ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಈ ವರ್ಷದ ಬಜೆಟ್‌ನಲ್ಲಿ ರೂ.1 ಕೋಟಿ ಅನುದಾನ-ಅಶೋಕ್ ಕುಮಾರ್ ರೈ ಭರವಸೆ
ಪುತ್ತೂರು:ಪುತ್ತೂರು ಮತ್ತು ವಿಟ್ಲದಲ್ಲಿ ಮಂಜೂರುಗೊಂಡಿರುವ ಡಾ|ಬಿ.ಆರ್ ಅಂಬೇಡ್ಕರ್ ಭವನಕ್ಕೆ ಮತ್ತು ಪುತ್ತೂರಿನಲ್ಲಿ ವಸತಿ ಶಾಲೆಗೆ ಅನುದಾನ ಮಂಜೂರುಗೊಳಿಸಲು ವಿಳಂಬ ಮಾಡಿರುವುದಾಗಿ ಆರೋಪಿಸಿ ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ವತಿಯಿಂದ ಡಿ.30ರಂದು ಕಬಕದಿಂದ ಪುತ್ತೂರು ಶಾಸಕರ ಕಚೇರಿ ತನಕ ಜಾಥಾ ನಡೆಸಿ ಶಾಸಕರ ಕಚೇರಿಯ ಮುಂದೆ ಜಮಾಯಿಸಿ ಸರಕಾರದ ವಿರುದ್ಧ ಪ್ರತಿಭಟಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ರೂ. 1 ಕೋಟಿ ಅನುದಾನ ಮತ್ತು ಅಂಬೇಡ್ಕರ್ ವಸತಿ ಶಾಲೆಗೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿ ಪ್ರತಿಭಟನಾಕಾರರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.ಇದೇ ಸಂದರ್ಭ ದಲಿತ ಸಂಘಟನೆ ಪುತ್ತೂರು ಅಂಬೇಡ್ಕರ್ ಭವನದ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಅವರು ಮನವಿ ಮಾಡಿದರು.
ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ರೂ.1 ಕೋಟಿ ಅನುದಾನ, ವಸತಿ ಶಾಲೆ ನಿರ್ಮಾಣಕ್ಕೆ ಟೆಂಡರೂ ಆಗಿದೆ:
ದ.ಕ.ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡು ಅವರು ಮಾತನಾಡಿ, ವಿಟ್ಲದ ಅಂಬೇಡ್ಕರ್ ಭವನಕ್ಕೆ ಹೋರಾಟದ ಮೂಲಕ ಜಮೀನು ಕಾದಿರಿಸಿದ್ದೇವೆ.ಆದರೆ ಅಲ್ಲೊಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಅನುದಾನ ಕೊಡಿಸುವಂತೆ ಬಹಳ ಹಿಂದಿನಿಂದಲೇ ಮನವಿ ಸಲ್ಲಿಸುತ್ತಾ ಬಂದಿದ್ದೇವೆ.ಹಿಂದಿನ ಶಾಸಕರಿಗೂ ಮನವಿ ಸಲ್ಲಿಸಲು ಕಾಲ್ನಡಿಗೆ ಜಾಥ ಮಾಡಿದ್ದೆವು.ಅವರು ಈ ಕುರಿತು ಭರವಸೆ ನೀಡಿದ್ದರೂ ಅದು ಸಾಕಾರಗೊಂಡಿಲ್ಲ.ಈಗಿನ ಶಾಸಕರ ಮೂಲಕ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ತುರ್ತಾಗಿ ರೂ.1 ಕೋಟಿ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಅನುದಾನ ಮಂಜೂರುಗೊಂಡಿಲ್ಲ. ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಯತ್ನ ಬಹಳಷ್ಟು ಇದೆ.ಆದರೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರಲ್ಲದೆ,ಪುತ್ತೂರಿನಲ್ಲಿ ಅಂಬೇಡ್ಕರ್ ವಸತಿಯುತ ಶಾಲೆಯ ಬೇಡಿಕೆಯನ್ನೂ ಮುಂದಿಟ್ಟರು. ನಮಗೆ ತಕ್ಷಣಕ್ಕೆ ವಿಟ್ಲದ ಅಂಬೇಡ್ಕರ್ ಭವನಕ್ಕೆ ಅನುದಾನ ಒಂದು ತಿಂಗಳೊಳಗೆ ಕೊಡಿಸಬೇಕು.ಇಲ್ಲವಾದಲ್ಲಿ ಮುಂದಿನ ದಿನ ಉಪವಾಸ ಸತ್ಯಾಗ್ರಹ ಮಾಡಲೂ ಹಿಂದೆ ನೋಡುವುದಿಲ್ಲ ಎಂದವರು ತಿಳಿಸಿದರು.
ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಈ ವರ್ಷದ ಬಜೆಟ್‌ನಲ್ಲಿ ರೂ.1 ಕೋಟಿ ಅನುದಾನ:
ಕಾಲ್ನಡಿಗೆ ಜಾಥಾದ ಮೂಲಕ ಶಾಸಕರ ಕಚೇರಿಗೆ ಬಂದ ವಿಚಾರ ತಿಳಿದ ಶಾಸಕ ಅಶೋಕ್ ಕುಮಾರ್ ರೈ ಅವರು ಕಚೇರಿಯಿಂದ ಹೊರಗೆ ಬಂದು ದಲಿತ ಸೇವಾ ಸಮಿತಿಯವರ ಮನವಿ ಸ್ವೀಕರಿಸಿದರು.ನೀವು ಕಬಕದಿಂದ ಇಲ್ಲಿನ ತನಕ ಕಾಲ್ನಡಿಗೆ ಬರುತ್ತೀರೆಂದು ಮೊದಲೇ ಗೊತ್ತಿದ್ದರೆ ನಾನು ಕಬಕಕ್ಕೆ ಬಂದು ಮನವಿ ಸ್ವೀಕರಿಸುತ್ತಿದ್ದೆ.ನಾನು ಹಾಗೂ ಸೇಸಪ್ಪ ಬೆದ್ರಕಾಡು ಅವರು ಬೆಂಗಳೂರಿನಲ್ಲಿ ಹೋಗಿ ಸಚಿವ ಮಹಾದೇವಪ್ಪ ಅವರ ಮನೆಯಲ್ಲಿ ರಾತ್ರಿ ವೇಳೆ ಮನವಿ ನೀಡಿದ್ದೆವು.ಮನವಿ ಕೊಟ್ಟು 1 ವರ್ಷ ಆದ ಬಳಿಕ ಮಂತ್ರಿಗಳೇ ನನ್ನನ್ನು ಕರೆದು ರೂ.1 ಕೋಟಿ ಅನುದಾನದ ಭರವಸೆ ನೀಡಿದ್ದಾರೆ.ಅಧಿವೇಶನದಲ್ಲೂ ಈ ಕುರಿತು ಮಾತನಾಡಿದ್ದೇನೆ.ಈ ವರ್ಷದ ಬಜೆಟ್‌ನಲ್ಲಿ ರೂ. 1 ಕೋಟಿ ಅನುದಾನ ನೀಡಲಾಗುತ್ತದೆ.ಹೆಚ್ಚುವರಿ ಕಾಮಗಾರಿ ಆದ ಬಳಿಕ ಮತ್ತೆ ರೂ. 1 ಕೋಟಿ ಅನುದಾನ ಬರುತ್ತದೆ.ಇಂತಹ ಕೆಲಸ ಮಾಡಬೇಕಾಗಿರುವುದು ಶಾಸಕರಾದ ನಮ್ಮ ಜವಾಬ್ದಾರಿ.ಹಾಗಾಗಿ ಇದನ್ನು ಖಂಡಿತಾ ಮಾಡುತ್ತೇನೆ.ಇವತ್ತು ಇದಕ್ಕೆ ಮತ್ತಷ್ಟು ಶಕ್ತಿ ಕೊಡುವ ಕೆಲಸ ನಿಮ್ಮ ಜಾಥಾದ ಮೂಲಕ ಆಗಿದೆ.ನಾನು ಶಾಸಕನಾಗಿ ಆಯ್ಕೆಯಾಗಲು ನೀವು ಕೂಡ ಕಾರಣೀಭೂತರು ಹಾಗಾಗಿ ಬರುವ ವಾರ ಇನ್ನೊಮ್ಮೆ ಮಂತ್ರಿಯವರಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದರು.
ಹಾಸ್ಟೇಲ್ ಕಟ್ಟಡಕ್ಕೆ ರೂ.1 ಕೋಟಿ ಬಿಡುಗಡೆ:
ಪುತ್ತೂರಿನಲ್ಲಿ ಅಂಬೇಡ್ಕರ್ ವಸತಿ ಶಾಲೆಗೂ ರೂ.1 ಕೋಟಿ ಅನುದಾನ ಮಂಜೂರಾಗಿದೆ. ಅದಕ್ಕೆ ಟೆಂಡರು ಕೂಡಾ ಆಗಿದೆ. ಇನ್ನು ಒಂದು ವಾರದಲ್ಲಿ ಶಿಲಾನ್ಯಾಸವೂ ಆಗಲಿದೆ ಎಂದು ಹೇಳಿದ ಶಾಸಕರು, ಮುಂದೆ ಪುತ್ತೂರಿನ ಅಂಬೇಡ್ಕರ್ ಭವನಕ್ಕೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಶಾಸಕರ ಭರವಸೆಯ ಮಾತಿಗೆ ಪ್ರತಿಭಟನೆಯನ್ನು ಹಿಂಪಡೆದು ಮುಖಂಡರು, ಶಾಸಕರು ಕೊಟ್ಟ ಸಿಹಿ ತಿಂಡಿಯನ್ನು ಸ್ವೀಕರಿಸಿದರು.ದಲಿತ ಸೇವಾ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕೇಶ್ ತೆಂಕಿಲ, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಮುಗೇರ ಸಂಘದ ಅಧ್ಯಕ್ಷ ಸುಂದರ ಕೇಪುಳು, ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಬು ಮರಿಕೆ, ವಿಟ್ಲ ದಲಿತ ಸೇವಾ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ,ಕಾರ್ಯದರ್ಶಿ ಚಂದ್ರಶೇಖರ್, ಮಾರಪ್ಪ ಸುವರ್ಣ ಕೆದಿಲ, ಪರಮೇಶ್ವರ ಕೆಮ್ಮಿಂಜೆ, ಬಂಟ್ವಾಳ ಸಮಿತಿ ಮಹಿಳಾ ಅಧ್ಯಕ್ಷೆ ವಿಮಲ, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಬಾಲಕೃಷ್ಣ, ತೇಜಕುಮಾರ್, ಕೊರಗ ಸಂಘದ ಜಿಲ್ಲಾ ಉಪಾಧ್ಯಕ್ಷ ಗುರುವಪ್ಪ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಶಾಸಕರ ಬೆನ್ನ ಹಿಂದೆ ನಾವಿದ್ದೇವೆ
ವಿಟ್ಲದಲ್ಲಿ ಮತ್ತು ಪುತ್ತೂರಿನಲ್ಲಿ ಅಂಬೇಡ್ಕರ್ ಭವನ ಮತ್ತು ವಸತಿ ಶಾಲೆಗೆ ಅನುದಾನಕ್ಕಾಗಿ ಶಾಸಕರು ಸರಕಾರಕ್ಕೆ ಒತ್ತಡ ತರಬೇಕು.ನಾವು ಶಾಸಕರ ಬೆನ್ನ ಹಿಂದೆ ಇದ್ದೇವೆ.ಅವರನ್ನು ನಾವು ಓಟು ನೀಡಿ ಗೆಲ್ಲಿಸಿದ್ದೇವೆ.ಅವರ ಬೆಂಬಲಕ್ಕೆ ನಾವು ಬೆಂಗಳೂರಿಗೂ ಕಾಲ್ನಡಿಗೆ ಮಾಡಲು ಸಿದ್ದ ಎಂದು ದಲಿತ ಸೇವಾ ಸಮಿತಿ ಜಿಲ್ಲಾ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡು ಹೇಳಿದರು.
ಎಲ್ಲರ ಬಾಯಿ ಸಿಹಿ ಮಾಡಿದ ಶಾಸಕರು
ದಲಿತ ಸೇವಾ ಸಮಿತಿಯಿಂದ ಕಬಕದಿಂದ ಉರಿ ಬಿಸಿಲಿನಲ್ಲಿ ಕಾಲ್ನಡಿಗೆ ಜಾಥ ಮಾಡಿಕೊಂಡು ಬಂದಿರುವ ಎಲ್ಲರಿಗೂ ಶಾಸಕರು ಸಿಹಿ ತಿಂಡಿ ನೀಡಿದರು.ಎಲ್ಲರೂ ಕಚೇರಿಗೆ ಹೋಗಿ ನೀರು ಕುಡಿಯಿರಿ. ಮೊದಲು ನಿಮ್ಮ ಬಾಯಿ ಸಿಹಿ ಮಾಡಿಕೊಳ್ಳಿ.ನೀವು ಅಷ್ಟು ದೂರದಿಂದ ನಡೆದುಕೊಂಡು ಬರುವುದು ಮೊದಲೇ ಗೊತಿದ್ದರೆ ನಾನೇ ಅಲ್ಲಿಗೆ ಬಂದು ಮನವಿ ಸ್ವೀಕರಿಸುತ್ತಿದ್ದೆ ಎಂದರಲ್ಲದೆ,ಎಲ್ಲರೂ ಮಧ್ಯಾಹ್ನ ಇಂದಿರಾ ಕ್ಯಾಂಟೀನ್‌ಗೆ ಹೋಗಿ ನನ್ನ ಲೆಕ್ಕದಲ್ಲಿ ಊಟ ಮಾಡಿ ಎಂದರು.