ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಗ್ರಾಮ ಪಂಚಾಯತ್ ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್ ಬೆಂಗರ (34) ಕೊಲೆಗೈದ ಪ್ರಕರಣದಲ್ಲಿ ಹಂತಕನ ಸುಳಿವು ಇನ್ನೂ ದೊರೆಯದಿದ್ದು, ಮೃತನ ಒಡನಾಡಿಗಳ ಗುರುತು ಪತ್ತೆಗೆ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಕಾರ ಬಯಸಿದೆ.
ಕೆಲ ಸಮಯದ ಹಿಂದೆ ಸ್ಥಳೀಯ ಬಾರ್ ಆಂಡ್ ರೆಸ್ಟೋರೆಂಟಿನಲ್ಲಿ, ಇಲ್ಲಿನ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದರೆನ್ನಲಾದ ಹಾಗೂ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕನಾಗಿ ತೊಡಗಿಕೊಂಡಿದ್ದ ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕ್ರಿಶ್ಚಿಯನ್ ಗ್ರಾಮದ ತಿಮ್ಮತಿ ಬೆಂಗರ ಎಂಬವರ ಮಗ ದೀಪಕ್ ಬೆಂಗರ (34) ಡಿ.4ರಂದು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮೃತ ದೀಪಕ್ ನಿರ್ಗತಿಕನಂತೆ ಬೀದಿ ಬದಿ, ಜನ ವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಮಸ್ಯೆಯಾಗಿದೆ. ಪೊಲೀಸರು ಬೀದಿ ಬದಿ ಮಲಗುತ್ತಿರುವ ಮಂದಿಯನ್ನು ಕರೆಯಿಸಿ ಮೃತನ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರಾದರೂ ಈ ವರೆಗೆ ಯಾವುದೇ ಪ್ರಯೋಜವಾಗಿಲ್ಲ ಎಂದು ತಿಳಿಸಲಾಗಿದೆ.
ಈ ಕಾರಣಕ್ಕೆ ಮೃತನ ಭಾವ ಚಿತ್ರವನ್ನು ಬಿಡುಗಡೆ ಮಾಡಿರುವ ಪೊಲೀಸರು ದೀಪಕ್ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ, ಆತನ ಒಡನಾಡಿಗರ ಬಗ್ಗೆ ಮಾಹಿತಿ ಇದ್ದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.