ಹಿರಿಯರ ಮಾರ್ಗದರ್ಶನ ಮಕ್ಕಳ ಸುಗಮ ಜೀವನಕ್ಕೆ ಆಧಾರ -ವೀಣಾ ನಾಗೇಶ್ ತಂತ್ರಿ
ಪುತ್ತೂರು: ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸುವುದರ ಜೊತೆಗೆ ಶೈಕ್ಷಣಿಕವಾಗಿಯೂ ಮುತುವರ್ಜಿವಹಿಸಿ ಉತ್ತಮ ಫಲಿತಾಂಶ ಪಡೆದು ಶಾಲೆಗೂ ಹೆತ್ತವರಿಗೂ ಕೀರ್ತಿ ತರುವಂತಾಗಬೇಕು. ಹಿರಿಯರು ನೀಡುವ ಮಾರ್ಗದರ್ಶನ ಸಂಸ್ಕಾರದಂತೆ ನಡೆದಾಗ ಜೀವನ ಸುಗಮವಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯೆ ವೀಣಾ ನಾಗೇಶ್ ತಂತ್ರಿ ಹೇಳಿದರು.
ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಪ್ರತಿಭಾ ಪುರಸ್ಕಾರ’ ಮೊದಲ ಅವಧಿಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಅತಿಥಿ ಎವಿಜಿ ಲಾಜಿಸ್ಟಿಕ್ ಲಿಮಿಟೆಡ್ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿ ಅಭಿಜ್ಞಾನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಸಂಚಾಲಕ ವಸಂತ ಸುವರ್ಣ ವಿದ್ಯಾರ್ಥಿಗಳು ತಂದೆ ತಾಯಿಯರ ಆಶಯದಂತೆ ತಮ್ಮ ಪ್ರತಿಭೆಯನ್ನು ಪರಿಶ್ರಮದಿಂದ ಉತ್ತಮ ಪಡಿಸಿಕೊಂಡು ಅದರಲ್ಲಿಯೇ ಸಾಧನೆ ಮಾಡಿ ತಮ್ಮ ಸುತ್ತಲ ಸಮಾಜಕ್ಕೆ ನೆರವು ನೀಡುವಂತಹ ಸತ್ಪ್ರಜೆಗಳಾಗಬೇಕು ಎಂದರು.
ಶಾಲಾ ಪೋಷಕರೂ ಅನ್ನಪೂರ್ಣಾ ಸಮಿತಿಯ ಸದಸ್ಯರೂ ಆದಶ್ಯಾಮಲ ನಾಯಕ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ಹಿರಿಯ ಶಿಕ್ಷಕಿ ದಾಕ್ಷಾಯಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿ ಪೂಜಾ ನಿರೂಪಿಸಿ, ವಿದ್ಯಾರ್ಥಿ ಶೃಜನ್ ರೈ ವಂದಿಸಿದರು.