ಪುತ್ತೂರು: ಮಾಜಿ ಸೈನಿಕರ ಮಕ್ಕಳಿಗೆ ವೃತ್ತಿಪರ ವ್ಯಾಸಂಗ ಸೇರಿ ಶಿಕ್ಷಣದಲ್ಲಿ ಶೇ.3ರಷ್ಟು ಮೀಸಲು ಸೌಲಭ್ಯ ಕಲ್ಪಿಸಬೇಕು ಎಂದು ಮಾಜಿ ಸೈನಿಕರ ಸಂಘದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ನಿಯೋಗ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿತು.
ಕಾನೂನು ಪ್ರಕಾರ ಮಾಜಿ ಸೈನಿಕರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲು ಒದಗಿಸುವ ಅವಕಾಶವಿದ್ದು ಜಾರಿಗೆ ತರಬೇಕು, ಜೀವನೋಪಾಯಕ್ಕೆ ಜಮೀನು ಮಂಜೂರು ಕೋರಿ 6,017 ನಿವೃತ್ತ ಸೈನಿಕರು ಅರ್ಜಿ ಸಲ್ಲಿಸಿ ದ್ದಾರೆ. ಈ ಪೈಕಿ 600 ಅರ್ಜಿದಾರರಿಗೆ ಜಮೀನು ಮಂಜೂರಾಗಿದೆ. ಉಳಿದ ಅರ್ಜಿಗಳಿಗೆ ಆದ್ಯತೆ ಮೇಲೆ ಮಂಜೂರಾತಿ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು.
ಮಾಜಿ ಸೈನಿಕರಿಗೆ ಜಮೀನು ಮಂಜೂರು ಕುರಿತು 2016ರಿಂದಲೂ ಕಾಲ ಕಾಲಕ್ಕೆ ಸರಕಾರ ಅದೇಶ ಹೊರಡಿಸುತ್ತಿದೆ. ಜಿಲ್ಲಾಮಟ್ಟದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಜಮೀನು ವರ್ಗೀಕರಣ ಸಂಬಂಧ ನಿರ್ಬಂಧನೆ 9 ಮತ್ತು 5 ಕೈ ಬಿಟ್ಟರೆ ಜಮೀನು ಮಂಜೂರು, ಅರ್ಜಿಗಳ ವಿಲೇವಾರಿ ತ್ವರಿತವಾಗಿ ಸಾಧ್ಯವಾಗಲಿದೆ. ಇದನ್ನು ನೆರವೇರಿಸಬೇಕು, ವೀರ ನಾರಿಯರು, ವೀರ ಯೋಧರಿಗೆ ಅಗತ್ಯ ಸವಲತ್ತು, ಮಾಜಿ ಸೈನಿಕರಿಗೆ ವೇತನ ಭದ್ರತೆ, ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಯೋಗ ಮನವಿ ಮಾಡಿದಾಗ ಮುಖ್ಯ ಮಂತ್ರಿಗಳು ಪೂರಕವಾಗಿ ಸ್ಪಂದಿಸಿದರು. ಆಯಾ ಇಲಾಖಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯೋಗದಲ್ಲಿ ಮಾಜಿ ಸೈನಿಕರ ಸಂಘದ ರಾಜ್ಯಾದ್ಯಕ್ಷ ಡಾ. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಚ್.ಜಿ. ಲಕ್ಷ್ಮೀಶ್, ಮಾಜಿ ಸೈನಿಕರ ಸಂಘದ ವೀರನಾರಿ ದ.ಕ. ಜಿಲ್ಲಾಧ್ಯಕ್ಷೆ ಗೀತಾ ಅಮೈ ಕಡಬ ಹಾಗೂ ವಿವಿಧ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.