ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ತೃತೀಯ ಪ್ರತಿಷ್ಠಾ ವರ್ಧಂತಿ

0

ಸಂಭ್ರಮದ ‘ಎಲಿಯ ಜಾತ್ರೆ’-ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ

ಪುತ್ತೂರು: ಹಾಲು ಪಾಯಸದಂತಹ ಹರಕೆಗೆ ಭಕ್ತರಿಗೆ ಒಲಿಯುವ, ತನ್ನನ್ನು ಭಕ್ತಿಯಿಂದ ಪ್ರಾರ್ಥಿಸುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವೆ ಗ್ರಾಮದ ಎಲಿಯದಲ್ಲಿ ನೆಲೆಯಾಗಿರುವ ಶ್ರೀ ವಿಷ್ಣುಮೂರ್ತಿ ದೇವರ ತೃತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವ ‘ಎಲಿಯ ಜಾತ್ರೆ’ಯು ಫೆ.06 ರಂದು ಭಕ್ತಿ ಸಂಭ್ರಮದಿಂದ ಜರಗಿತು.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮಗಳು ಜರಗಿತು. ದೇವಳದ ಪ್ರಧಾನ ಅರ್ಚಕ ಎಲಿಯ ನಾಗೇಶ ಕಣ್ಣಾರಾಯರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಾವಿರಾರು ಭಕ್ತಾಧಿಗಳು ದೇವರ ಗಂಧ ಪ್ರಸಾದದೊಂದಿಗೆ ಅನ್ನ ಪ್ರಸಾದ ಸ್ವೀಕರಿಸಿದರು.


ಫೆ.6 ರಂದು ಬೆಳಿಗ್ಗೆ 3 ಕಾಯಿ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಸಾನಿಧ್ಯ ಕಲಶಾಭಿಷೇಕ ಮತ್ತು ದೇವಳದ ನಾಗಬನದಲ್ಲಿ ನಾಗತಂಬಿಲ ಸೇವೆ ನಡೆದು ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೇವರಿಗೆ ಮಹಾಪೂಜೆ ನಡೆಯಿತು. ನೂರಾರು ಭಕ್ತರು ಮಹಾಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಮಹಾಪೂಜೆಯ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ, ಶ್ರೀ ಭೂತ ಬಲಿ, ಸೇವಾ ಸುತ್ತುಗಳು, ನೃತ್ಯಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ ನಡೆಯಿತು. ಈ ಸಂದರ್ಭದಲ್ಲಿ ಊರಪರವೂರು ನೂರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು. ಬಳಿಕ ಮಂತ್ರಾಕ್ಷತೆ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಗೌರವಾಧ್ಯಕ್ಷರುಗಳು, ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳು ಹಾಗೇ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರುಗಳು, ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮದ ಸಮಸ್ತ ಭಕ್ತಾಧಿಗಳು ಉಪಸ್ಥಿತರಿದ್ದರು.


ಆರೋಗ್ಯ, ಸಂತಾನ ಭಾಗ್ಯದಾಯಕ ಶ್ರೀವಿಷ್ಣು
ಎಲಿಯದಲ್ಲಿ ನೆಲೆನಿಂತಿರುವ ಶ್ರೀ ವಿಷ್ಣು ಆರೋಗ್ಯ ಭಾಗ್ಯ ಮತ್ತು ಸಂತಾನ ಭಾಗ್ಯದಾಯಕ ದೇವರು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಆರೋಗ್ಯ ಮತ್ತು ಸಂತಾನದ ವಿಷಯದಲ್ಲಿ ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಶ್ರೀ ವಿಷ್ಣುವಿಗೆ ಪ್ರಿಯವಾದ ‘ಹಾಲು ಪಾಯಸ’ಸೇವೆಯೇ ಇಲ್ಲಿ ಪ್ರಧಾನ ಸೇವೆಯಾಗಿದೆ. ಅಷ್ಟಮಂಗಲದಲ್ಲಿ 8 ಗ್ರಾಮಕ್ಕೆ ಸಂಬಂಧಿಸಿದ ದೇವಸ್ಥಾನ ಎಂದು ತಿಳಿದು ಬಂದಿದ್ದರೂ ಇದೀಗ ಸರ್ವೆ, ಮುಂಡೂರು, ಕೆದಂಬಾಡಿ ಮತ್ತು ಕೆಯ್ಯೂರು ಈ 4 ಗ್ರಾಮಗಳನ್ನು ಮಾತ್ರ ಸೇರಿಸಿಕೊಳ್ಳಲಾಗಿದೆ. ದೇವಳದಲ್ಲಿ ಶ್ರೀ ವಿಷ್ಣು ಮಾತ್ರ ಇದ್ದು ಯಾವುದೇ ಉಪ ದೇವರುಗಳ ಇಲ್ಲ. ಈ ದೇವಸ್ಥಾನವು ಸುಮಾರು 2.5 ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಪುನರ್ ನಿರ್ಮಾಣಗೊಂಡಿದೆ.

LEAVE A REPLY

Please enter your comment!
Please enter your name here