ಪುತ್ತೂರು: ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಂಗಳೂರು ಘಟಕದ ಕಾರ್ಯದರ್ಶಿ ಡಾ.ಅವಿನ್ ಆಳ್ವ ಅವರಿಗೆ 2023-24ನೇ ಸಾಲಿನ ಕರ್ನಾಟಕ ರಾಜ್ಯ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಮತ್ತು ಭಾರತದ ಅತ್ಯುತ್ತಮ ಕಾರ್ಯದರ್ಶಿ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.
ಡಾ.ಅವಿನ್ ಆಳ್ವ ಅವರು 11 ತಿಂಗಳ ಅವಧಿಯಲ್ಲಿ 123 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಮಂಗಳೂರನ್ನು ಕರ್ನಾಟಕದ 180 ಐಎಂಎ ಶಾಖೆಗಳಲ್ಲಿಯೇ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದ್ದರು. ಅಲ್ಲದೇ ದೇಶಾದ್ಯಂತ ಇರುವ 3000 ಶಾಖೆಗಳ ನಡುವೆ ಮಂಗಳೂರು ಐಎಂಎ ಶಾಖೆಯನ್ನು ಅಗ್ರ ಸ್ಥಾನಕ್ಕೇರಿಸಿದ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಶ್ರೇಷ್ಠ ನಾಯಕತ್ವ, ಅಪಾರ ಸೇವಾ ಮನೋಭಾವ ಮತ್ತು ಉತ್ತಮ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ಐಎಂಎ ಕರ್ನಾಟಕ ರಾಜ್ಯ ಮಂಡಳಿ ಮತ್ತು ನವ ದೆಹಲಿಯ ಕೇಂದ್ರ ಕಚೇರಿಯ ಪ್ರಕಟಣೆ ತಿಳಿಸಿದೆ.
ಡಾ.ಅವಿನ್ ಆಳ್ವ ಅವರು ಮಂಗಳೂರಿನ ಕೆ.ಎಸ್.ಹೆಗ್ಡೆ ಕಾಲೇಜಿನ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಹಾಗೂ ಸಹಾಯಕ ಪ್ರೋಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ.ಅವಿನ್ ಆಳ್ವ ಅವರು ಶ್ರೀ ರಾಮಕುಂಜೇಶ್ವರ ವಸತಿ ನಿಲಯದ ಆರಂಭದ ಎರಡು ವರ್ಷ ವಸತಿ ನಿಲಯದಲ್ಲಿ ಉಳಿದುಕೊಂಡು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು.