ಸರಕಾರಿ ಆಸ್ಪತ್ರೆ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪ – ಪೊಲೀಸ್ ದೂರು

0

ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಕರ್ತವ್ಯದ ಮೇರೆಗೆ ತೆರಳುತ್ತಿದ್ದ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ ವೈದ್ಯರು ಕರ್ತವ್ಯಕ್ಕೆ ತಡವಾಗಿ ಹೋಗುತ್ತಿದ್ದಾರೆಂದು ಸುಳ್ಳು ಆಪಾದನೆ ಬಿಂಬಿಸುವ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೊಂದ ವೈದ್ಯೆಯ ಪರವಾಗಿ ಸರಕಾರಿ ಆಸ್ಪತ್ರೆಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ಡಿ.10 ರಂದು ಬೆಳಿಗ್ಗೆ ಪುಂಜಾಲಕಟ್ಟೆಯಿಂದ ಸುಮಾರು 29 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆ ತರುವಾಗ ಮೃತಪಟ್ಟಿದ್ದರು. ಬಳಿಕ ಮೃತ ದೇಹದ ಮರಣೋತ್ತರ ಪರೀಕ್ಷೆಯ ಮೊದಲು ಪೊಲೀಸ್ ಠಾಣೆಗೆ ಎಂದಿನಂತೆ ಇಂಟಿಮೇಷನ್ ಅನ್ನು ಸರಕಾರಿ ಆಸ್ಪತ್ರೆಯಿಂದ ಕಳುಹಿಸಲಾಗಿತ್ತು. ಮೃತರ ಮರಣೋತ್ತರ ಪರೀಕ್ಷೆಗೆ ಪುಂಜಾಲಕಟ್ಟೆಯಿಂದ ಪೊಲೀಸರು ಬರಬೇಕಾಗಿತ್ತು. ಪೊಲೀಸರು ಮಧ್ಯಾಹ್ನದ ಬಳಿಕ ಆಸ್ಪತ್ರೆಗೆ ಬಂದಿದ್ದರು‌. ಬಳಿಕ ಅವರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಮನವಿ ನೀಡುವ ಕಾರ್ಯ‌ಮಾಡಿದರು. ಸಂಜೆ ವೇಳೆ ಎಲ್ಲಾ ಪ್ರಕ್ರಿಯೆ ಮುಗಿದು ಕರ್ತವ್ಯದಲ್ಲಿದ್ದ ಡಾ.ಶ್ವೇತಾ ಅವರು ಮರಣೋತ್ತರ ಪರೀಕ್ಷೆಗೆ ಹೋಗುವ ಸಂದರ್ಭ ಮೃತರ ಕಡೆಯ ಕೆಲ ಮಂದಿ ವೈದ್ಯರು ಮರಣೋತ್ತರ ಪರೀಕ್ಷೆಗೆ ತಡವಾಗಿ ಬಂದಿರುವುದಾಗಿ ಆರೋಪಿಸಿ ಅವರನ್ನು ತರಾಟೆಗೆತ್ತಿಕೊಂಡು ಅದನ್ನು ವಿಡಿಯೋ‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರವಾನೆ ಮಾಡಿದ್ದರು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸಾ ಸಂದರ್ಭ ಬಿಟ್ಟು ಬರಲಾಗುವುದಿಲ್ಲ ಎಂದು ಹೇಳಿದರೂ ಅಲ್ಲಿ ನೆರೆದವರು ವೈದ್ಯರ ಮಾತನ್ನು ಕೇಳದೆ ವೈದ್ಯರನ್ನು ತರಾಟೆಗೆತ್ತಿಕೊಂಡಿದ್ದರು. ಈ ಕುರಿತು ನೊಂದ ವೈದ್ಯೆ ಡಾ.ಶ್ವೇತಾ, ಪುತ್ತೂರು ಸರಕಾರಿ ಅಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಸರಕಾರಿ ಕರ್ತವ್ಯದ ವೇಳೆ ಅಡ್ಡಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆಪಾದನೆಯ ವಿಡಿಯೋ ಹಾಕಿರುವ ಕುರಿತು ದೂರು ನೀಡಿದ್ದಾರೆ.

ಸರ್ಜರಿ ಕರ್ತವ್ಯದಿಂದ ಅರ್ಧದಲ್ಲೇ ಬಿಟ್ಟು ಬರುವುದು ಹೇಗೆ ?
ಪುಂಜಾಲಕಟ್ಟೆಯಿಂದ ಬೆಳಿಗ್ಗೆ ವ್ಯಕ್ತಿಯನ್ನು ಕರೆ ತಂದಾಗ ಆತ ಮೃತ ಪಟ್ಟಿದ್ದರು. ಮತ್ತೆ ಮರಣೋತ್ತರ ಪರೀಕ್ಷೆಗೆ ಪುಂಜಾಲಕಟ್ಟೆಯಿಂದ ಪೊಲೀಸರು ಬರಬೇಕಾಗುತ್ತದೆ. ಈ ನಡುವೆ ಕರ್ತವ್ಯದಲ್ಲಿದ್ದ ಅರೆವಳಿಕಾ ತಜ್ಞೆ ಡಾ. ಶ್ವೇತಾ ಅವರು ಅಗತ್ಯ ಶಸ್ತ್ರಚಿಕಿತ್ಸೆಯಲ್ಲಿದ್ದರು. ಅದು ಕೂಡಾ ಸಣ್ಣ ಮಗುವಿದ್ದು. ಶಸ್ತ್ರ ಚಿಕಿತ್ಸೆ ಪೂರ್ಣ ಆಗುವ ತನಕ ಅರೆವಳಿಕೆ ತಜ್ಞರು ಜೊತೆಯಲ್ಲೇ ಇರಬೇಕು. ಹಾಗೆ ಅವರು ಶಸ್ತ್ರ ಚಿಕಿತ್ಸೆಯನ್ನು ಮುಗಿಸಿ ಸಂಜೆ ಮರಣೋತ್ತರ ಪರೀಕ್ಷೆಗೆ ಬಂದಿದ್ದಾರೆ. ಈ ವೇಳೆ ಮೃತರ ಕಡೆಯವರಿಗೂ ವಿಷಯ ತಿಳಿಸಿದೆ. ಆದರೆ ಅವರು ನಮ್ಮ ಮಾತನ್ನು ಕೇಳಿಲ್ಲ. ಬದಲಾಗಿ ಸುಳ್ಳು ಆಪಾದಣೆಯ ವಿಡಿಯೋ ಮಾಡಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ‌.
ಡಾ. ಆಶಾ ಪುತ್ತೂರಾಯ. ಆಡಳಿತ ವೈದ್ಯಾಧಿಕಾರಿ
ಸರಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು.

LEAVE A REPLY

Please enter your comment!
Please enter your name here