ಮಸೀದಿಯಲ್ಲಿ ಉಪಚಾರ- ಆಸ್ಪತ್ರೆಗೆ ಕರೆದೊಯ್ದ ರಿಕ್ಷಾ ಚಾಲಕ
ಪುತ್ತೂರು: ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಈಶ್ವರಮಂಗಲ ಸಮೀಪದ ಮುಂಡ್ಯ ದೇವಸ್ಥಾನದ ಅರ್ಚಕರು ಗಾಯಗೊಂಡಿದ್ದು, ಕೂಡಲೇ ಹತ್ತಿರದಲ್ಲಿದ್ದ ಮಸೀದಿಯಲ್ಲಿದ್ದವರು ಅವರನ್ನು ಉಪಚರಿಸಿ, ಪ್ರಥಮ ಚಿಕಿತ್ಸೆ ನೀಡಿ ಬಳಿಕ ರಿಕ್ಷಾ ಚಾಲಕರೋರ್ವರು ಅವರನ್ನು ವೈದ್ಯರಲ್ಲಿಗೆ ಕರೆದೊಯ್ದು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ಕುಂಬ್ರದಲ್ಲಿ ನಡೆದಿದೆ.
ಕುಂಬ್ರ ಬದ್ರಿಯಾ ಮಸೀದಿ ಬಳಿ ಬುಧವಾರ ಸಂಜೆ ಅರ್ಚಕರಾದ ರಘುರಾಮ ಭಟ್ ಎಂಬವರ ಬೈಕ್ ಸ್ಕಿಡ್ ಆಗಿ ಅವರು ರಸ್ತೆಯ ಮೇಲೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಕೂಡಲೇ ಮಸೀದಿಯಲ್ಲಿದ್ದವರು ಅವರನ್ನು ಉಚಪಚರಿಸಿ, ಅಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಕಾಲಿಗೆ ಗಾಯವಾದ ಕಾರಣ ರಕ್ತ ಸೋರುತ್ತಿತ್ತು. ಕುಂಬ್ರದ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಎಂಬವರು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ತನ್ನ ರಿಕ್ಷಾದಲ್ಲಿ ಕುಂಬ್ರದ ಕ್ಲಿನಿಕ್ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಮಸೀದಿ ಕಡೆ ಬಂದ ಅರ್ಚಕರು ಸುಮಾರು ಹೊತ್ತಿನ ವರೆಗೆ ಮಸೀದಿಯಲ್ಲೇ ಮಲಗಿದ್ದರು. ರಕ್ತ ಸ್ರಾವ ಉಂಟಾದ ಕಾರಣ ಅವರು ನಿತ್ರಾಣಗೊಂಡಿದ್ದರು.
ಹೇಮನಾಥ ಶೆಟ್ಟಿಯವರಿಗೆ ಮಾಹಿತಿ
ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಸಂಜೆ 6 ಘಂಟೆಯವರೆಗೂ ಅವರು ಮಸೀದಿಯಲ್ಲೇ ಮಲಗಿದ್ದಾರೆ. ಅವರನ್ನು ಕರೆದುಕೊಂಡು ಹೋಗಲು ಯಾರೂ ಬಂದಿರಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯರಾದ ಶ್ರೀರಾಂ ಪಕ್ಕಳ ಅವರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಪಂದಿಸಿದ ಇಬ್ಬರು ನಾಯಕರು ಈಶ್ವರಮಂಗಲದಿಂದ ಕಾರಂತ ಎಂಬವರಿಗೆ ಮಾಹಿತಿ ನೀಡಿ ಅವರು ಕಾರಿನಲ್ಲಿ ಅರ್ಚಕರನ್ನು ಕರೆದುಕೊಂಡು ಹೋಗಿದ್ದಾರೆ.