ಪುತ್ತೂರು ಪುರಪ್ರವೇಶ ಮಾಡಿದ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರು – ಇಂದು ಪುತ್ತೂರಿನಲ್ಲಿ 2ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ

0

ಪುತ್ತೂರು: ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ ದೇವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿವತಿಯಿಂದ ಇತಿಹಾಸ ಪ್ರಸಿದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.29ರಂದು ಅತ್ಯಂತ ವೈಭವದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಡಿ.28ರಂದು ಸಂಜೆ ಸಾವಿರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಈಶ ಮಂಟಪಕ್ಕೆ ಕರೆತರಲಾಯಿತು.


ಬೊಳುವಾರಿನಲ್ಲಿ ವೈಭವದ ಮೆರವಣಿಗೆಯನ್ನು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಚೆಂಡೆಕುಣಿತ, ನೃತ್ಯ ಭಜನೆ ತಂಡದೊಂದಿಗೆ, ಕೇಸರಿ ಶಲ್ಯ ಧರಿಸಿದ ಮಹಿಳೆಯರು ಕಲಶವನ್ನು ಹಿಡಿದು ಮೆರವಣಿಯುದ್ದಕ್ಕೂ ಪುಷ್ಪಾರ್ಚಣೆ ಮಾಡುವ ಮೂಲಕ ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ರಸ್ತೆಯ ಮೂಲಕ ನೆಲ್ಲಿಕಟ್ಟೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಗೆ ಬಂದು ಅಲ್ಲಿಂದ ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು ಸಹಿತ ಪದಾಧಿಕಾರಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರಿರುವ ಪಲ್ಲಕಿಯನ್ನು ತಾವೇ ಹೆಗಲಮೇರಿಸಿ ಪ್ರಧಾನ ವೇದಿಕೆಗೆ ತಂದು ಅರ್ಚಕರಿಗೆ ಅರ್ಪಿಸಿದರು. ವಿಶಾಲವಾದ ಈಶ ಮಂಟಪದಲ್ಲಿ ಸುಂದರ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ಈ ಸಂದರ್ಭ ವೆಂಕಟರಮಣ ಗೋವಿಂದ.. ಗೋವಿಂದಾ.. ಶ್ರೀನಿವಾಸ ಗೋವಿಂದ.. ಸ್ಮರಣೆಯಲ್ಲಿ ಭಕ್ತರು ಮುಳುಗಿದರು. ಶ್ರೀನಿವಾಸನನ್ನು ಕೊಂಡಾಡುವ ಭಕ್ತಿಗೀತೆ, ಭಜನೆ, ಮಂತ್ರಗಳು ಎಲ್ಲೆಡೆ ಮೊಳಗಿದವು. ಶ್ರೀನಿವಾಸ ದೇವರ ಪ್ರತಿಷ್ಠೆಗೂ ಮುಂದೆ ಧರ್ಮಸಂಗಮ ಕಾರ್ಯಕ್ರಮ ನಡೆಯಿತು. ಶ್ರೀನಿವಾಸ ದೇವರ ಪುರಪ್ರವೇಶ ಸಂದರ್ಭ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ಕುಂಟಾರು ಗುರು ತಂತ್ರಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಕಲ್ಯಾಣೋತ್ಸವ ಅಂತರದಲ್ಲೂ ನಿತ್ಯ ನಡೆಯಬೇಕು:
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ ಇದೊಂದು ಧರ್ಮ ಸಂಗಮವೂ ಹೌದು ಸಂತ ಸಂಗಮವೂ ಹೌದು. ಅದರಲ್ಲೂ ಇವತ್ತು ಯುವ ಸನ್ಯಾಸಿಗಳು ಎದ್ದಿರುವುದು ಭಾರತದ ಮೌಲ್ಯವನ್ನು ಉಳಿಸುವ ಸಂದರ್ಭ ಎಂದು ನಾವು ತಿಳಿದು ಕೊಳ್ಳಬಹುದು. ಅದೇ ರೀತಿ ಕಲ್ಯೋಣೋತ್ಸವದ ಮೂಲಕ ಧರ್ಮ ಮತ್ತು ಸಂಸ್ಕೃತಿಯ ಅನಾವರಣವಾಗುತ್ತಿದೆ. ಭಗವಂತನ ಕಲ್ಯಾಣ ಗುಣಗಳನ್ನು ಅನುಸರಿಸುವ ಕಾರ್ಯವಾಗಬೇಕು. ಸನಾತನ ಹಿಂದು ಧರ್ಮದ ಸಂರಕ್ಷಣೆ ನಡೆಸುವ ಕಾರ್ಯ ನಮ್ಮಿಂದಲೇ ನಡೆಯಬೇಕಾಗಿದೆ. ಧರ್ಮವನ್ನು ರಕ್ಷಣೆ ಮಾಡುವವರನ್ನು, ಧರ್ಮವೇ ರಕ್ಷಿಸುತ್ತದೆ. ಮುಂದಿನ ದಿನ ಧರ್ಮ ರಕ್ಷಣೆಗೆ ಅನಿಯಾಗಬೇಕು. ಒಂದಷ್ಟು ಎಚ್ಚರದಲ್ಲಿ ಧರ್ಮ ಸಂರಕ್ಷಣೆಯ ಕಾರ್ಯ ಮಾಡಬೇಕು. ಈಗಾಲೇ ವಿಧಾನಸಭೆಯಲ್ಲೂ ಅಲ್ಲೋಲಕಲ್ಲೋಲ ಆಗುತ್ತಾ ಇದೆ. ಲೋಕಸಭೆಯಲ್ಲೂ ಅಲ್ಲೋಲ ಕಲ್ಲೋಲ ಆಗುತ್ತಾ ಇದೆ. ಅಂತೂ ಧರ್ಮ ಸಂವಿಧಾನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.


ನಿಸ್ವಾರ್ಥ ಭಾವನೆಯಿಂದ ಹಿಂದು ಸಂಘಟನೆಗಾಗಿ ಕಟಿಬದ್ದರಾಗಿ:
ಅರಕಲಗೂಡು ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಭಾರತೀಯ ಸಂಸ್ಕೃತಿ ಎಲ್ಲ ದೇಶಕ್ಕೆ ಆದರ್ಶಮಯವಾಗಿದ್ದು, ಪಾಶ್ಚತ್ಯಾ ಜಗತ್ತು ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದಕ್ಕೆ ಮುಂದಾಗುತ್ತಿದೆ. ಪರಮಾತ್ಮನ ಕಲ್ಯಾಣ ಮಾಡುವ ಮೂಲಕ ನಮ್ಮ ಕಲ್ಯಾಣ ಆಗಬೇಕು. ಅದಕ್ಕಾಗಿ ಪ್ರಸ್ತುತ ದಿನ ಸಂಸ್ಕೃತಿಯ ಮೇಲಾಗುವ ಆಗಂತುಕಗಳನ್ನು ತಡೆಯಬೇಕು. ಇದಕ್ಕಾಗಿ ನಿಸ್ವಾರ್ಥ ಭಾವನೆಯಿಂದ ಹಿಂದು ಸಂಘಟನೆಗಾಗಿ ಕಟಿಬದ್ದರಾಗಿರಬೇಕೆಂದು ಹೇಳಿದರು.


ದೇಶದಲ್ಲಿ ಹತ್ತಾರು ಪುತ್ತಿಲರಂತಹ ದೇಶಭಕ್ತರು ಹುಟ್ಟಲಿ:
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ದೇಶಕ್ಕಾಗಿ ಒಂದುಷ್ಟು ಸಮಯವನ್ನು ತ್ಯಾಗ ಮಾಡಬೇಕು. ಇಂತಹ ತ್ಯಾಗ ಮನೋಭಾವನೆಯನ್ನು ಉಳ್ಳ ಪುತ್ತಿಲರಂತಹ ದೇಶ ಭಕ್ತರು ಹತ್ತಾರು ಮಂದಿ ಹುಟ್ಟಬೇಕು. ಹಿಂದು ಸನಾತನ ಧರ್ಮ ಉಳಿಸಬೇಕಾದರೆ ಪ್ರತಿಯೊಬ್ಬ ಹಿಂದು ಕಟ್ಟಿಬದ್ದರಾಗಿರಬೇಕು. ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ಮಾಡಬಹುದು. ಪುತ್ತಿಲ ಪರಿವಾರ ಕೆಲಸ ಕಾರ್ಯಗಳ ಮೂಲಕ ಸಾಮರ್ಥ್ಯವನ್ನು ತೋರಿಸಿದೆ. ಪುತ್ತಿಲರ ಯೋಜನೆ, ಯೋಚನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.


ಧರ್ಮ ಆಚರಣೆ ಮಾಡಿದರೆ ಅದೇ ದೇಶ ಸೇವೆ:
ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ನಾವು ಧರ್ಮ ರಕ್ಷಣೆಗೆ ಮನಸ್ಸು ಮಾಡಿದರೆ ಸಾಲದು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಧರ್ಮರಕ್ಷಣೆಗೆ ಮೊದಲು ದೇವರು, ನಂತರ ದೇಶ, ನಂತರ ನಾವು ಎಂಬ ವಿಚಾರ ಮುಂದಿಟ್ಟು ಸಂಘಟನೆಯ ಕೆಲಸ ಮಾಡಬೇಕು. ಪರಮಾತ್ಮನ ಆರಾಧನೆಯ ಮೂಲಕ ವೈರಿ ನಿಗ್ರಹ ಎಂದ ಅವರು ಧರ್ಮ ಆಚರಣೆ ಮಾಡಿದರೆ ಅದೇ ದೇಶ ಸೇವೆ ಎಂದರು.


ಕಲಿಯುಗದಲ್ಲಿ ಭಗವಂತ ಕಲ್ಯಾಣೋತ್ಸವದ ಮೂಲಕ ಅವತರಿಸುತ್ತಾನೆ:
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ ಕಲಿಯುಗದಲ್ಕಿ ಭಗವಂತ ಅವತಾರಾವಿಲ್ಲ. ಆದರೆ ಭಗವಂತ ವ್ಯಕ್ತಿಯ ರೂಪದಲ್ಲಿ ಭಗವಂತನ ಸೇವೆಗೆ ಅವಕಾಶ ಮಾಡುತ್ತಾನೆ. ಅದು ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ನಮಗೆ ಲಭಿಸುತ್ತದೆ. ಹಾಗಾಗಿ ಕಲಿಯುಗದಲ್ಲಿ ಭಗವಂತ ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಪ್ರತಿ ವರ್ಷ ಅವತರಿಸುತ್ತಾನೆ ಎಂದರು.


ಶ್ರೀನಿವಾಸ ದೇವರು ಎಲ್ಲರ ಬಾಳಿಗೆ ಬೆಳಕು ನೀಡಲಿ:
ಅಧ್ಯಕ್ಷತೆ ವಹಿತಿಸ ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಅವರು ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವ ಎಲ್ಲರ ಬಾಳಿಗೆ ಬೆಳಕು ನೀಡಲಿ. ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಭಾಗವಹಿಸಿ ಶ್ರೀ ದೇವರ ದರುಶನ ಪಡೆಯುವಂತೆ ವಿನಂತಿಸಿದರು.


ಮುಂದಿನ ವರ್ಷ ನೂರು ಮಂದಿಗೆ ಸಾಮೂಹಿಕ ವಿವಾಹ ಘೋಷಣೆ
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀನಿವಾಸನ ಪ್ರೇರಣೆಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಒಂದು ವರ್ಷದಲ್ಲಿ ಸುಮಾರು 25 ಲಕ್ಷ ಕ್ಕೂ ಹೆಚ್ಚಿನ ಆರ್ಥಿಕ ಸೇವೆಯನ್ನು ಬಡ ಜನರಿಗೆ ನೀಡಿದೆ. ನೂರಾರು ಕುಟುಂಬಗಳ ನೋವಿಗೆ ಸ್ಪಂಧಿಸುವ ಕೆಲಸ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶಿಕ್ಷಣ ಪಡೆದವರು ನಮಗೆ ಸ್ವಲ್ಪ ಸಮಾಜಕ್ಕೆ ಎಲ್ಲವನ್ನು ಅರ್ಪಣೆ ಮಾಡುವ ಚಿಂತನೆಯೊಂದಿಗೆ ಧರ್ಮ ಜಾಗೃತಿ ಮಾಡುವ ಶಕ್ತಿ ಭಗವಂತ ನೀಡಿದ್ದಾನೆ. ಅದನ್ನು ಮುಂದುವರಿಸುತ್ತಿದ್ದೇವೆ. ಮುಂದಿನ ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುವ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ನೇತೃತ್ವದಲ್ಲಿ ನೂರು ಮಂದಿಗೆ ಸಾಮೂಹಿಕ ವಿವಾಹವನ್ನು ಮಾಡುವ ಯೋಜನೆ ಚಿಂತನೆ ನಮ್ಮ ಮುಂದಿದೆ ಎಂದು ಹೇಳಿದ ಅವರು ನಮ್ಮ ಬದುಕಿನ ಕೊನೆಯ ಕ್ಷಣದ ತನಕ ಧರ್ಮ ಉಳಿಸುವ ಕಾರ್ಯ ಮಾಡೋಣ. ಧರ್ಮ ಮತ್ತು ರಾಷ್ಟ್ರವನ್ನು ಉಳಿಸುವ ಕಾರ್ಯ ಮಾಡೋಣ ಎಂದರು.


ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಶಾಂಕ ಕೊಟೇಚಾ, ಬೂಡಿಯಾರು ರಾಧಾಕೃಷ್ಣ ರೈ, ಚಂದಪ್ಪ ಮೂಲ್ಯ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್. ಸಂಪ್ಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ರಾಜು ಶೆಟ್ಟಿ, ಶ್ರೀನಿವಾಸ ಕಲ್ಯಾಣೋತ್ಸವದ ಸಂಚಾಲಕ ಮನೀಶ್ ಕುಲಾಲ್, ಹರೀಶ್ ಮರುವಾಲ, ಸಂತೋಷ್, ಅನಿಲ್ ತೆಂಕಿಲ , ಗಣೇಶ್ಚಂದ್ರ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರಜನೀಶ್, ಶ್ರೀನಿವಾಸ ಕಲ್ಯಾಣೋತ್ಸವ ಕಡಬ ತಾಲೂಕು ಅಧ್ಯಕ್ಷ ವೆಂಕಟ್ರಮಣ ಕಡಬ, ನವೀನ್ ರೈ ಪಂಜಳ, ಸುನಿಲ್ ಬೊರ್ಕರ್, ಗುರು ತೆಂಕಿಲ, ಸುಜಿತ್ ಕಜೆ, ಪ್ರಜ್ವಲ್ ಘಾಟೆ, ಗಣೇಶ್ ಮುಕ್ರಂಪಾಡಿ ಅತಿಥಿಗಳನ್ನು ಗೌರವಿಸಿದರು. ವಿಜಯಶ್ರೀ ಮುಳಿಯಾರು ಪ್ರಾರ್ಥಿಸಿದರು. ಶ್ರೀನಿವಾಸ ಕಲ್ಯಾಣೋತ್ಸ ಸಮಿತಿ ಸ್ವಯಂ ಸೇವಕ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿ, ಕಾರ್ಯದರ್ಶಿ ರವಿಕುಮಾರ್ ಕೆದಂಬಾಡಿ ಮಠ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ವಿ.ಜೆ.ವಿಕ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಬಂಗಾರಡ್ಕ ವಿಶ್ವೇಶ್ವರ ಭಟ್, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ಶ್ರೀಕೃಷ್ಣ ಉಪಾಧ್ಯಾಯ, ಸುನಿಲ್ ಬೋರ್ಕರ್, ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಸಹಿತ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ಗಾನಸಿರಿ ಡಾ| ಕಿರಣ್ ಕುಮಾರ್ ಪುತ್ತೂರು ಇವರಿಂದ ಭಕ್ತಿ ಗಾನಸುಧೆ ನಡೆಯಿತು. ಈ ಸಂದರ್ಭ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 10 ಗಂಟೆಯ ಬಳಿಕ ತೆಲಿಕೆದ ಬೊಳ್ಳಿ. ಡಾ| ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಚಾ ಪರ‍್ಕ ಕಲಾವಿದರಿಂದ 921ನೇ ಪ್ರದರ್ಶನವಾಗಿ ಪುದರ್ ದೀತಿಜಿ ತುಳು ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here