ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಕೈಬಿಡಬೇಕು. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ, ಕೃಷಿ ಭೂಮಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕೆಂದು ಆಗ್ರಹಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಜ.21ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಗೇಟ್ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗುವ ಮೂಲಕ ಅರಣ್ಯ ಇಲಾಖೆಯು ರೈತರ ಬದುಕುವ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಕೊರೋನಾ ಕಾಲಘಟ್ಟದಲ್ಲೂ ಕಂಗೆಡದ ರೈತ ಈಗ ಅರಣ್ಯಾಧಿಕಾರಿಗಳು ನೀಡುವ ಉಪಟಳದಿಂದ ತಮ್ಮ ಸ್ವಾವಲಂಬಿ ಬದುಕನ್ನು ಕಳೆದುಕೊಂಡು ಧೃತಿಗೆಡುವಂತಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಸರ್ವೇ ಮಾಡದ್ದರಿಂದ ಬೈಂದೂರು ಸೆಷನ್ಸ್ ಕೋರ್ಟ್, ಐತ್ತೂರು ಗ್ರಾ.ಪಂ., ಧರ್ಮಸ್ಥಳ ಪೊಲೀಸ್ ಠಾಣೆ ಹೀಗೆ ಅದೆಷ್ಟೋ ಸಾರ್ವಜನಿಕ ಕಚೇರಿಗಳು, ಜನವಸತಿ ಪ್ರದೇಶಗಳು ಪರಿಭಾವಿತ ಅರಣ್ಯ ಪ್ರದೇಶದೊಳಗೆ ಬರುವಂತಾಗಿದೆ. ಹಕ್ಕು ಪತ್ರವಿದ್ದರೂ ರೈತರ ಜಾಗಗಳು ಪ್ಲಾಟಿಂಗ್ ನಡೆಸಲು, ಮನೆ ಕಟ್ಟಲು ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯೆಂಬುದು ಅರಣ್ಯದಂಚಿನ ರೈತರ ತಲೆಯ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ ಎಂದರು.
ಕೃಷಿಕ ಮತ್ತು ಅರಣ್ಯದ ನಡುವೆ ಅವಿನಾಭವ ಸಂಬಂಧವಿದ್ದು, ರೈತನಿಂದ ಅರಣ್ಯ ನಾಶವಾಗಲ್ಲ. ಎತ್ತಿನ ಹೊಳೆ ಯೋಜನೆ, ಜಲವಿದ್ಯುತ್ ಯೋಜನೆಗಳಿಂದ ನೂರಾರು ಎಕರೆ ಅರಣ್ಯ ನಾಶವಾಗುತ್ತಿದ್ದರೂ, ಈ ಬಗ್ಗೆ ಮೌನವಹಿಸಿರುವ ಸರಕಾರಗಳು ನಮ್ಮ ಹಿರಿಯರು ಮಾಡಿದ ಜಮೀನಿನಲ್ಲಿ ನಮಗೇಕೆ ಬದುಕುವ ಹಕ್ಕನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸರಕಾರವು ಪಶ್ಚಿಮ ಘಟ್ಟದ ಸರ್ವೇ ನಡೆಸಿ ಗಡಿಗುರುತು ಹಾಕಿ 0 ಬಫರ್ ಝೋನ್ ಮಾಡಿ ಅಲ್ಲಿರುವ ಜನವಸತಿ ಪ್ರದೇಶವನ್ನು ಪತ್ರೇಕಿಸಬೇಕು. ರೈತರ ಸ್ವಾಧೀನ ಇರುವ ಕೃಷಿ ಭೂಮಿಗಳಿಗೆ ಹಕ್ಕು ಪತ್ರ ನೀಡಬೇಕು. ಪರಿಭಾವಿತ ಅರಣ್ಯದಡಿ ಸೇರಿಸಿರುವ ಕಂದಾಯ ಸರ್ವೇ ನಂಬರ್‌ಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು. ಪ್ಲಾಟಿಂಗ್ ಆಗದ ಹಕ್ಕುಪತ್ರಗಳಿಗೆ ಅಥವಾ ಸರ್ವೇ ನಂಬರ್‌ಗಳಿಗೆ ತಕ್ಷಣ ಪ್ಲಾಟಿಂಗ್ ಆಗುವ ರೀತಿಯಲ್ಲಿ ಅನುಮತಿ ನೀಡಬೇಕು. ನಮ್ಮ ಬದುಕುವ ಹಕ್ಕಿಗಾಗಿ ನಾವೀಗ ಕಾನೂನು ಚೌಕಟ್ಟಿನಡಿಯಲ್ಲಿ ಹೋರಾಟ ನಡೆಸುತ್ತಿದ್ದು, ರೈತರು ದಂಗೆ ಏಳುವ ಮುನ್ನ ಈ ವರದಿಯನ್ನು ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಲಹೆಗಾರ ಸೈಯ್ಯದ್ ಮೀರಾ ಸಾಹೇಬ್ ಕಡಬ ಮಾತನಾಡಿ, ಕೇಂದ್ರ ಪರಿಸರ ಇಲಾಖೆಯು ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅನೇಕ ಬಾರಿ ಅಭಿಪ್ರಾಯ ಕೇಳಿದಾಗ ಪಕ್ಷಾತೀತವಾಗಿ ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ಬೇಡ ಎಂದು ಅಭಿಪ್ರಾಯ ಮಂಡಿಸಿದೆ. ಆದರೂ ವರದಿಯ ಅಭಿಪ್ರಾಯಕ್ಕೆ ಕೇಂದ್ರ ಪರಿಸರ ಇಲಾಖೆಯು ಕಳುಹಿಸುತ್ತಾ ಇದೆ. ಆದ್ದರಿಂದ ಕೇರಳ ರಾಜ್ಯದಲ್ಲಿ ಮಾಡಿದಂತೆ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಜನರ ಬದುಕೇ ನಾಶವಾಗುವ ಸಂಭವವಿದೆ. ಆನೆ ದಾಳಿ ಇತರೆ ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗದಂತೆ ಅರಣ್ಯ ಇಲಾಖೆ ನಿಗಾವಹಿಸಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು. ಪಶ್ಚಿಮಘಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮಘಟ್ಟ ಪ್ರದೇಶದ ಗ್ರಾ.ಪಂ.ಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ, ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಬಳಿಕ ಈ ಬಗ್ಗೆ ಮನವಿಯನ್ನು ಪ್ರತಿಭಟನಕಾರರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಟಿ. ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಲಹೆಗಾರರಾದ ಪ್ರಮೋದ್ ಕಳೆಂಜ, ಪ್ರಸನ್ನ ಕಳೆಂಜ, ಧನಂಜಯ, ನಿತ್ಯಾನಂದ ರೈ, ಹರೀಶ್ ಕೆ.ಬಿ., ರಾಮಣ್ಣ ಗೌಡ, ನೋಣಯ್ಯ ಗೌಡ, ಕೃಷ್ಣಪ್ಪ ಗೌಡ, ರಮೇಶ್ ಶಿಬಾಜೆ, ಬಾಲಕೃಷ್ಣ ಶಿಬಾಜೆ, ಜಾರ್ಜ್, ಪ್ರಶಾಂತ್, ಜಾನ್ಸನ್ ಹಾಗೂ ಶಿಶಿಲ, ಕಳೆಂಜ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ, ಶಿರಾಡಿ, ರೆಖ್ಯ ಗ್ರಾಮವಾಸಿಗಳು ಉಪಸ್ಥಿತರಿದ್ದರು.