ಪುತ್ತೂರು: ಸಿರಿ ಕಡಮಜಲು ಕೃಷಿ ಕ್ಷೇತ್ರದಲ್ಲಿ ಜ.18 ರಂದು ಬೃಹದಾಕಾರದ ಕಾಡುಕೋಣ ಕಾಣಿಸಿಕೊಂಡಿದ್ದು, ಆತಂಕವನ್ನು ಸೃಷ್ಟಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಗೇರುತೋಟವನ್ನು ಪ್ರವೇಶಿಸಿದ ಕಾಡುಕೋಣ ಬಳಿಕ ಅಡಿಕೆ ತೋಟ, ರಬ್ಬರ್ ತೋಟವನ್ನು ಪ್ರವೇಶಿಸಿ ಆಚೆಯಿಂದಿಚೆಗೆ ಓಡಾಡ ತೊಡಗಿದೆ. ಕಾಡುಕೋಣವನ್ನು ಗಮನಿಸಿದ ಕೆಲಸಗಾರರು ಆತಂಕಗೊಂಡು ಅದನ್ನು ಓಡಿಸಲು ಪ್ರಯತ್ನಿಸಿದ್ದು, ಈ ವೇಳೆ ಸನ್ಯಾಸಿಗುಡ್ಡೆ ಶಾಲಾ ಆವರಣ ಪ್ರವೇಶಿಸಿದ ಕಾಡುಕೋಣ ಬಳಿಕ ಅಲ್ಲೆಯೇ ಸಮೀಪದ ತೋಟಗಳಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.
ಕಾಡುಪ್ರಾಣಿ, ಹಂದಿಗಳ ಉಪಟಳದಿಂದ ಕಂಗೆಟ್ಟ ರೈತರಿಗೆ ಇದೀಗ ಕಾಡುಕೋಣ ಕಾಣಿಸಿಕೊಂಡಿರುವುದರಿಂದ ಮತ್ತೆ ಆತಂಕ ಹೆಚ್ಚಾಗಿದೆ ಎಂದು ಕಡಮಜಲು ಸುಭಾಸ್ ರೈ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.