ಜನಪ್ರತಿನಿಧಿಗಳ ಇಚ್ಛಾಶಕ್ತಿಯಿದ್ದರೆ ವಾರ್ಡ್ ಅಭಿವೃದ್ಧಿ – ಸಂಜೀವ ಮಠಂದೂರು
ಪುತ್ತೂರು: ಜನರ ಹಿತವನ್ನು ಕಾಯುವ ದೃಷ್ಟಿಯಿಂದ ಜನಪರವಾಗಿ ಕೆಲಸ ಮಾಡುವ ನಮ್ಮ ಜನಪ್ರತಿನಿಧಿಗಳಿರಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿದ್ದರೆ ಒಂದು ವಾರ್ಡ್‌ನ ಅಭಿವೃದ್ಧಿ ಹೇಗೆ ಮಾಡಬಹುದೆಂದು ಗೌರಿಯಕ್ಕ ತೋರಿಸಿ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ನಗರೋತ್ಥಾನದ ಅನುದಾನದಲ್ಲಿ ಬನ್ನೂರು 4ನೇ ವಾರ್ಡ್‌ನ ನೆಕ್ಕಿಲ ಮತ್ತು ನಮ್ಮ ಕ್ಲೀನಿಕ್ ಬಳಿ ಸುಮಾರು ರೂ. 20 ಲಕ್ಷ ವೆಚ್ಚದಲ್ಲಿ ನಡೆದ ಕಾಂಕ್ರೀಟ್ ರಸ್ತೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ಥಳೀಯ ಹಿರಿಯರು ರಸ್ತೆ ಉದ್ಘಾಟಿಸಿದರು. ಈ ಸಂದರ್ಭ ಸಂಜೀವ ಮಠಂದೂರು ಅವರು ಮಾತನಾಡಿ ಇವತ್ತು ನಗರೋತ್ಥಾನದ ಅನುದಾನ ಬರಬಹುದು. ಆದರೆ ಜನಪ್ರತಿನಿಧಿಗೆ ಇಚ್ಛಾಶಕ್ತಿ ಇರಬೇಕು. ಜನರ ಬೇಡಿಕೆಗಳನ್ನು ಮನಗಂಡು ಕಾಲಕಾಲಕ್ಕೆ ಸಂದರ್ಭಕ್ಕೆ ಅನುಗುಣವಾಗಿ ಕೆಲಸ ಮಾಡಿಕೊಟ್ಟಾಗ ಜನರು ಕಂಡಿತಾ ಸಹಕಾರ ನೀಡುತ್ತಾರೆ ಮತ್ತು ಮುಂದೆ ಚುನಾವಣೆಯಲ್ಲಿ ಅಶೀರ್ವಾದವನ್ನೂ ಮಾಡುತ್ತಾರೆ. ಈ ನಿಟ್ಟಿನಲ್ಲಿ ಈ ಭಾಗದ ನಗರಸಭಾ ಸದಸ್ಯೆ ಗೌರಿ ಬನ್ನೂರು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈಗಿನ ಸರಕಾರದಿಂದ ವಿಳಂಬ ನೀತಿ:
ಹಿಂದಿನ ಸರಕಾರ ಬಸವರಾಜ್ ಬೊಮ್ಮಾಯಿ ಅವರು ಇರುವ ಸಂದರ್ಭ ಸುಮಾರು ರೂ.40 ಕೋಟಿ ಅನುದಾನವನ್ನು ನಗರೋತ್ಥಾನದಲ್ಲಿ ಪುತ್ತೂರು ನಗರಸಭೆಗೆ ವಿನಿಯೋಗ ಮಾಡುವ ಕೆಲಸ ಮಾಡಿದ್ದರು. ಆ ಅನುದಾನ ಇನ್ನೂ ಕೂಡಾ ಖರ್ಚಾಗಿಲ್ಲ. ಈಗಿನ ಸರಕಾರದ ವಿಳಂಬ ನೀತಿಯಿಂದಾಗಿ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಪುತ್ತೂರು ನಗರಸಭೆಯಲ್ಲಿ ಅಭಿವೃದ್ದಿ ಕುಂಟಿತವಾಗಿತ್ತು. ಅಭಿವೃದ್ಧಿಗೆ ವೇಗ ಕೊಡುವ ದೃಷ್ಟಿಯಿಂದ ನಗರಸಭೆ ಅಧ್ಯಕ್ಷೆ ಲೀಲಾವತಿ ಮತ್ತು ಉಪಾಧ್ಯಕ್ಷ ಬಾಲಚಂದ್ರ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇವತ್ತು ಅಭಿವೃದ್ದಿಗೆ ವೇಗ ಸಿಗುತ್ತಿದೆ ಎಂದು ಸಂಜೀವ ಮಠಂದೂರು ಹೇಳಿದರು.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಅವರು ಮಾತನಾಡಿದರು. ನಗರಸಭೆ ಸ್ಥಳೀಯ ಸದಸ್ಯೆ ಗೌರಿ ಹೆಚ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಅತಿ ದೊಡ್ಡ ವಾರ್ಡ್ ಬನ್ನೂರು, ಇಲ್ಲಿನ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಎಂದ ಅವರು ಅಭಿವೃದ್ದಿಯ ಕೆಲಸಗಳ ಕುರಿತು ಮಾಹಿತಿ ನೀಡಿದರು.
ಬಿಜೆಪಿ ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷರು ಮತ್ತು ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಮೋಹಿನಿ ವಿಶ್ವನಾಥ ಗೌಡ, ಮಾಜಿ ಉಪಾಧ್ಯಕ್ಷ ವಿಶ್ಚನಾಥ ಗೌಡ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಪ್ರಭು, ಅನಿಲ್ ತೆಂಕಿಲ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಬಿಜೆಪಿ ಬೂತ್ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರವಿಚಂದ್ರ ಗೌಡ, ಬಿಲ್ಡಿಂಗ್ ಕಂಟ್ರಾಕ್ಟರ್ ಬಾಲಕೃಷ್ಣ ಕೆ.ಆರ್, ಬನ್ನೂರು ಬೂತ್ ಕಾರ್ಯದರ್ಶಿ ಶೇಖರ್ ಬಿರ್ವ, ಡಾ. ಅನಿಲ ದೀಪಕ್, ಹರೀಶ್ ಕುಲಾಲ್, ಶಕ್ತಿಕೇಂದ್ರದ ಅಭಿಲಾಷ್ ರೈ, ದಯಾನಂದ, ಭಾಸ್ಕರ್ ದಾಸ್, ವೇಣುಗೋಪಾಲ, ರವಿ, ಸ್ಪೂರ್ತಿ ಯುವಕ ಮಂಡಲದ ಸಂಚಾಲಕ ದಿನೇಶ್ ಸಾಲಿಯಾನ್, ನಳಿನಾಕ್ಷಿ, ಕರುಣಾಕರ ರೈ, ಸುಬ್ರಹ್ಮಣ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ನಮ್ಮ ಕ್ಲೀನಿಕ್ ಬಳಿಯ ರಸ್ತೆ ಕಾಂಕ್ರೀಟ್ ಉದ್ಘಾಟನೆಯ ಸಂದರ್ಭ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷ ವೆಂಕಟರಮಣ ಕಳುವಾಜೆ, ಸಂಚಾಲಕ ಎ.ವಿ.ನಾರಾಯಣ್, ಮನೋಹರ್ ರೈ, ರಾಧಾಕೃಷ್ಣ ಗೌಡ ಬನ್ನೂರು, ಜಗದೀಶ್, ರಮೇಶ್ ಗೌಡ, ನಮ್ಮ ಕ್ಲೀನಿಕ್‌ನ ವೈದ್ಯರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.