ಗ್ರಾಮಸ್ಥರ ದೂರಿಗೂ ಸ್ಪಂದಿಸದ ಅಧಿಕಾರಿಗಳು: ಆರೋಪ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದಲ್ಲಿ ಪೆರ್ನೆ ಮತ್ತು ಗಡಿಯಾರ ಪ್ರದೇಶದ ಮಧ್ಯೆ ಪೆರ್ಲಾಪು ಸನಿಹದಲ್ಲಿರುವ ಬಂಗಾರುಬೆಟ್ಟು ಮಠ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿವೆ.
ಉಪ್ಪಿನಂಗಡಿ ಕಡೆಯಿಂದ ಹರಿದು ಬರುವ ನೇತ್ರಾವತಿ ನದಿಯಲ್ಲಿ ನಚ್ಚಬೆಟ್ಟು ಮತ್ತು ಬಂಗಾರುಬೆಟ್ಟು ಎಂಬಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತದೆ. ಹಗಲು ಮತ್ತು ರಾತ್ರಿಯಲ್ಲಿಯೂ ಮರಳು ತೆಗೆಯಲಾಗುತ್ತಿದ್ದು, ದಿನನಿತ್ಯ 30ರಿಂದ 40 ಲಾರಿ ಮರಳು ಅಕ್ರಮವಾಗಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಇಲ್ಲಿಂದ ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ಕಡೆಗೆ ಸಾಗಾಟ ನಡೆಯುತ್ತಿರುವುದಾಗಿ ದೂರುಗಳು ವ್ಯಕ್ತವಾಗಿವೆ.
ನದಿ ಪಾತ್ರ ಬಂಗಾರುಬೆಟ್ಟು ಮಠ ಎಂಬಲ್ಲಿಂದ ಹೊರ ಬರುವ ಮರಳು ತುಂಬಿದ ಲಾರಿ ಮತ್ತು ಟಿಪ್ಪರ್ಗಳು ಕೆಲವೊಮ್ಮೆ ಪೆರ್ಲಾಪು ಜಂಕ್ಷನ್ಗೆ ಬಂದು ಅಲ್ಲಿಂದ ಎಡಕ್ಕೆ ಕವಲೊಡೆದು ಅಮೈ ಸೇತುವೆ ಬಳಿ ಮತ್ತು ಕೆಲವೊಮ್ಮೆ ಬಲಕ್ಕೆ ಕವಲೊಡೆದು ಇನ್ನೊಂದು ರಸ್ತೆಯ ಮೂಲಕ ಗಡಿಯಾರ ಜಂಕ್ಷನ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸಿ ಯಥೇಚ್ಛವಾಗಿ ಮರಳು ಸಾಗಾಟ ನಡೆಯುತ್ತಿರುವುದು ಕಂಡು ಬಂದಿದೆ. ದಿನಂಪ್ರತಿ 2 ಕಡೆಯಿಂದಾಗಿ ಸುಮಾರು 30ರಿಂದ 40 ಲೋಡು ಮರಳು ಇಲ್ಲಿಂದ ಹೊರ ಹೋಗುತ್ತಿದ್ದು, ಸರಕಾರದ ಬೊಕ್ಕಸಕ್ಕೆ ದಿನಂಪ್ರತಿ ಲಕ್ಷಾಂತರ ರೂಪಾಯಿ ವಂಚನೆ ಆಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಮರಳು ತುಂಬಿಸಲು ಹೋಗುವ ಲಾರಿಗಳು ನಾ ಮುಂದು ತಾ ಮುಂದು ಎಂಬ ತವಕದಲ್ಲಿ ಮತ್ತು ಮರಳು ತುಂಬಿಸಿಕೊಂಡು ಹೋಗುವಾಗ ಯಾವುದೇ ದಾಖಲೆ ಪತ್ರಗಳು ಇಲ್ಲದ್ದರಿಂದ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಿ, ನಿಗದಿತ ಸ್ಥಳಕ್ಕೆ ಹೋಗುವ ಆತುರದಲ್ಲಿ ಅತಿ ವೇಗದಲ್ಲಿ ಹೋಗುತ್ತಿದ್ದು, ಶಾಲಾ ಮಕ್ಕಳ ಸಹಿತ ವೃದ್ಧರು, ಮಹಿಳೆಯರು ರಸ್ತೆ ಬದಿಯಲ್ಲಿ ಹೋಗುವುದಕ್ಕೂ ಭಯ ಪಡುವಂತಾಗಿದೆ ಎಂದು ಗ್ರಾಮಸ್ಥರು ಪುತ್ತೂರು ಉಪ ವಿಭಾಗಾಧಿಕಾರಿ ಮತ್ತು ಮಂಗಳೂರು ಗಣಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಇನ್ನೊಂದೆಡೆ ಗ್ರಾಮದ ಒಳಗಿನ ರಸ್ತೆಯಲ್ಲಿ ಭಾರೀ ಮರಳು ಹೇರಿಕೊಂಡು ಹೋಗುವ ಲಾರಿಯಿಂದಾಗಿ ರಸ್ತೆಗಳು ಕುಲಗೆಡುತ್ತಿದೆ. ರಸ್ತೆ ತುಂಬಾ ಹೊಂಡ ನಿರ್ಮಾಣ ಆಗುತ್ತಿದ್ದು, ಕಾರು, ಅಟೋ ರಿಕ್ಷಾ, ದ್ವಿಚಕ್ರ ವಾಹನಗಳು ಹೋಗುವುದಕ್ಕೂ ಸಮಸ್ಯೆ ಉಂಟಾಗುತ್ತಿದೆ, ರಸ್ತೆಯಲ್ಲಿ ದಿನೇ ಅಪಘಾತಗಳು ಹೆಚ್ಚಾಗಲಾರಂಭಿಸಿದೆ ಎಂಬ ದೂರುಗಳು ವ್ಯಕ್ತವಾಗಿವೆ. ಆದರೂ ಅಧಿಕಾರಿಗಳು ಈ ಬಗ್ಗೆ ಮೌನವಹಿಸಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆಯಲ್ಲದೆ ನದಿಯಲ್ಲಿ ಇರುವ ಸಂಪತ್ತು ಈ ರೀತಿಯಾಗಿ ಲೂಟಿ ಆಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳೂ ಇತ್ತ ಗಮನ ಹರಿಸದೇ ಇರುವುದು ನಮ್ಮ ಮುಂದಿರುವ ವ್ಯವಸ್ಥೆಯ ದುರಂತ ಎಂಬ ಮಾರ್ಮಿಕವಾದ ಮಾತುಗಳನ್ನು ಅಧಿಕಾರಿಗಳಿಗೆ ಬರೆದ ದೂರು ಅರ್ಜಿಯಲ್ಲೂ ಗ್ರಾಮಸ್ಥರು ಉಲ್ಲೇಖಿಸಿದ್ದಾರೆ.
ಸೂಕ್ತ ಕಾನೂನು ಕ್ರಮ: ಕೃಷ್ಣವೇಣಿ
ಸಾರ್ವಜನಿಕ ದೂರು ಆಧರಿಸಿ ಪ್ರದೇಶವಾರು ಅಧಿಕಾರಿಗೆ ನಿರ್ದೇಶನ ನೀಡಲಾಗುತ್ತದೆ. ಆದರೂ ಈ ನಿರ್ದಿಷ್ಟ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು.
– ಕೃಷ್ಣವೇಣಿ, ಹಿರಿಯ ಭೂವಿಜ್ಞಾನಿ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು