ಪುತ್ತೂರು: ನೃತ್ಯೋಪಾಸನಾ ಕಲಾ ಅಕಾಡೆಮಿ ನೆಲ್ಲಿಕಟ್ಟೆ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪುತ್ತೂರು, ಉಪ್ಪಿನಂಗಡಿ ಕಲಾ ತಂಡಗಳಿಂದ ‘ನೃತ್ಯವಿಂಶತಿ ಸಂಭ್ರಮ-2024’ ಡಿ.29ರಂದು ಜೈನಭವನದಲ್ಲಿ ನಡೆಯಿತು.
ನೃತ್ಯವಿಂಶತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಉಕ್ಕಿನಡ್ಕದ ಉಕ್ಕಿನಡ್ಕಾಸ್ ಆಯುರ್ವೇದ ಆಸ್ಪತ್ರೆಯ ಡಾ. ಜಯಗೋವಿಂದ ಉಕ್ಕಿನಡ್ಕ ಮಾತನಾಡಿ, ಭಾರತದ ಪ್ರತಿಯೊಂದು ಕಲೆ ಹಾಗೂ ವಿಜ್ಞಾನಕ್ಕೆ ನಿಕಟ ನಂಟಿದೆ. ಎಲ್ಲಾ ಕಲೆಗಳು ಶಾಸೀಯ ಪ್ರಕಾರಗಳನ್ನು ಒಳಗೊಂಡಿದೆ. ನೃತ್ಯಗಳು ಕೇವಲ ನೃತ್ಯಗಳಾಗಿಯೇ ಉಳಿಯದೇ ಆರೋಗ್ಯಕ್ಕೂ ಅನುಕೂಲಕರವಾಗಿದೆ. ನೃತ್ಯಗಳಿಂದ ಸಿಗುವ ವ್ಯಾಯಾಮ, ಶಿಸ್ತು, ಅಭಿನಯ, ಚಲನೆಗಳು ನಮ್ಮ ಮನೋದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಇವು ಜೀವನದ ಪ್ರತಿ ಮಜಲುಗಳಿಗೂ ಸಹಕಾರಿಯಾಗಲಿದೆ. ನೃತ್ಯದಲ್ಲಿ ತೊಡಗಿಕೊಂಡವರು ಯಾವುದೇ ಕ್ಷೇತ್ರದಲ್ಲಿಯೂ ನೈಪುಣ್ಯತೆ ಸಾಧಿಸಲು ಸಾಧ್ಯವಾಗಿದೆ. ನೃತ್ಯೋಪಾಸನಾ ಕಲಾ ಅಕಾಡೆಮಿಯ ಶಾಲಿನಿಯವರು ಕೇವಲ ಆದಾಯಕ್ಕಾಗಿ ಸಂಸ್ಥೆಯನ್ನು ನಡೆಸದೆ ಎಲ್ಲರಿಗೂ ಪ್ರಯೋಜನವಾಗುವಂತೆ ಸೇವೆ ನೀಡುತ್ತಿದ್ದಾರೆ ಎಂದರು.
ನೃತ್ಯೋಪಾಸನಾ ಗೌರವ ಸ್ವೀಕರಿಸಿದ ಕೃಷ್ಣಾಚಾರ್ ಪಾಣೆಮಂಗಳೂರು ಮಾತನಾಡಿ, ಶಾಸೀಯ ಸಂಗೀತ ಹಾಡುತ್ತಿರುವ ನಾನು ಭರತನಾಟ್ಯದಲ್ಲೂ ಹಾಡುತ್ತಿದ್ದು ನನ್ನ ಮನೋಧರ್ಮ ಬೆಳೆದಿದೆ. ಮನಸ್ಸಿಗೆ ಬಹಳಷ್ಟು ತೃಪ್ತಿ ನೀಡಿದೆ. ನೃತ್ಯಗುರು ಶಾಲಿನಿಯವರು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಹೀಗಾಗಿ ಭರತನಾಟ್ಯದಲ್ಲಿ ಅವರು ಬಹಳಷ್ಟು ಮುಂದುವರಿದಿದ್ದಾರೆ. ವಿದ್ಯಾರ್ಥಿಗಳ ಪೋಷಕರಿಗೂ ಬಹಳಷ್ಟು ಜವಾಬ್ದಾರಿಯಿದ್ದು ಮಕ್ಕಳನ್ನು ತರಬೇತಿಗೆ ನಿರಂತರವಾಗಿ ಕಳುಹಿಸಬೇಕು. ಭರತನಾಟ್ಯದಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದರು.
ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್ ಮಾತನಾಡಿ, ಸಂಸ್ಥೆಯ ಮೂಲಕ ಪ್ರಾರಂಭಿಸಿದ ನೃತ್ಯ ಪೋಷಣ ಯೋಜನೆಯು ಈಗ ಸತ್ಪಲ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳು ವಿದ್ವತ್ ಹಂತ ತಲುಪಿದ್ದಾರೆ. ಸಂಸ್ಥೆಯ ಇಪ್ಪತ್ತು ವರ್ಷದ ಸಾಧನೆ ಹಾದಿಯಲ್ಲಿ ಪೋಷಕರ ಸಹಕಾರ ದೊರೆತಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ನೃತ್ಯ ಸರಸ್ವತಿ ಶುಭಾ ಧನಂಜಯ ಮಾತನಾಡಿ, ಭಾರತದ ಕಲೆ, ಸಂಸ್ಕೃತಿ, ಪರಂಪರೆ ಹೆಸರುವಾಸಿಯಾಗಿದೆ. ಇಲ್ಲಿರುವ ಕಲೆಯ ಪ್ರಕಾರಗಳನ್ನು ಇತರ ಯಾವ ದೇಶಗಳಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದಲ್ಲಿ ಕಲೆಯು ಗುರು-ಶಿಷ್ಯ ಪರಂಪರೆಯಿಂದ ಬೆಳೆದು ಬಂದಿದ್ದು ತನ್ನ ಸ್ಥಾನವನ್ನು ಭದ್ರಗೊಳಿಸಿದೆ. ಸಂಗೀತ, ಭರತನಾಟ್ಯಗಳಲ್ಲಿ ತೊಡಗಿಕೊಂಡ ಮಕ್ಕಳಿಗೆ ಉತ್ತಮ ಸಂಸ್ಕಾರ, ಮಾರ್ಗದರ್ಶನ ದೊರೆಯುತ್ತದೆ. ಶಿಸ್ತು, ವಿಶ್ವಾಸಗಳು ಪ್ರತಿ ಮಕ್ಕಳಲ್ಲಿಯೂ ಎದ್ದು ಕಾಣುತ್ತಿದೆ. ಒಬ್ಬ ನೃತ್ಯಗುರು ಮನಸ್ಸು ಮಾಡಿದರೆ ಯಾವ ರೀತಿ ಬೆಳೆಯಬಹುದು ಎನ್ನುವುದನ್ನು ಶಾಲಿನಿ ಆತ್ಮಭೂಷಣ್‌ರವಲ್ಲಿ ಕಾಣಬಹುದು. ಅವರು ಮಕ್ಕಳಿಗೆ ಎರಡನೇ ತಾಯಿಯಂತೆ ನೃತ್ಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹದಿಂದ ಸಂಸ್ಥೆಯು ಯಶಸ್ವಿ ಪಥದಲ್ಲಿ ಸಾಗುತ್ತಿದ್ದು ಇಲ್ಲಿ ಪ್ರತಿ ಮಗುವು ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲಿ ಎಂದು ಹೇಳಿ ಶುಭಹಾರೈಸಿದರು.
ನೃತ್ಯೋಪಾಸನಾ ಗೌರವಾರ್ಪಣೆ:
ಶಾಸೀಯ ಸಂಗೀತ ಹಾಗೂ ಭರತನಾಟ್ಯ ಹಾಡುಗಾರ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು ಅವರಿಗೆ ನೃತ್ಯೋಪಾಸನಾ ಗೌರವ ನೀಡಲಾಯಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ನೃತ್ಯ ಸರಸ್ವತಿ ಶುಭಾ ಧನಂಜಯರವರನ್ನು ಸನ್ಮಾನಿಸಲಾಯಿತು. ಶಿಷ್ಯ ವೇತನಕ್ಕೆ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳಾದ ತನುವಿ, ಸಿಂಚನಾ ಭಟ್, ತೇಜಸ್ವೀ ರಾಜ್ ಕಡಬ, ಸಹಶಿಕ್ಷಕಿಯರಾಗಿ ಸಹಕರಿಸುತ್ತಿರುವ ಪಲ್ಗುಣಿ, ರಕ್ಷಾ, ಶ್ರದ್ಧಾ, ಶ್ರೀಮಾ, ಶ್ರುತಿರಂಜಿನಿ, ತನುವಿ, ಭಾರತಿ, ಪೃಥ್ವಿಶ್ರೀ, ನೃತ್ಯ ಪೋಷಣ ಯೋಜನೆಯಲ್ಲಿ ತನುವಿ, ಲೇಖನಿ, ಸೌಜನ್ಯ ಜೆ.ವೈ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ಗುರುವಂದನೆ:
ವಿದ್ಯಾರ್ಥಿಗಳು ಸಂಸ್ಥೆಯ ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರ ಪಾದಪೂಜೆ ನೆರವೇರಿಸಿ, ಕೈಗೆ ಬಲೆ ತೊಡಿಸಿ, ಹಣೆಗೆ ತಲಕವಿಟ್ಟು, ಮಲ್ಲಿಗೆ ಮುಡಿದು, -ಲಪುಷ್ಪ ನೀಡಿ ಗುರುವಂದನೆ ಸಲ್ಲಿಸಿದರು. ವಾಟರ್ ಕೂಲರ್ ಕೊಡುಗೆ ನೀಡಿದರು.
ವಿಟ್ಲ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸೌಮ್ಯ ಸ್ವಾಗತಿಸಿದರು. ವಿವೇಕಾನಂದ ಸ್ನಾತಕೋತ್ತರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿನಿ ಮಧುರಾ ಭಟ್ ವಂದಿಸಿದರು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಗೂ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ಭರತನಾಟ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಕಣ್ಮನ ಸೆಳೆಯಿತು. ನಟುವಾಂಗದಲ್ಲಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ಕೃಷ್ಣಾಚಾರ್ ಪಾಣೆಮಂಗಳೂರು, ವಸಂತ ಕುಮಾರ ಗೋಸಾಡ, ಅಭಿಷೇಕ್ ಬಂಗೇರ, ಮೃದಂಗದಲ್ಲಿ ಗಿತೇಶ್ ನೀಲೇಶ್ವರ, ಕೊಳಲಿನಲ್ಲಿ ರಾಜ್‌ಗೋಪಾಲ್ ಕಾಂಞಗಾಡ್ ಸಹಕರಿಸಿದರು.
2004ರಲ್ಲಿ ಆರಂಭವಾದ ನೃತ್ಯೋಪಾಸನಾ ಕಲಾ ಅಕಾಡೆಮಿಯು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2023ರಲ್ಲಿ ಕಲಾ ಅಕಾಡೆಮಿಯಾಗಿ ನೋಂದಾವಣೆಯಾಗಿದೆ. ಕಳೆದ 2 ವರ್ಷಗಳ ಹಿಂದೆ ದಾಖಲೆಯ 40ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದೆ. ಈ ಒಂದು ವರ್ಷದಲ್ಲಿ ಮೂವತ್ತು ಕಾರ್ಯಕ್ರಮ ನೀಡಿದೆ. ಸಂಸ್ಥೆಯ ವಿದ್ಯಾರ್ಥಿಗಳೇ ವಿನೂತನವಾಗಿ ನೃತ್ಯಗುರುಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಸಂಸ್ಥೆಯ 3 ಮಂದಿ ವಿದ್ಯಾರ್ಥಿಗಳು ಪ್ರಥಮವಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ 20ನೇ ವರ್ಷ ನೃತ್ಯ ವಿಂಶತಿ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ನವನವೀನ ಮಾದರಿಯ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲಾಗುವುದು.
-ಆತ್ಮಭೂಷಣ್, ಸಂಸ್ಥೆಯ ನಿರ್ದೇಶಕರು