ಒಳಮೊಗ್ರು ಗ್ರಾಪಂ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ- ಕುಂಬ್ರ ಜಂಕ್ಷನ್‌ನಲ್ಲಿ ಉದ್ಘಾಟನೆ, 70ಕ್ಕೂ ಅಧಿಕ ಮಂದಿ ಭಾಗಿ

0

ಪುತ್ತೂರು: ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಜಿಲ್ಲಾ ನೆರವು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಒಳಮೊಗ್ರು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಜ.22 ರಿಂದ 31ರ ತನಕ ನಡೆಯುವ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಜ.22 ರಂದು ಕುಂಬ್ರ ಜಂಕ್ಷನ್‌ನಲ್ಲಿ ಚಾಲನೆ ನೀಡಲಾಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ, ಸ್ವಚ್ಚ ಪುತ್ತೂರು ತಾಲೂಕು ಮಾಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಶ್ರಮದಾನವು 10 ದಿನಗಳ ಕಾಲ ನಡೆಯಲಿದೆ. ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಹಕಾರವನ್ನು ನೀಡುವ ಮೂಲಕ ಸ್ವಚ್ಚ ಗ್ರಾಮವನ್ನಾಗಿ ಮಾಡುವಂತೆ ಕೇಳಿಕೊಂಡರು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರು ಮಾತನಾಡಿ, 10 ದಿನಗಳ ಕಾಲ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುವ ಸ್ವಚ್ಚತಾ ಶ್ರಮದಾನದಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಗ್ರಾಮವನ್ನು ತಾಲೂಕಿಗೆ ಮಾದರಿ ಸ್ವಚ್ಛ ಗ್ರಾಮವನ್ನಾಗಿ ಮಾಡುವಂತೆ ಕೇಳಿಕೊಂಡರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಮಾತನಾಡಿ, ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿಯಾಗಬೇಕಾದರೆ ನಾವೆಲ್ಲರೂ ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡುವಂತೆ ಕೇಳಿಕೊಂಡರು. ಸ್ವಚ್ಛತಾ ಶ್ರಮದಾನದಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆಯಲ್ಲಿ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್‌ನ ಕಾಲೇಜು ವಿದ್ಯಾರ್ಥಿಗಳು ಬಹಳ ಹುಮ್ಮಸ್ಸಿನಿಂದ ಪಾಲ್ಗೊಂಡು ಸ್ವಚ್ಛತೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜಯಂತಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದ್ದರು. ಜ.23 ರಂದು ಬೆಳಿಗ್ಗೆ 7.30ಕ್ಕೆ ಪರ್ಪುಂಜದಿಂದ ಕುಟ್ಟಿನೋಪಿನಡ್ಕ ತನಕ ಸ್ವಚ್ಚತಾ ಶ್ರಮದಾನ ನಡೆಯಲಿದೆ.


70ಕ್ಕೂ ಅಧಿಕ ಮಂದಿ ಭಾಗಿ
ಸ್ವಚ್ಚ ಸಂಸ್ಕೃತಿ ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ 10 ದಿನಗಳ ಕಾಲ ನಡೆಯುವ ಸ್ವಚ್ಛತಾ ಶ್ರಮದಾನದ ಮೊದಲ ದಿನ ಸುಮಾರು 70ಕ್ಕೂ ಅಧಿಕ ಮಂದಿ ಭಾಗವಹಿಸಿದರು. ಕುಂಬ್ರ ಜಂಕ್ಷನ್ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು. ವಿಶೇಷವಾಗಿ ಗ್ರಾಪಂ ಸದಸ್ಯರುಗಳು, ಕುಂಬ್ರ ವರ್ತಕರ ಸಂಘ, ಸಂಜೀವಿನಿ ಒಕ್ಕೂಟ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕುಂಬ್ರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಪಂದನಾ ಸೇವಾ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಉಪಹಾರದ ವ್ಯವಸ್ಥೆಯನ್ನು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮಾಡಲಾಗಿತ್ತು.



ಪೊರಕೆ ಹಿಡಿದು ಕಸ ಗುಡಿಸಿದ ತಾಪಂ ಕಾರ್ಯನಿರ್ವಾಹಣಾಧಿಕಾರಿ
ಬೆಳಿಗ್ಗೆ 2.30 ಗಂಟೆಗಳ ಕಾಲ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಒಳಮೊಗ್ರು ಗ್ರಾಪಂ ನೋಡೆಲ್ ಅಧಿಕಾರಿಯಾಗಿರುವ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರು ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಗ್ರಾಮ ಆಡಳಿತ ಅಧಿಕಾರಿ ಸುಮನ್, ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೇ ಗ್ರಾಪಂ ಸದಸ್ಯರುಗಳು ಸೇರಿದಂತೆ ಅಧಿಕಾರಿ ವರ್ಗದವರು ಕೂಡ ಸ್ವಚ್ಚತೆಯಲ್ಲಿ ಪಾಲ್ಗೊಂಡು ಮಾದರಿಯಾದರು.


“ಮೊದಲ ದಿನವೇ ಬಹಳಷ್ಟು ಮಂದಿ ಉತ್ತಮ ರೀತಿಯಲ್ಲಿ ಸ್ಪಂದನೆ ಕೊಡುವ ಮೂಲಕ ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿ ಸ್ವಚ್ಛತೆ ಮಾಡಿದ್ದಾರೆ. ಸ್ವಚ್ಚತೆಯಲ್ಲಿ ಕೈಜೋಡಿಸಿದ ಸರ್ವರಿಗೂ ಹಾಗೇ ಉಪಹಾರ ನೀಡಿದ ಕುಂಬ್ರ ಕೃಷಿ ಪತ್ತಿನ ಸಂಘಕ್ಕೆ ಹಾಗೇ ಸಹಕರಿಸಿದ ಪ್ರತಿಯೊಬ್ಬರಿಗೂ ಗ್ರಾಪಂ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತಾ, ಸ್ವಚ್ಚ ಗ್ರಾಮವನ್ನಾಗಿಸಲು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ. ”

  • ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾ.ಪಂ

LEAVE A REPLY

Please enter your comment!
Please enter your name here