VCET:ಹೆತ್ತವರ ಮತ್ತು ಪೋಷಕರ ಸಮಾಲೋಚನ ಸಭೆ

0

ಪುತ್ತೂರು: ಪ್ರಸಕ್ತ ಸನ್ನಿವೇಶದಲ್ಲಿ ಸಮಾಜದಲ್ಲಿ ಒಳ್ಳೆಯದಕ್ಕೆ ಎಷ್ಟು ಆಸ್ಪದವಿದೆಯೋ ಕೆಟ್ಟದ್ದಕ್ಕೂ ಅಷ್ಟೇ ಆಸ್ಪದವಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳು ಮತ್ತು ಶೈಕ್ಷಣಿಕ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಸಭಾಭವನದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಮಾಲೋಚನ ಸಭೆಯ ಮುಖ್ಯ ಅತಿಥಿಗಳಾಗಿ ಮಾತಾಡಿದರು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಕೆಲವೊಂದು ಕಟ್ಟುಪಾಡುಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಇದರ ಪಾಲನೆಗೆ ಹೆತ್ತವರ ಮತ್ತು ಪೋಷಕರ ಸಹಕಾರ ಅಗತ್ಯ ಎಂದು ಹೇಳಿದರು. ಹೊಸ ಶೈಕ್ಷಣಿಕ ಪದ್ದತಿಯ ಪ್ರಕಾರ ವಿದ್ಯಾರ್ಥಿಗಳ ಹಾಜರಾತಿ, ಆಂತರಿಕ ಮೌಲ್ಯಮಾಪನ, ಅಂಕಗಳು ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ನೀಡಿದರು.


ಪೇರೆಂಟ್ ರಿಲೇಶನ್ ಸೆಲ್‌ನ ಅಧ್ಯಕ್ಷ ಈಶ್ವರಪ್ರಸಾದ್ ಹೆತ್ತವರು ಮತ್ತು ಕಾಲೇಜಿನ ನಡುವಿನ ಬಾಂಧವ್ಯದ ಅಗತ್ಯತೆಯ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಮಾತನಾಡಿ ಪೋಷಕರು ವಿದ್ಯಾರ್ಥಿಗಳ ಪ್ರಗತಿಯನ್ನು ಗಮನಿಸಿವುದಕ್ಕೆ ಆಗಾಗ ಕಾಲೇಜಿಗೆ ಭೇಟಿ ನೀಡಿ ವಿಭಾಗ ಮುಖ್ಯಸ್ಥರೊಂದಿಗೆ ಮತ್ತು ಪ್ರಾಧ್ಯಾಪಕರೊಂದಿಗೆ ಮಾತುಕತೆ ನಡೆಸಬೇಕು ಎಂದರು. ಸಾಮಾಜಿಕ ಜಾಲತಾಣಗಳ ಬಳಕೆ, ವಾಹನಗಳ ಬಳಕೆಯ ಬಗ್ಗೆ ಮಕ್ಕಳಿಗೆ ಎಚ್ಚರಿಕೆಯನ್ನು ನೀಡಬೇಕು ಮತ್ತು ಅವುಗಳಿಂದಾಗುವ ಹಾನಿಯ ಬಗ್ಗೆ ಮನವರಿಕೆ ಮಾಡಬೇಕು ಎಂದರು.


ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಭಾ ಕಾರ್ಯಕ್ರಮದ ಮೊದಲು ತಮ್ಮ ಮಕ್ಕಳಿಗೆ ಕಲಿಸುವ ಎಲ್ಲಾ ಪ್ರಾಧ್ಯಾಪಕರ ಜತೆ ಪೋಷಕರು ಸಂವಹನವನ್ನು ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಿಳಿದುಕೊಂಡರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ನಿರ್ದೇಶಕ ಸತ್ಯನಾರಾಯಣ ಭಟ್, ಪೇರೆಂಟ್ ರಿಲೇಶನ್ ಸೆಲ್‌ನ ಸಹ ಕಾರ್ಯದರ್ಶಿ ದೀಪಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಸ್ವಾಗತಿಸಿದರು. ಪೇರೆಂಟ್ ರಿಲೇಶನ್ ಸೆಲ್‌ನ ಸಂಚಾಲಕಿ ಡಾ.ಶ್ವೇತಾಂಬಿಕಾ.ಪಿ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕಿ ಪ್ರೊ.ಶ್ರೀಶರಣ್ಯ ಯು ಆರ್ ವಂದನಾರ್ಪಣೆಗೈದರು. ಡಾ.ರವೀಶ್.ಪಿ.ಎಂ ಮತ್ತು ಪ್ರೊ.ಅನ್ನಪೂರ್ಣಾ.ಬಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here