107/2023 ರಲ್ಲಿ ಪ್ರಕರಣ ದ ಆರೋಪಿ ಅಜಿತ್ ಕುಮಾರ್ c/o ಚಂದ್ರನ್ ಮಂಡಳಿ ಪಾರ ಹೌಸ್, ತೆಕ್ಕಿಲ್ ಪರಂಬ ಕಾಸರಗೋಡು ಕೇರಳ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಪ್ರಕರಣದ ಫಿರ್ಯದಿದಾರರು ಆನ್ಲೈನ್ ನಲ್ಲಿ ಕೆಲಸದ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಒಂದು ಮೇಲ್ ಐಡಿಯ ಮೂಲಕ ಬಂದ ಲಿಂಕ್ ನ್ನು ಓಪನ್ ಮಾಡಿದಾಗ ಬೇರೆ ಬೇರೆ ಫೋನ್ ನಂಬರ್ ನಲ್ಲಿ ಕಾಲ್ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಲು ಹೇಳಿ ದೂರುದಾರರಿಗೆ ಲಾಭಾಂಶವನ್ನು ಸೇರಿಸಿ ನೀಡಿ ತದ ನಂತರ ಹೆಚ್ಚು ಹೆಚ್ಚು ಹಣ ಬೇಡಿಕೆ ಇಟ್ಟು ಆರೋಪಿಯ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ನಕಲಿ ದಾಖಲೆಗಳನ್ನೂ ದೂರುದಾರರಿಗೆ ಕಳುಹಿಸಿ ಮಿಂತ್ರ ಎಂಬ ಕಂಪೆನಿಯಲ್ಲಿ ಫೆಸಿಲಿಟೆಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ 7,32,385 ರೂಪಾಯಿಗಳನ್ನ ಪಡೆದು ದೂರುದಾರರಿಗೆ ನಂಬಿಕೆ ದ್ರೋಹ ಎಸಗಿ ವಂಚನೆ ಮಾಡಿದ್ದ. ಆರೋಪಿತನ ಹೆಸರಿನಲ್ಲಿರುವ ಬೇರೆ ಬೇರೆ ಬ್ಯಾಂಕ್ ಗಳ ಖಾತೆಯಲ್ಲಿ ಒಟ್ಟು 34ಕ್ಕೂ ಮಿಕ್ಕಿ ಪ್ರಕರಣಗಳು ದೇಶದ ವಿವಿಧೆಡೆ ದಾಖಲಾಗಿದ್ದು, ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಪೊಲೀಸರ ತನಿಖಾ ಸಮಯ ಆರೋಪಿಯು ಹೊಂದಿರುವ ಖಾತೆಯಲ್ಲಿ 2 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣದ ವ್ಯವಹಾರದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಅರೋಪಿ ಪರ ವಕೀಲರು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದಾಗ ಸರಕಾರಿ ಅಭಿಯೋಜಕರು ಬಲವಾದ ಆಕ್ಷೇಪಣೆ ಸಲ್ಲಿಸಿ ಆರೋಪಿಯ ಕುರಿತು ಇರುವ ನಂಬಿಕೆ ದ್ರೋಹ ಮತ್ತು ವಂಚನೆಯ ಬಗ್ಗೆ ಸವಿವರವಾಗಿ ವಾದ ಮಂಡನೆ ಮಾಡಿದರು. ವಾದವನ್ನು ಪುರಸ್ಕರಿಸಿದ ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ ಅವರು ಆರೋಪಿಯ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರಿನ ಜನಾರ್ದನ್ ಬಿ. ಅವರು ವಾದಿಸಿದ್ದಾರೆ.










